ರಾಯ್ಪುರ: ಛತ್ತೀಸ್‌ಗಢದ ಅಬುಜ್‌ಮದ್ ನಲ್ಲಿ ಶನಿವಾರ (ಜ.05) ಸಂಜೆ ಭದ್ರತಾ ಪಡೆಗಳು ಗುಂಡಿನ ಚಕಮಕಿಯಲ್ಲಿ ಕನಿಷ್ಠ ನಾಲ್ವರು ನಕ್ಸಲರನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಕಾರ್ಯಾಚರಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಜಂಟಿ ಕಾರ್ಯಾಚರಣೆಯಲ್ಲಿ ಎಕೆ-47 ಮತ್ತು ಸ್ವಯಂ ಲೋಡಿಂಗ್ ರೈಫಲ್ಸ್ (ಎಸ್‌ಎಲ್‌ಆರ್) ನಂತಹ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾರಾಯಣಪುರ, ದಾಂತೇವಾಡ, ಜಗದಲ್‌ಪುರ ಮತ್ತು ಕೊಂಡಗಾಂವ್ ಜಿಲ್ಲೆಗಳ ಪೊಲೀಸ್ ತಂಡಗಳು ಮತ್ತು ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.
ಡಿಆರ್ ಜಿ ಮುಖ್ಯ ಕಾನ್ಸ್ಟೇಬಲ್ ಒಬ್ಬರು ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದಾರೆ. ಅವರನ್ನು ಸನ್ನು ಕರಂ ಎಂದು ಗುರುತಿಸಲಾಗಿದೆ.
ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಟ್ಟ ಅರಣ್ಯದ ನಕ್ಸಲ್ ಕೋಟೆ ಅಬುಜ್‌ಮದ್ ನಲ್ಲಿ ಭದ್ರತಾ ಸಿಬ್ಬಂದಿ ನಕ್ಸಲೀಯ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ಆರಂಭವಾಗಿದೆ.
ಶನಿವಾರ ಸಂಜೆಯಿಂದ ಸತತವಾಗಿ ಈ ಭಾಗದಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.