Advertisement

ಕಲಿಕಾ ನ್ಯೂನತೆ ಮಕ್ಕಳಿಗೆ ಸೂಕ್ತ ತರಬೇತಿ ಅತ್ಯಗತ್ಯ

12:29 PM Jan 09, 2017 | |

ದಾವಣಗೆರೆ: ಕಲಿಕಾ ನ್ಯೂನತೆ ಇರುವಂತಹ ಮಕ್ಕಳಿಗೆ ಸಕಾಲದಲ್ಲಿ ಸೂಕ್ತ ತರಬೇತಿ ನೀಡುವ ಮೂಲಕ ಇತರರಂತೆ ರೂಪಿಸಬಹುದು ಎಂದು ದಾವಣಗೆರೆ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಚಿಕಿತ್ಸಕ ಮನಃಶಾಸ್ತ್ರಜ್ಞೆ ಡಾ| ಎಚ್‌.ಎನ್‌. ಆಶಾ ತಿಳಿಸಿದ್ದಾರೆ. 

Advertisement

ಭಾನುವಾರ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಸಂವೇದ ವಿಶೇಷ ಶಾಲೆ ಪೋಷಕರ ಸಭೆ ಮತ್ತು ಮುಕ್ತ ಸಮಾಲೋಚನೆಯಲ್ಲಿ ಮಾತನಾಡಿದ ಅವರು, ಎಲ್ಲ ರೀತಿಯ ಸೌಲಭ್ಯಗಳ ನಡುವೆಯೂ ಮಕ್ಕಳು ಓದು, ಬರಹದಲ್ಲಿ ಆಸಕ್ತಿ ತೋರದೇ ಇರುವುದು, ಹಿಂದುಳಿಯುವುದು ಸೋಮಾರಿತನ ಅಲ್ಲ.

ಅದು ಕಲಿಕಾ ನ್ಯೂನತೆ. ಅಂತಹ ಮಕ್ಕಳಿಗೆ ಸರಿಯಾದ ವೇಳೆ ಸೂಕ್ತ ತರಬೇತಿ ಕೊಡಿಸಿದಲ್ಲಿ ಎಲ್ಲರಂತೆ ಬುದ್ಧಿವಂತರಾಗುತ್ತಾರೆ ಎಂದರು. ಯಾವ ಮಕ್ಕಳು ಓದು, ಬರಹದ ಜೊತೆಗೆ ಮಾತು ಕಲಿಯುವುದು, ಮಾತನಾಡುವುದರಲ್ಲಿ ಹಿಂದೆ ಬೀಳುವುದು. ಬೇರೆಯವರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಕಷ್ಟಪಡುವುದು ಕಲಿಕಾ ನ್ಯೂನತೆ.

ಕೆಲವರು ಅದನ್ನು ಮಕ್ಕಳ ಸೋಮಾರಿತನ ಎಂದು ಭಾವಿಸುತ್ತಾರೆ. ಸೋಮಾರಿತನ ಎಂದು ಸುಮ್ಮನಿರದೆ ಸಕಾಲದಲ್ಲಿ ಮನೋಶಾಸ್ತ್ರಜ್ಞರ ಬಳಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು. ಕಲಿಕಾ ನ್ಯೂನತೆ ಹೊಂದಿರುವಂತಹ ಮಕ್ಕಳಲ್ಲಿ ಇತರೆ ಮಕ್ಕಳಗಿಂತಲೂ ಹೆಚ್ಚಿನ ಬುದ್ಧಿಶಕ್ತಿ ಇರುತ್ತದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಒಳಗೊಂಡಂತೆ ಎಲ್ಲಾ ಸೌಲಭ್ಯ ಇರುತ್ತವೆ. 

