Advertisement

ವಿಧಾನ-ಕದನ 2023: ಬಂಡಾಯ ಶಮನಕ್ಕೆ ಕೊನೇ ಕಸರತ್ತು

10:15 PM Apr 21, 2023 | Team Udayavani |

ವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್‌ ಪಕ್ಷದಲ್ಲಿ ಕೆಲವೆಡೆ ಅಸಮಾಧಾನ ಭುಗಿಲೆದ್ದಿದ್ದು ಅಭ್ಯರ್ಥಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ನಡುವೆ ಅದರ ಲಾಭ ಪಡೆಯಲು ಜೆಡಿಎಸ್‌ ಪ್ರಯತ್ನಿಸಿರುವುದಂತೂ ಸುಳ್ಳಲ್ಲ. ಬಿಜೆಪಿಯಲ್ಲಿ ಟಿಕೆಟ್‌ ಸಿಗದವರು ಕಾಂಗ್ರೆಸ್‌ಗೆ, ಕಾಂಗ್ರೆಸ್‌ನಿಂದ ಬಿಜೆಪಿಗೆ, ಜೆಡಿಎಸ್‌ಗೆ ಹೀಗೆ ಪಕ್ಷಾಂತರ ಪರ್ವವೂ ಜೋರಾಗಿದೆ. ಕೆಲವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ನಡುವೆ ಬಂಡಾಯ ಶಮನಗೊಳಿಸುವ ನಿಟ್ಟಿನಲ್ಲಿ ಮನವೊಲಿಕೆ ಪ್ರಯತ್ನಗಳು ನಡೆಯುತ್ತಿದ್ದು ಕೊನೇ ಕಸರತ್ತು ಮುಂದುವರಿದಿದೆ.

Advertisement

ಬಂಡಾಯ ಭೀತಿಗೆ ಪಕ್ಷಗಳ ನಿರ್ಲಕ್ಷ್ಯ
ಶಿವಮೊಗ್ಗ: ಜಿಲ್ಲೆಯ ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸಾಗರ, ಸೊರಬದಲ್ಲಿ ಬಂಡಾಯದ ಭೀತಿ ಇದ್ದರೂ ಯಾವ ಪಕ್ಷಗಳೂ ತಲೆಕೆಡಿಸಿಕೊಳ್ಳುತ್ತಿಲ್ಲ. ಶಿಕಾರಿಪುರದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ನಾಗರಾಜ ಗೌಡಗೆ ಕೊನೇ ಕ್ಷಣದಲ್ಲಿ ಬಿ ಫಾರಂ ಸಿಗುತ್ತದೆ ಎಂದು ಹೇಳಲಾಗಿತ್ತಾದರೂ ವಿಫಲವಾಗಿದೆ. ಸಿದ್ದರಾಮಯ್ಯ ಬಿ ಫಾರಂ ಕೊಡಲು ಒಪ್ಪಿಗೆ ನೀಡಲಿಲ್ಲ ಎನ್ನಲಾಗಿದೆ. ನಾಗರಾಜ ಗೌಡರಿಗೆ ಮಾಜಿ ಎಂಎಲ್‌ಸಿ ಚನ್ನವೀರಪ್ಪ ಗೌಡ ಬೆಂಬಲ ನೀಡಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಪಕ್ಷಕ್ಕೆ ಹಿನ್ನಡೆಯಾಗಿದೆ. ಸೊರಬದಲ್ಲಿ ನಮೋ ವೇದಿಕೆ ಬಂಡಾಯ ಮುಂದುವರಿದಿದೆ. ಕುಮಾರ್‌ ಬಂಗಾರಪ್ಪ ಮುನಿಸು ಶಮನ ಆಗಿದೆ ಎಂದು ಹೇಳಿದ್ದರೂ ನಮೋ ವೇದಿಕೆ ಸ್ಪಷ್ಟನೆ ನೀಡಿದೆ. ಸಾಗರದಲ್ಲಿ ಕಾಂಗ್ರೆಸ್‌ನಲ್ಲಿದ್ದ ಇಬ್ಬರು ಪ್ರಮುಖರು ಬಿಜೆಪಿ ಸೇರಿದರೆ ಇತ್ತ ಬಿಜೆಪಿ ಮುಖಂಡ ಕೂಡ ಕಾಂಗ್ರೆಸ್‌ ಸೇರಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಜೆಡಿಎಸ್‌ ಸೇರಿದ್ದು, ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
——————
ಕೈ, ಕಮಲಕ್ಕೆ ದಳದ ರೂಪದಲ್ಲಿ ಬಂಡಾಯದ ಬಿಸಿ
ಬಳ್ಳಾರಿ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಟಿಕೆಟ್‌ ಕೈ ತಪ್ಪಿದ ಬಹುತೇಕ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದು, ಜೆಡಿಎಸ್‌ ರೂಪದಲ್ಲಿ ತಮ್ಮ ಪಕ್ಷಕ್ಕೆ ಬಂಡಾಯದ ಬಿಸಿ ಮುಟ್ಟಿಸುತ್ತಿದ್ದಾರೆ. ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ದಿ|ಎಂ.ಪಿ. ಪ್ರಕಾಶ್‌ ಪುತ್ರಿಯರಾದ ಎಂ.ಪಿ.ಲತಾ, ಎಂ.ಪಿ.