Advertisement

ವಿಧಾನ-ಕದನ 2023: BJP ಸುಮಾಸ್ತ್ರಕ್ಕೆ “ಕೈ”ರಮ್ಯಾಸ್ತ್ರ

12:00 AM Apr 24, 2023 | Team Udayavani |

ಮಂಡ್ಯ: ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಸಹಕಾರದೊಂದಿಗೆ ಸಂಸದೆಯಾದ ಸುಮಲತಾ ಅಂಬರೀಷ್‌ ಇತ್ತೀಚೆಗೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಕಾಂಗ್ರೆಸ್‌ ಅದಕ್ಕೆ ಪ್ರತ್ಯಸ್ತ್ರ ಪ್ರಯೋಗ ನಡೆಸಲು ಮುಂದಾಗಿದೆ. ಅದಕ್ಕಾಗಿ ಸ್ಯಾಂಡಲ್‌ವುಡ್‌ ಕ್ವೀನ್‌ ಹಾಗೂ ಮಾಜಿ ಸಂಸದೆ ರಮ್ಯಾ ಅವರನ್ನು ಕರೆತರಲು ಸಿದ್ಧತೆಗಳು ನಡೆಯುತ್ತಿವೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಮಲ ನಾಯಕರು ಸಂಸದೆ ಸುಮಲತಾ ಅಂಬರೀಷ್‌ ಸ್ಟಾರ್‌ ಪ್ರಚಾರಕಿಯಾಗಿ ಬಳಸಿಕೊಳ್ಳುತ್ತಿದ್ದರೆ, ಅತ್ತ ಕಾಂಗ್ರೆಸ್‌ ಕಮಲಕ್ಕೆ ಟಕ್ಕರ್‌ ಕೊಡುವ ನಿಟ್ಟಿನಲ್ಲಿ ಮಾಜಿ ಸಂಸದೆ ರಮ್ಯಾ ಅವರನ್ನು ಕರೆ ತರಲು ಮುಂದಾಗಿದೆ.

Advertisement

ಮೇ 1 ಹಾಗೂ 2ರಂದು ಮಂಡ್ಯ ಜಿಲ್ಲೆಗೆ ಪ್ರಚಾರಕ್ಕೆ ಆಗಮಿಸುವ ಸಾಧ್ಯತೆ ಇದೆ. ಮೊದಲು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ರಮ್ಯಾ, ರೋಡ್‌ ಶೋ, ಪ್ರಚಾರ ಸಭೆ, ಕಾರ್ನರ್‌ ಮೀಟಿಂಗ್‌, ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಅನಂತರ ಉಳಿದ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ರಾಜಕಾರಣಕ್ಕೆ ರೀ ಎಂಟ್ರಿ ಕೊಡಲು ಸಿದ್ಧತೆ: ರಾಜಕಾರಣಕ್ಕೆ ರೀ ಎಂಟ್ರಿ ಕೊಡಲು ರಮ್ಯಾ ಕೂಡ ಸಿದ್ಧತೆ ನಡೆಸಿದ್ದಾರೆ. ಚುನಾವಣೆ ಪ್ರಚಾರಕ್ಕೆ ರಮ್ಯಾ ಜತೆ ನಾಲ್ಕೆçದು ನಟಿಯರು ಆಗಮಿಸುವ ಸಾಧ್ಯತೆ ಇದೆ. ಅಲ್ಲದೆ, 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪ ರ್ಧಿಸಲು ಈಗಿನಿಂದಲೇ ಎಲ್ಲ ರೀತಿಯ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮಹಿಳಾ ಮತದಾರರನ್ನು ಸೆಳೆಯುವ ಯತ್ನ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಮಹಿಳಾ ಮತದಾರರ ಸೆಳೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿದೆ. ಅದಕ್ಕಾಗಿ ರಮ್ಯಾ ಅವರನ್ನು ಕರೆತರಲಾಗುತ್ತಿದೆ. ಸಂಸದೆ ಸುಮಲತಾ ಅವರಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರೇ ಹೆಚ್ಚು ಕೈ ಹಿಡಿದಿದ್ದರು. ಅದನ್ನು ಅರಿತಿರುವ ಕಾಂಗ್ರೆಸ್‌ ರಮ್ಯಾ ಮೂಲಕ ಮಹಿಳಾ ಮತಬ್ಯಾಂಕ್‌ಗೆ ಕೈ ಹಾಕಲು ಹೊರಟಿದೆ.

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರಕ್ಕೆ ಬರುವಂತೆ ನಟಿ ರಮ್ಯಾ ಅವರನ್ನು ಕೇಳಿಕೊಳ್ಳಲಾಗಿದೆ. ಅದರಂತೆ ಮುಂದಿನ ವಾರ ಬರುವ ಸಾಧ್ಯತೆ ಇದೆ. ರೋಡ್‌ ಶೋನಾ, ಸಮಾವೇಶನಾ ಅಂತಾ ಪ್ಲಾನ್‌ ಮಾಡುತ್ತೇವೆ. ರಮ್ಯಾ ಜತೆ 4 ರಿಂದ 5 ಮಂದಿ ಸಿನೆಮಾ ನಟ-ನಟಿಯರು ಬರಲಿದ್ದಾರೆ. ಹಳ್ಳಿ ಕಡೆ ಹೋದಾಗ ರಮ್ಯಾರನ್ನ ಕರೆತರುವಂತೆ ಕೇಳುತ್ತಿದ್ದಾರೆ. ರಮ್ಯಾ ಬರುವುದರಿಂದ ಮಹಿಳಾ ಮತದಾರರನ್ನು ಸೆಳೆಯಬಹುದು.
ರವಿಕುಮಾರ್‌ಗೌಡ, ಕಾಂಗ್ರೆಸ್‌ ಅಭ್ಯರ್ಥಿ, ಮಂಡ್ಯ ವಿಧಾನಸಭಾ ಕ್ಷೇತ್ರ.

Advertisement

~ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next