ಬೆಂಗಳೂರು: ನಗರದಲ್ಲಿನ ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕಲು ಪಾಲಿಕೆ ಜಾರಿಗೊಳಿಸಲು ಸಿದ್ಧಪಡಿಸಿರುವ ಜಾಹೀರಾತು ಬೈಲಾ-2018ಕ್ಕೆ ದೆಹಲಿ ಜಾಹೀರಾತು ಉಪವಿಧಿಗಳಲ್ಲಿನ ಅಂಶಗಳನ್ನು ಸೇರಿಸಿ, ಮಾ.26ರಂದು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರ ಬಿಬಿಎಂಪಿಗೆ ತಿಳಿಸಿದೆ.
ನಗರದಲ್ಲಿ ಜಾಹೀರಾತು ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಿದ ಬಳಿಕ ಹೊಸದಾಗಿ ರೂಪಿಸಿರುವ “ಔಡ್‌ಡೋರ್ ಸೈಜೇಜ್ ಆಂಡ್ ಪಬ್ಲಿಕ್ ಮೆಸೆಜಿಂಗ್ ಬೈಲಾ 2018′ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದರಂತೆ ಬೈಲಾಗಳಿಗೆ ದೆಹಲಿಯ ಜಾಹೀರಾತು ಉಪವಿಧಿಗಳಲ್ಲಿನ ಅಂಶಗಳನ್ನು ಸೇರಿಸಿ ಮಾ.26ರಂದು ನಡೆಯುವ ಸಭೆಯ ಮುಂದೆ ಅನುಮೋದನೆಗೆ ಮಂಡಿಸುವಂತೆ ಉಪಮುಖ್ಯಮಂತ್ರಿಗಳು ಪಾಲಿಕೆಗೆ ಸೂಚಿಸಿದ್ದಾರೆ.
ಹೈಕೋರ್ಟ್ ಸೂಚನೆ ಮೇರೆಗೆ ಪಾಲಿಕೆಯಿಂದ ಜಾರಿಗೊಳಿಸುತ್ತಿರುವ ಹೊಸ ಜಾಹೀರಾತು ನೀತಿ ಹಾಗೂ ಉಪವಿಧಿಗಳ ಕುರಿತು ಮಾ.20ರಂದು ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಹೈಕೋರ್ಟ್ ಸೂಚನೆ ಹಾಗೂ ನಗರದ ಅಂದ ಉಳಿಸುವ ಕ್ರಮಗಳನ್ನು ಬೈಲಾದಲ್ಲಿ ಸೇರಿಸುವಂತೆ ಪರಮೇಶ್ವರ್ ಸೂಚಿಸಿದ್ದಾರೆ. ಜತೆಗೆ ದೆಹಲಿಯ ಬೈಲಾಗಳನ್ನು ಅಳವಡಿಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಅದರಂತೆ ವಾಸ ಸ್ಥಳಗಳಲ್ಲಿ ವಾಣಿಜ್ಯ ಜಾಹೀರಾತುಗಳಿಗೆ ಅವಕಾಶ ನಿರ್ಬಂಧಿಸುವುದು, ಸುಪ್ರೀಂಕೋರ್ಟ್ ಆದೇಶದಂತೆ ದೆಹಲಿಯಲ್ಲಿ ಜಾರಿಗೆ ತರಲಾಗಿರುವ ಬೈಲಾದಲ್ಲಿನ ಅಂಶಗಳನ್ನು ಬಿಬಿಎಂಪಿ ಬೈಲಾದಲ್ಲೂ ಅಳವಡಿಸುವುದು, ವಾಣಿಜ್ಯ ಪ್ರದೇಶ, ಕೈಗಾರಿಕಾ ಪ್ರದೇಶ, ಬಸ್, ಮೆಟ್ರೋ, ವಿಮಾನ ನಿಲ್ದಾಣ, ಚಲನಚಿತ್ರ ಮಂದಿರ ಸೇರಿ ಇನ್ನಿತರ ಕಡೆ ಜಾಹೀರಾತು ಅಳವಡಿಕೆಗೆ ಅವಕಾಶ ನೀಡುವುದು ಸೇರಿ ಇನ್ನಿತರ ಅಂಶಗಳನ್ನು ಸೇರಿಸಿ ಬೈಲಾಗಳನ್ನು ಪರಿಷ್ಕರಿಸುವಂತೆ ಪರಮೇಶ್ವರ ಅವರು ಸೂಚಿಸಿದ್ದಾರೆ.
ನಗರದ ಸೌಂದರ್ಯ ಹೆಚ್ಚಿಸುವ ಜತೆಗೆ ಪಾಲಿಕೆಗೆ ಆದಾಯವೂ ಬರುವಂತೆ ಜಾಹೀರಾತು ಬೈಲಾಗಳನ್ನು ರೂಪಿಸಲಾಗಿದೆ. ದೆಹಲಿಯ ಬೈಲಾಗಳಲ್ಲಿನ ಕೆಲವೊಂದು ಅಂಶಗಳನ್ನು ಸೇರಿಸಿಕೊಳ್ಳುವಂತೆ ಉಪಮುಖ್ಯಮಂತ್ರಿಗಳು ತಿಳಿಸಿದ್ದು, ಬೈಲಾಗಳನ್ನು ಪರಿಷ್ಕರಿಸಲಾಗುತ್ತಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