ವೀಣಾ ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರೊಂದಿಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ ಮನವೊಲಿಸುತ್ತಿದ್ದಾರೆ. ಜತೆಗೆ ಮನವೊಲಿಸುವಂತೆ ಅಲ್ಲಂ ವೀರಭದ್ರಪ್ಪರಿಗೂ ತಿಳಿಸಿದ್ದಾರೆ. ಇನ್ನು ಏ.24ರವರೆಗೆ ಸಮಯವಿದ್ದು, ಅಷ್ಟರೊಳಗೆ ಬಂಡಾಯ ಶಮನ ಮಾಡುವುದಾಗಿ ವಿಜಯನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿರಾಜ್‌ ಶೇಖ್‌ ತಿಳಿಸಿದ್ದಾರೆ. ಬಿಜೆಪಿ ಟಿಕೆಟ್‌ ತಪ್ಪಿದ ಹಗರಿಬೊಮ್ಮನಹಳ್ಳಿಯಲ್ಲಿ ಮಾಜಿ ಶಾಸಕ ನೇಮಿರಾಜ್‌ ನಾಯ್ಕ, ಕೂಡ್ಲಿಗಿಯಲ್ಲಿ ಕೋಡಿಹಳ್ಳಿ ಭೀಮಣ್ಣ, ಕಾಂಗ್ರೆಸ್‌ ಟಿಕೆಟ್‌ ತಪ್ಪಿದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಅನಿಲ್‌ ಲಾಡ್‌, ಕಂಪ್ಲಿ ಕ್ಷೇತ್ರದಲ್ಲಿ ರಾಜು ನಾಯಕ ಜೆಡಿಎಸ್‌ ಅಭ್ಯರ್ಥಿಗಳಾಗಿ ಮತ್ತು ಸಂಡೂರಲ್ಲಿ ಬಿಜೆಪಿ ಟಿಕೆಟ್‌ ತಪ್ಪಿದ ಕೆ.ಎಸ್‌.ದಿವಾಕರ್‌ ಅವರು ಕೆಆರ್‌ಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ತಮ್ಮ ಪಕ್ಷಗಳಿಗೆ ಬಂಡಾಯದ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ. ಇವರು ಬೇರೆ ಪಕ್ಷದಿಂದ ಸ್ಪ ರ್ಧಿಸಿದ ಮೇಲೆ ಬಂಡಾಯ ಶಮನದ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಉಭಯ ಪಕ್ಷಗಳ ಮೂಲಗಳು ಖಚಿತ ಪಡಿಸಿವೆ.
————————

ಜಗಳೂರು, ಮಾಯಕೊಂಡದಲ್ಲಿ ಬಂಡಾಯ
ದಾವಣಗೆರೆ: ಜಿಲ್ಲೆಯ ಎರಡು ಮೀಸಲು ಕ್ಷೇತ್ರಗಳಲ್ಲೇ ಬಂಡಾಯ ಕಾಣಿಸಿಕೊಂಡಿದೆ. ಪರಿಶಿಷ್ಟ ಪಂಗಡ ಮೀಸಲು ಜಗಳೂರು ಕ್ಷೇತ್ರದಲ್ಲಿ ಟಿಕೆಟ್‌ ಸಿಗದಿದ್ದರಿಂದ ಮಾಜಿ ಶಾಸಕ ಎಚ್‌.ಪಿ.ರಾಜೇಶ್‌ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ರಾಜೇಶ್‌ ಬಂಡಾಯ ಕಾಂಗ್ರೆಸ್‌ಗೆ ಅಡ್ಡಿ ಆಗುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಸೇರಿ ಇತರೆ ನಾಯಕರ ಮನವೊಲಿಕೆ ಯತ್ನ ವಿಫಲವಾಗಿದೆ. ಏನೇ ಆದರೂ ಸ್ಪರ್ಧಿಸುವುದಾಗಿ ರಾಜೇಶ್‌ ಸ್ಪಷ್ಟಪಡಿಸಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂ.ಬಸವರಾಜ ನಾಯ್ಕ ವಿರುದ್ಧ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆರ್‌.ಎಲ್‌.ಶಿವಪ್ರಕಾಶ್‌ ಎಂಟು ಜನ ಟಿಕೆಟ್‌ ಆಕಾಂಕ್ಷಿತರ ಒಮ್ಮತ ತೀರ್ಮಾನದ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೇ ಘಳಿಗೆವರೆಗೆ ಸಿ ಫಾರಂ ದೊರೆಯುವ ವಿಶ್ವಾಸದಲ್ಲಿದ್ದ ಬಂಡಾಯಗಾರರು ವರಿಷ್ಠರಿಂದ ಸ್ಪಂದನೆ ದೊರೆಯದೆ ಕಣದಲ್ಲಿದ್ದಾರೆ. ಶಿವಪ್ರಕಾಶ್‌ ಮನವೊಲಿಕೆ ಪ್ರಯತ್ನ ಮುಖಂಡರಿಂದ ನಡೆಯುತ್ತಿದೆಯಾದರೂ ಸ್ಪರ್ಧೆ ಅಚಲ ಎಂಬ ನಿರ್ಧಾರ ಪ್ರಕಟವಾಗಿದೆ. ಹರಿಹರ ಕ್ಷೇತ್ರದಲ್ಲಿ ಟಿಕೆಟ್‌ ದೊರೆಯದ ಶಾಸಕ ಎಸ್‌.ರಾಮಪ್ಪ ಮೌನಕ್ಕೆ ಜಾರಿದ್ದಾರೆ. ಚನ್ನಗಿರಿಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ 6 ವರ್ಷ ಉಚ್ಚಾಟನೆ ಮಾಡಿದ್ದರಿಂದ ಶಮನದ ಪ್ರಶ್ನೆಯೇ ಇಲ್ಲ.