ಆದರೂ ಕಲಿಯುವಿಕೆಯಲ್ಲಿ ಹಿಂದೆ ಬೀಳುತ್ತಾರೆ. ಅದನ್ನು ಪೋಷಕರು ಗುರುತಿಸಿ, ಸರಿ ಹಾದಿಯಲ್ಲಿ ತರುವಂತಹ ಪ್ರಯತ್ನ ಮಾಡಬೇಕು. ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು. ಸಂವೇದ ತರಬೇತಿ ಹಾಗೂ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ| ಸುರೇಂದ್ರನಾಥ್‌ ಪಿ. ನಿಶಾನಿಮ ಮಾತನಾಡಿ, ಪೋಷಕರು, ಶಿಕ್ಷಕರು ಮಕ್ಕಳಲ್ಲಿನ ಕಲಿಕಾ ನ್ಯೂನತೆಯನ್ನು ಗಮನಿಸಿ, ಸೂಕ್ತ ತರಬೇತಿ ನೀಡುವಂತಾಗಬೇಕು. 

Advertisement

ಇತರೆ ಎಲ್ಲಾ ಚಟುವಟಿಕೆಯಲ್ಲಿ ಚುರುಕುಮತಿಗಳಾಗಿರುವ ಮಕ್ಕಳು ಕಲಿಕೆಯಲ್ಲಿ ಮಾತ್ರ ಯಾವುದೇ ರೀತಿಯ ಆಸಕ್ತಿ ತೋರುವುದೇ ಇಲ್ಲ. ಓದು, ಬರಹ, ಹೋಂ ವರ್ಕ್‌ ಮಾಡುವುದರಿಂದ ತಪ್ಪಿಸಿಕೊಳ್ಳುವುದಕ್ಕೆ ಇನ್ನಿಲ್ಲದ ಹಾದಿ ಕಂಡುಕೊಳ್ಳುತ್ತಾರೆ. ಶಿಕ್ಷಕರಿಗೆ ಅಚ್ಚರಿಯಾಗುವಂತಹ ಕಾರಣ, ನೆಪ ಹೇಳುತ್ತಾರೆ.

ತಮ್ಮ ಬುದ್ಧಿವಂತಿಕೆಯನ್ನು ಇಂತಹ ಕೆಲಸಕ್ಕೆ ಬಳಸುವ ಮಕ್ಕಳನ್ನು ಸಕಾಲಕದಲ್ಲಿ ಸರಿ ದಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಮುಂದೆ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳಿಗೆ ತರಬೇತಿ ನೀಡಿದಾಗ ಸಾಮಾನ್ಯ ಮಕ್ಕಳಂತೆ ಆಗುತ್ತಾರೆ.

ಆದರೆ, ಪೋಷಕರಿಗೆ ತಾಳ್ಮೆ, ಸಂಶೋಧನಾ ಆಧಾರಿತ ತರಬೇತಿ ಜೊತೆಗೆ ಖುಷಿಯಿಂದ ಕೆಲಸ ಮಾಡುವ ಶಿಕ್ಷಕ ವರ್ಗ ಬೇಕು. ಸಾಮಾನ್ಯ ಶಾಲೆಗಳಂತೆ ಹೆದರಿಕೆ, ಬೆದರಿಕೆ, ಹೊಡೆಯುವುದು, ಬೈಯುವುದರಿಂದ ಕಲಿಕಾ ನ್ಯೂನತೆ ಮಕ್ಕಳನ್ನು ತಿದ್ದಲಿಕ್ಕೆ ಸಾಧ್ಯವಿಲ್ಲ. ಬದಲಿಗೆ ಯಾವ ಕಾರಣಕ್ಕೆ ಆಸಕ್ತಿ ತೋರುತಿಲ್ಲ. 

ಯಾವ ಹಂತದಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಅದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಗಮನ ನೀಡಿ, ಅದರಂತೆ ತರಬೇತಿ ನೀಡಬೇಕಾಗುತ್ತದೆ. ಈ ರೀತಿ ತರಬೇತಿ ಪಡೆದ ಮಕ್ಕಳು ಅನೇಕರು ಉತ್ತಮ ಸ್ಥಾನಮಾನದಲ್ಲಿದ್ದಾರೆ ಎಂದು ತಿಳಿಸಿದರು. ಡಾ| ರಾಜೀವ್‌ಸ್ವಾಮಿ, ಡಾ| ಜಿ. ಜಯರಾಮ್‌ ಇತರರು ಇದ್ದರು. ಬಿ. ಪಂಚಪ್ಪ ಸ್ವಾಗತಿಸಿದರು. ಎಸ್‌. ನಾಗರಾಜ್‌ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next