——————-
ವರಿಷ್ಠರಿಗೆ ಸೆಡ್ಡು
ಹಾವೇರಿ: ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌ ವಂಚಿತ ಆಕಾಂಕ್ಷಿಗಳು ಜೆಡಿಎಸ್‌, ಎನ್‌ಸಿಪಿ, ಕೆಆರ್‌ಪಿಸಿ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ವರಿಷ್ಠರಿಗೆ ಸೆಡ್ಡು ಹೊಡೆದಿದ್ದು, ಮನವೊಲಿಕೆ ಪ್ರಯತ್ನ ಜೋರಾಗಿದೆ.

ಟಿಕೆಟ್‌ ಘೋಷಣೆ ಆಗುತ್ತಿದ್ದಂತೆ ಹಾವೇರಿ, ರಾಣಿಬೆನ್ನೂರು, ಶಿಗ್ಗಾವಿ-ಸವಣೂರು ಹಾಗೂ ಹಾನಗಲ್ಲ ಕ್ಷೇತ್ರದಲ್ಲಿ ಬಂಡಾಯ ಕಂಡು ಬಂದಿತ್ತು. ಹಾವೇರಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿದ್ದ ಎಂ.ಎಂ.ಹಿರೇಮಠ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಅವರ ಮನವೊಲಿಕೆ ಕಸರತ್ತು ಜೋರಾಗಿದೆ. ಬಿಜೆಪಿಯಲ್ಲಿ ಟಿಕೆಟ್‌ ವಂಚಿತ ಪರಮೇಶ್ವರಪ್ಪ ಮೇಗಳಮನಿ, ಡಿ.ಎಸ್‌.ಮಾಳಗಿ, ವೆಂಕಟೇಶ ನಾರಾಯಣಿ, ಕೆ.ಬಿ.ಮಲ್ಲಿಕಾರ್ಜುನ ಅವರು ಶ್ರೀಪಾದ ಬೆಟಗೇರಿ ಬಂಡಾಯವೆದ್ದಿದ್ದು, ರಾಜ್ಯ, ಜಿಲ್ಲಾ ಮಟ್ಟದ ಮುಖಂಡರು ಕರೆಸಿ ಮನವೊಲಿಸಲು ಯತ್ನಿಸಿದರೂ ಯಶಸ್ವಿಯಾಗಿಲ್ಲ. ಇನ್ನು ಹಾಲಿ ಶಾಸಕ ನೆಹರು ಓಲೇಕಾರ ಬಂಡಾಯವೆದ್ದಿದ್ದರೂ ನಾಮಪತ್ರ ಸಲ್ಲಿಸದೆ ತಟಸ್ಥರಾಗಿದ್ದಾರೆ.

ಶಿಗ್ಗಾವಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರಾದ ಶಶಿಧರ ಯಲಿಗಾರ, ಷಣ್ಮುಖ ಶಿವಳ್ಳಿ, ಹನುಮಂತಪ್ಪ ಬಂಡಿವಡ್ಡರ ನಾಮಪತ್ರ ಸಲ್ಲಿಸಿದ್ದು, ಅವರ ಮನವೊಲಿಕೆ ಕಸರತ್ತು ನಡೆಯುತ್ತಿದೆ. ಇನ್ನು ಕ್ಷೇತ್ರದಲ್ಲಿ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ನಡೆ ನಿಗೂಢವಾಗಿದೆ. ಬ್ಯಾಡಗಿಯಲ್ಲಿ ಬಿಜೆಪಿ ಟಿಕೆಟ್‌ ತಪ್ಪಿದ್ದರಿಂದ ಸುರೇಶಗೌಡ್ರ ಪಾಟೀಲ ಹಾಗೂ ಕಾಂಗ್ರೆಸ್‌ನಲ್ಲಿ ಎಸ್‌.ಆರ್‌. ಪಾಟೀಲ ಅಸಮಧಾನ ವ್ಯಕ್ತಪಡಿಸಿದ್ದರು. ಸದ್ಯ ಎರಡೂ ಪಕ್ಷಗಳಲ್ಲಿ ಮಾತುಕತೆ ಮೂಲಕ ಬಂಡಾಯ ಶಮನಗೊಳಿಸಲಾಗಿದೆ.
ಹಾನಗಲ್ಲನಲ್ಲಿ ಬಿಜೆಪಿ ಟಿಕೆಟ್‌ ಸ್ಥಳೀಯರಿಗೆ ನೀಡಬೇಕೆಂಬ ಕೂಗು ಹೆಚ್ಚಾಗಿತ್ತು. ಸ್ಥಳೀಯರಿಗೆ ಟಿಕೆಟ್‌ ತಪ್ಪಿದ್ದರಿಂದ ಕೃಷ್ಣ ಈಳಗೇರ, ಮಾಲತೇಶ ಸೊಪ್ಪಿನ್‌ ಇತರರು ಬಂಡಾಯ ಎದ್ದಿದ್ದರು. ಸದ್ಯ ಎಲ್ಲರೊಂದಿಗೂ ಚರ್ಚಿಸಿ ಬಂಡಾಯ ಶಮನಗೊಳಿಸಲಾಗಿದೆ. ರಾಣಿಬೆನ್ನೂರಿನಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಆರ್‌.ಶಂಕರ ಎನ್‌ಸಿಪಿಯಿಂದ, ಸಂತೋಷಕುಮಾರ ಪಾಟೀಲ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
————–
ಮಾಜಿ ಪೊಲೀಸ್‌ ಅಧಿಕಾರಿ ಬಂಡಾಯ
ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಹೇಂದ್ರ ನಾಯಕ ಬಂಡಾಯ ಎದ್ದಿದ್ದಾರೆ. ಹಿತೈಷಿಗಳ ಸಭೆ, ಪ್ರಮುಖರ ಸಲಹೆ ಬಳಿಕ ಅಂತಿಮ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿರುವ ಮಾಜಿ ಪೊಲೀಸ್‌ ಅ ಧಿಕಾರಿಯೂ ಆಗಿರುವ ಮಹೇಂದ್ರ ನಾಯಕ ಕಣದಲ್ಲೂ ಖದರ್‌ ತೋರಲು ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲೇ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಾಮಾಜಿಕ ಸೇವೆಗಳನ್ನು ಮಾಡುತ್ತ ಬಂದಿದ್ದ ಮಹೇಂದ್ರ ನಾಯಕ, ಪೊಲೀಸ್‌ ಸೇವೆಗೆ ಸೇರುವ ಮುನ್ನ ಬಿಜೆಪಿ ತಾಪಂ ಸದಸ್ಯ ಕೂಡ ಆಗಿದ್ದರು. ಹೀಗಾಗಿ ಹಿತೈಷಿಗಳ ಸಭೆಯಲ್ಲಿ ಬಿಜೆಪಿ ಟಿಕೆಟ್‌ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದರಿಂದ ಬೆಂಬಲಿಗರು ಸ್ಪರ್ಧೆಗೆ ಆಗ್ರಹಿಸಿದ್ದರು.
—————–
ರಾಯಚೂರಲ್ಲಿ ಕೈ ಭಿನ್ನಮತ ಶಮನ
ರಾಯಚೂರು: ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಮಾತ್ರ ಭಿನ್ನಮತ ಭುಗಿಲೆದ್ದಿದ್ದು, ಬಂಡಾಯ ಬಿಸಿ ತಣಿಸಲು ಪ್ರಮುಖ ಅಭ್ಯರ್ಥಿಗಳೇ ಕಸರತ್ತು ನಡೆಸುತ್ತಿದ್ದಾರೆ. ಸಿಂಧನೂರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಬಸನಗೌಡ ಬಾದರ್ಲಿ ಮನವೊಲಿಕೆಗೆ ಖುದ್ದು ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಆಗಮಿಸಿ ಸಂಧಾನ ಮಾಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಭರವಸೆ ನೀಡಲಾಗಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕು ಎನ್ನುವ ಬೇಡಿಕೆಗೆ ಪಕ್ಷ ಮಣೆ ಹಾಕಿದೆ. ಆದರೆ, ಅಭ್ಯರ್ಥಿ ಆಯ್ಕೆ ಬಗ್ಗೆ ಸ್ವಧರ್ಮೀಯರಲ್ಲೇ ಅಪಸ್ವರ ಎದ್ದಿದೆ. ಇದೇ ಕಾರಣಕ್ಕೆ ಮುಸ್ಲಿಂ ನಾಯಕರು ಹೆಚ್ಚು ನಾಮಪತ್ರ ಸಲ್ಲಿಸಿ ಬಂಡಾಯ ಸಾರಿದ್ದಾರೆ. ಅವರನ್ನು ಸಮಾಧಾನ ಪಡಿಸಲು ಪಕ್ಷದ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಮಾನ್ವಿಯಲ್ಲಿ ಮುಖಂಡ ಎಂ.ಈರಣ್ಣ ಅವರ ಸೊಸೆಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್‌ಗೆ ಮುಳುವಾಗಿದೆ. ಇದೇ ಕಾರಣಕ್ಕೆ ಖುದ್ದು ಕಾಂಗ್ರೆಸ್‌ ಅಭ್ಯರ್ಥಿ ಹಂಪಯ್ಯ ನಾಯಕ ಸಂಧಾನದ ಮಾತುಕತೆ ನಡೆಸಿದ್ದು, ಕಣದಿಂದ ಹಿಂದೆ ಸರಿದು ಬೆಂಬಲಿಸುವಂತೆ ಕೇಳುತ್ತಿದ್ದಾರೆ. ವಿಪರ್ಯಾಸ ಎಂದರೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರೇ ಪûಾಂತರಕ್ಕೆ ಒಳಗಾಗಿದ್ದು, ಪಕ್ಷ ನಾವಿಕನಿಲ್ಲದ ದೋಣಿಯಂತಾಗಿದೆ.
———————-

Advertisement

ಕಾಫಿನಾಡಲ್ಲಿ ಕುತೂಹಲ
ಚಿಕ್ಕಮಗಳೂರು: ಎಂ.ಪಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್‌ ವಂಚಿತವಾದ ಬಳಿಕ ಜೆಡಿಎಸ್‌ ಸೇರ್ಪಡೆಗೊಂಡು ಸದ್ಯ ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪೂರ್ವ ನಿಯೋಜಿತ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಮುನಿಸಿಕೊಂಡು ಪಕ್ಷೇತರವಾಗಿ ಸ್ಪರ್ಧಿಸಿದ್ದು, ಜೆಡಿಎಸ್‌ ಮುಖಂಡರು ಈ ಮುನಿಸು ಶಮನಗೊಳಿಸುತ್ತಾರೋ ನೋಡಬೇಕಿದೆ. ಕಡೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ.ಎಸ್‌.ಆನಂದ್‌ ಕಣಕ್ಕಿಳಿದಿದ್ದಾರೆ. ಕಳೆದ 50 ವರ್ಷಗಳಿಂದ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವ ಸಿ.ನಂಜಪ್ಪ ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿ.ನಂಜಪ್ಪ ಅವರ ಮನವೊಲಿಸಲು ಕಾಂಗ್ರೆಸ್‌ ಮುಖಂಡರು ಮುಂದಾಗುತ್ತಾರೋ ನೋಡಬೇಕಿದೆ. ತರೀಕೆರೆ ಕ್ಷೇತ್ರದಿಂದ ಕಾಂಗ್ರೆಟ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಚ್‌.ಎಂ.ಗೋಪಿಕೃಷ್ಣ ಜಿ.ಎಚ್‌.ಶ್ರೀನಿವಾಸ್‌ ವಿರುದ್ಧ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬೃಹತ್‌ ಜನರನ್ನು ಒಗ್ಗೂಡಿಸಿ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದು, ಗೋಪಿಕೃಷ್ಣ ಬಂಡಾಯದ ಬಿಸಿ ಕಾಂಗ್ರೆಸ್‌ ಅಭ್ಯರ್ಥಿಗೆ ಮುಳುವಾಗಲಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಗೋಪಿಕೃಷ್ಣ ಮುನಿಸು ಶಮನಕ್ಕೆ ಕಾಂಗ್ರೆಸ್‌ ಮುಖಂಡರು ಮುಂದಾಗುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಜಿಲ್ಲೆ ಐದು ವಿಧಾನಸಭಾ ಕ್ಷೇತ್ರವನ್ನು ಹೊಂದಿದ್ದು ಅಲ್ಲಲ್ಲಿ ಬಂಡಾಯ ಬಿಸಿ ಏರುತ್ತಿದೆ.
————-

ಶಿರಹಟ್ಟಿಯಲ್ಲಿ ಕಾಂಗ್ರೆಸ್‌, ಬಿಜೆಪಿಗೆ ಬಂಡಾಯ
ಗದಗ: ಜಿಲ್ಲೆಯ ಗದಗ, ರೋಣ ಹಾಗೂ ನರಗುಂದ ಮತಕ್ಷೇತ್ರಗಳನ್ನು ಹೊರತುಪಡಿಸಿ ಎಸ್ಸಿ ಮೀಸಲು ಕ್ಷೇತ್ರ ಶಿರಹಟ್ಟಿಯಲ್ಲಿ ಬಿಜೆಪಿ ಜತೆಗೆ ಕಾಂಗ್ರೆಸ್‌ನಲ್ಲೂ ಬಂಡಾಯದ ಬಿಸಿ ತಾರಕಕ್ಕೇರಿದೆ. ಹೈಕಮಾಂಡ್‌ಗೆ ಮಣಿಯದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪ ರ್ಧಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್‌ನ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಅವರನ್ನು ಕೈ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯಲ್ಲೂ ಹೊಸಮುಖಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ವೈದ್ಯ ಡಾ|ಚಂದ್ರು ಲಮಾಣಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ಆಕಾಂಕ್ಷಿಗಳಾಗಿದ್ದ ಹಾಲಿ ಶಾಸಕ ರಾಮಣ್ಣ ಲಮಾಣಿ ಹಾಗೂ ಮುಖಂಡ ಭೀಮಸಿಂಗ್‌ ರಾಠೊಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಹಾಲಿ ಶಾಸಕ ರಾಮಣ್ಣ ಲಮಾಣಿ ನಾಮಪತ್ರ ಸಲ್ಲಿಸಿದ್ದರೂ 23ರವರೆಗೆ ಕಾದುನೋಡುವ ತಂತ್ರ ಅನುಸರಿಸಿದರೆ, ಇನ್ನೋರ್ವ ಆಕಾಂಕ್ಷಿ ಭೀಮಸಿಂಗ್‌ ರಾಠೊಡ ಸ್ಪ ರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ.
——————–
ಅಭ್ಯರ್ಥಿಗಳ ಮನವೊಲಿಸದ ಕಾಂಗ್ರೆಸ್‌
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆಡಳಿತರೂಢ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿಲ್ಲ. ಉಳಿದಂತೆ ಪ್ರತಿಪಕ್ಷ ಕಾಂಗ್ರೆಸ್‌ಗೆ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಬಂಡಾಯದ ಚಿಂತೆ ಇನ್ನಿಲ್ಲದಂತೆ ಕಾಡುತ್ತಿದೆ. ಶಿಡ್ಲಘಟ್ಟ ಕ್ಷೇತ್ರಕ್ಕೆ ಏ.19 ರ ಮಧ್ಯರಾತ್ರಿ ಟಿಕೆಟ್‌ ಘೊಷಿಸಿದ್ದು ಬೆಂಗಳೂರು ಮೂಲದ ಉದ್ಯಮಿ ರಾಜೀವ್‌ಗೌಡಗೆ ಟಿಕೆಟ್‌ ದೊರೆಕಿದ್ದು ಮತ್ತೂಬ್ಬ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೃಷ್ಣಬೈರೇಗೌಡ ಆಪ್ತ ಪುಟ್ಟು ಅಂಜಿನಪ್ಪಗೆ ಟಿಕೆಟ್‌ ಕೈ ತಪ್ಪಿದೆ. ಆದರೂ ಅಂಜಿನಪ್ಪ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಣದಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ. ಬಾಗೇಪಲ್ಲಿ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದು ಟಿಕೆಟ್‌ ವಂಚಿತ ಮಾಜಿ ಶಾಸಕ ಎನ್‌.ಸಂಪಂಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್‌ ಬಂಡಾಯಗಾರರನ್ನು ಮನವೊಲಿಸುವ ಯಾವ ಪ್ರಯತ್ನವೂ ಪಕ್ಷದ ಕಡೆಯಿಂದ ನಡೆಯುತ್ತಿಲ್ಲ ಎನ್ನಲಾಗಿದೆ.
——————
ಮನವೊಲಿಕೆಗೆ ಬಗ್ಗದ ಪಕ್ಷೇತರ ಅಭ್ಯರ್ಥಿ
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ತವರು ಕ್ಷೇತ್ರ ಪುತ್ತೂರಿನಲ್ಲಿ ಸಂಘ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ಸ್ಪರ್ಧೆಯಿಂದ ಬಿಜೆಪಿ ಬಂಡಾಯದ ಬಿಸಿ ಎದುರಿಸುತ್ತಿದ್ದು, ಮನವೊಲಿಕೆಯ ಎಲ್ಲ ಪ್ರಯತ್ನಗಳು ವಿಫಲವಾಗಿರುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಆರೆಸ್ಸೆಸ್‌, ಸಂಘಪರಿವಾರ, ಬಿಜೆಪಿ ನಾಯಕರು ತೆರೆಮರೆಯಲ್ಲಿ ಸಂಧಾನದ ಪ್ರಯತ್ನ ನಡೆಸಿದ್ದು, ಫಲ ಕೊಟ್ಟಿಲ್ಲ. ಜೆಡಿಎಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿ ಅಶ್ರಫ್‌ ಕಲ್ಲೇಗ ಕಣದಲ್ಲಿದ್ದರೂ ಅವರ ಸ್ಪರ್ಧೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ.
—————–

ಧಾರವಾಡದಲ್ಲಿ ಬಂಡಾಯ ತಲೆನೋವು
ಧಾರವಾಡ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳು ತಲೆನೋವಾಗಿದ್ದಾರೆ. ಕೆಲವೆಡೆ ಮನವೊಲಿಸುವ ಪ್ರಯತ್ನ ನಡೆಯುತ್ತಿದ್ದು, ಇನ್ನು ಕೆಲವೆಡೆ ಆಗಲೇ ಮನವೊಲಿಕೆ ಮಾಡಿ ಪಕ್ಷದ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಂಡಾಯ ಎದ್ದಿದ್ದ ಇಸ್ಮಾಯಿಲ್‌ ತಮಟಗಾರ ಇದೀಗ ಬಂಡಾಯದ ಬಾವುಟ ಕೆಳಗೆ ಇಟ್ಟಿದ್ದು, ವಿನಯ್‌ ಕುಲಕರ್ಣಿ ಬೆಂಬಲಕ್ಕೆ ನಿಂತಿದ್ದಾರೆ. ಇಲ್ಲಿ ಬಿಜೆಪಿಯ ತವನಪ್ಪ ಅಷ್ಟಗಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಅದೇ ರೀತಿ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಂಡಾಯವೆದ್ದಿದ್ದ ಏಳೆಂಟು ಜನ ಆಕಾಂಕ್ಷಿಗಳ ಪೈಕಿ ನಾಲ್ವರು ಪಕ್ಷದ ಅಭ್ಯರ್ಥಿ ಬೆಂಬಲಕ್ಕೆ ನಿಂತರೆ, ನಾಗರಾಜ್‌ ಗೌರಿ, ಪಾಂಡುರಂಗ ನೀರಲಕೇರಿ, ಬಸವರಾಜ ಮಲಕಾರಿ ಮುನಿಸು ಕಡಿಮೆಯಾಗಿಲ್ಲ. ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಈರೇಶ ಅಂಚಟಗೇರಿ ಅವರು ಬೆಲ್ಲದ ವಿರುದ್ಧ ಮುನಿಸಿಕೊಂಡು ಚುನಾವಣೆಯಿಂದ ದೂರ ಉಳಿದಿದ್ದಾರೆ. ನವಲಗುಂದ ಕಾಂಗ್ರೆಸ್‌ನಲ್ಲಿ ಶಿವಾನಂದ ಕರಿಗಾರ, ವಿನೋದ ಅಸೂಟಿ ಅವರ ಕೋಪ ಇನ್ನೂ ಕಡಿಮೆಯಾಗಿಲ್ಲ. ಕುಂದಗೋಳ ಬಿಜೆಪಿಯಲ್ಲಿ ಎಸ್‌.ಐ.ಚಿಕ್ಕನಗೌಡರ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕಲಘಟಗಿಯಲ್ಲಿ ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಬಂಡಾಯ ಬಾವುಟ ಕೆಳಗಿಟ್ಟು ನಾಗರಾಜ ಛಬ್ಬಿ ಅವರನ್ನು ಬೆಂಬಲಿಸಿದ್ದಾರೆ.
———————
ಕಲಬುರಗಿಯಲ್ಲಿ ಬಂಡಾಯ ಶಮನಕ್ಕೆ ಕಸರತ್ತು
ಕಲಬುರಗಿ: ಸಹೋದರರ ಸ್ಪರ್ಧೆಯಿಂದ ಜಿಲ್ಲೆಯ ಅಫ‌ಜಲಪುರ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರ ರಾಜ್ಯದ ಗಮನ ಸೆಳೆದಿದ್ದು, ಈ ಎರಡು ಕ್ಷೇತ್ರಗಳಲ್ಲಿ ಅದರಲ್ಲೂ ಬಿಜೆಪಿಯಲ್ಲೇ ಬಂಡಾಯ ಎದುರಾಗಿದೆ. ಅಫ‌ಜಲಪುರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರಗೆ ಬಿಜೆಪಿ ಟಿಕೆಟ್‌ ದೊರೆತರೆ ಇವರ ಸಹೋದರ ಜಿಪಂ ಮಾಜಿ ಅಧ್ಯಕ್ಷ ನಿತಿನ್‌ ಗುತ್ತೇದಾರ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ನಿತಿನ್‌ ಗುತ್ತೇದಾರ ನಾಮಪತ್ರ ವಾಪಸ್‌ ಪಡೆಯುವ ನಿಟ್ಟಿನಲ್ಲಿ ಸಂಧಾನ ಹಾಗೂ ಪಕ್ಷದ ವರಿಷ್ಠರಿಂದ ಮಾತುಕತೆ ನಡೆದರೂ ಫ‌ಲ ನೀಡಿಲ್ಲ. ಯಾರೇ ಹೇಳಿದರೂ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ನಿತಿನ್‌ ಘೋಷಿಸಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಸಹೋದರರ ಸವಾಲ್‌ ಎದುರಾಗಿದೆ. ಚಿತ್ತಾಪುರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅರವಿಂದ ಚವ್ಹಾಣ ಟಿಕೆಟ್‌ ದೊರೆಯದಿದ್ದಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಪರ್ಧೆ ಮಾಡದಿರುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದ ಪಕ್ಷದ ವರಿಷ್ಠರು ಕಾಂಗ್ರೆಸ್‌ ಸೇರ್ಪಡೆಯಾಗುವುದನ್ನು ತಪ್ಪಿಸುತ್ತಾರೋ ಇಲ್ಲವೋ ಎಂಬುದನ್ನು ಕಾಯ್ದು ನೋಡಬೇಕಿದೆ. ಉಳಿದಂತೆ ಜೇವರ್ಗಿಯಲ್ಲಿ ಬಿಜೆಪಿ ಟಿಕೆಟ್‌ ಸಿಗದಿದ್ದಕ್ಕೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ.
———————-

ಬಾಗಲಕೋಟೆಯಲ್ಲಿ ಬಿರುಗಾಳಿ
ಬಾಗಲಕೋಟೆ: ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಕಿರಣಕುಮಾರ ದೇಸಾಯಿ, ಹೊಸೂರಿನ ವೀರಭಿಕ್ಷಾವರ್ತಿಮಠದ ಶಿವಶಂಕರ ಸ್ವಾಮೀಜಿ ಸ್ಪರ್ಧೆ ಮಾಡಿದ್ದು, ಅವರ ಮನವೊಲಿಸಿ ನಾಮಪತ್ರ ತೆಗೆಸಲು ಬಿಜೆಪಿ ಪ್ರಮುಖರು ಕಸರತ್ತು ನಡೆಸಿದ್ದಾರೆ. ಜಿಲ್ಲೆಯ ಭಿನ್ನಮತ ಶಮನಗೊಳಿಸಲೆಂದೇ ಬಿಜೆಪಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ ಅವರನ್ನು ನೇಮಿಸಲಾಗಿದೆ. ಜಮಖಂಡಿ ಕಾಂಗ್ರೆಸ್‌ನಲ್ಲೂ ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ನಾಮಪತ್ರ ಸಲ್ಲಿಸಿದ್ದು ಅವರ ಮನವೊಲಿಕೆ ಪ್ರಯತ್ನ ಬಹುತೇಕ ಫಲಪ್ರದವಾಗಿಲ್ಲ. ಮುಧೋಳ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತ ಸತೀಶ ಬಂಡಿವಡ್ಡರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಅವರ ಮನವೊಲಿಕೆಯೂ ನಡೆದಿದೆ.
———————

ಕೊಪ್ಪಳ ಕಮಲ-ದಳದಲ್ಲಿ ಬಂಡಾಯ
ಕೊಪ್ಪಳ: ಜಿಲ್ಲೆಯ ಕನಕಗಿರಿ ಹಾಗೂ ಕುಷ್ಟಗಿ ಕ್ಷೇತ್ರದಲ್ಲಿ ಕಮಲ ಹಾಗೂ ದಳದ ಟಿಕೆಟ್‌ ನಿರೀಕ್ಷೆಯಿದ್ದವರಿಗೆ ಕೈತಪ್ಪಿ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದಾರೆ. ಬಂಡಾಯವೆದ್ದವರ ಮನವೊಲಿಸುವ ಯತ್ನ ನಡೆದಿವೆ. ಕುಷ್ಟಗಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಆರಂಭದಲ್ಲಿ ತುಕಾರಾಂ ಸುರ್ವೆ ಅವರನ್ನು ಕುಮಾರಸ್ವಾಮಿ ಘೋಷಣೆ ಮಾಡಿ ಪಂಚರತ್ನ ಯಾತ್ರೆಯಲ್ಲಿ ಇವರ ಪರ ಮತಯಾಚಿಸಿದ್ದರು. ಆದರೆ ನಾಮಪತ್ರ ಸಲ್ಲಿಸುವ ಕೊನೆ ಗಳಿಗೆಯಲ್ಲಿ ಶರಣಪ್ಪ ಕುಂಬಾರ ಎನ್ನುವರಿಗೆ ಜೆಡಿಎಸ್‌ ಬಿ ಫಾರಂ ದೊರೆತಿದ್ದು ಶರಣಪ್ಪ ಕಣದಲ್ಲಿದ್ದಾರೆ. ತುಕಾರಂ ಬಂಡಾಯವೆದ್ದು ಇಂಡಿಯನ್‌ ಮೂವ್‌ಮೆಂಟ್‌ ಪಾರ್ಟಿ ಎನ್ನುವ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಜೆಡಿಎಸ್‌ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ದಢೇಸೂಗೂರು ಕಣದಲ್ಲಿದ್ದರೆ, ತಮಗೆ ಟಿಕೆಟ್‌ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದ ಧರ್ಮಣ್ಣ ಸಿಡಿದೆದ್ದು ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ನಾಮಪತ್ರ ಹಿಂಪಡೆಯಲು ಸಮಯ ಇರುವ ಹಿನ್ನೆಲೆಯಲ್ಲಿ ಬಂಡಾಯವೆದ್ದ ಅಭ್ಯರ್ಥಿಗಳ ಮನವೊಲಿಸುವ ಯತ್ನ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next