ಈಗಾಗಲೇ ಕನ್ನಡ ಹಾಗು ತೆಲುಗು ಭಾಷೆಯಲ್ಲಿ ತಯಾರಾಗಿರುವ “ಡಬ್ಲ್ಯು ಡಬ್ಲ್ಯು ಡಬ್ಲ್ಯು.ಮೀನಾ ಬಜಾರ್. ಕಾಮ್’ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 6 ರಂದು ಕರ್ನಾಟಕ ಹಾಗು ಹೈದರಾಬಾದ್‌ನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ ಇದೀಗ ಹೊಸದೊಂದು ಸುದ್ದಿಗೆ ಕಾರಣವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ಗೆ ಎಲ್ಲೆಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಅಷ್ಟೇ ಅಲ್ಲ, ತೆಲುಗಿನಲ್ಲಿ ಬಿಡುಗಡೆಗೊಂಡಿರುವ ಟ್ರೇಲರ್ ಹಾಗು ಅದರ ಕಲರ್ ಟೋನ್ ನೋಡಿದ ತೆಲುಗು ಚಿತ್ರರಂಗದ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೆ, ರಾಮ್‌ಗೊಪಾಲ್ ವರ್ಮ ಹಾಗು ಪೂರಿಜಗನ್ನಾಥ್ ಸಿನಿಮಾದ ಛಾಯೆ ನೆನಪಿಸುವ ಚಿತ್ರ ಇರಬಹುದು ಎಂದು ಹೇಳಿದ್ದಾರೆ. ಈ ಮಾತು ಸ್ವತಃ ಚಿತ್ರದ ನಿರ್ದೇಶಕ ರಾಣಾ ಸುನೀಲ್‌ಕುಮಾರ್ ಸಿಂಗ್ ಹಾಗು ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿಕೊಟ್ಟಿದೆ.
ಇದು ಅವರ ನಿರ್ದೇಶನದ ಎರಡನೇ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಾಹಸದ ಜೊತೆಯಲ್ಲಿ ಅವರು ಚಿತ್ರದಲ್ಲಿ ನಿರ್ದೇಶಕನ ಪಾತ್ರಕ್ಕೂ ಬಣ್ಣ ಹಚ್ಚಿರುವುದು ಮತ್ತೂಂದು ವಿಶೇಷ. ಸದ್ಯಕ್ಕೆ ತೆಲುಗು ಟ್ರೇಲರ್ ಜೊತೆ ಕನ್ನಡದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಕನ್ನಡ ಟ್ರೇಲರ್‌ಗೂ ಭರಪೂರ ಮೆಚ್ಚುಗೆ ಸಿಕ್ಕಿದೆ ಎನ್ನುವ ನಿರ್ದೇಶಕರು, ಬಹಳಷ್ಟು ಮಂದಿ, ಟ್ರೇಲರ್ ನೋಡಿ, ಒಂದಷ್ಟು ಕಾಮೆಂಟ್ಸ್ ಮಾಡುತ್ತಿದ್ದಾರೆ.
ಚಿತ್ರದ ಮೇಕಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ನಮಗೂ ಚಿತ್ರದ ಮೇಲೆ ಜಾಸ್ತಿಯೇ ನಿರೀಕ್ಷೆ ಇದೆ’ ಎಂದು ವಿವರ ಕೊಡುತ್ತಾರೆ. ಚಿತ್ರದಲ್ಲಿ ವಾಸ್ತವ ಅಂಶಗಳಿವೆ. ಸಿನಿಮಾ ನೋಡಿದವರಿಗೆ ಅಲ್ಲೊಂದು ಹೊಸ ಆಲೋಚನೆ ಹುಟ್ಟುತ್ತದೆ. ಅದರೊಂದಿಗೆ ವಸ್ತುಸ್ಥಿತಿಯ ಅರಿವಾಗುತ್ತದೆ. ಪ್ರತಿ ಪಾತ್ರಕ್ಕೂ ಇಲ್ಲಿ ಅದರದೇ ಆದ ವಿಶೇಷತೆಯನ್ನು ಹೊಂದಿದೆ.
ಐದು ಪ್ರಮುಖ ಪಾತ್ರಗಳು ಚಿತ್ರದ ಮುಖ್ಯ ಆಕರ್ಷಣೆ. ಸಿನಿಮಾ ನೋಡೋಕೆ ಬರುವ ಪ್ರತಿಯೊಬ್ಬರಿಗೂ ಚಿತ್ರ ಹೊಸ ಫೀಳ್ ಕೊಡಲಿದೆ ಎಂದು ಹೇಳುವ ನಿರ್ದೇಶಕರು, ಮುಂಬೈ ಮೂಲದ ಶ್ರೀಜಿತಾ ಘೋಷ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅವರದ ಇಲ್ಲಿ ತುಂಬ ಬೋಲ್ಡ್ ಪಾತ್ರವಿದೆಯಂತೆ. ಚಿತ್ರದಲ್ಲಿ ಆಲಿಷಾ ಅವರು ಮೊದಲ ಬಾರಿಗೆ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಸಿದ್ದಾರೆ.
ಉಳಿದಂತೆ ಚಿತ್ರದಲ್ಲಿ ರಾಜೇಶ್ ನಟರಂಗ, ಅರವಿಂದ್, ಮಧುಸೂಧನ್, ಜೀವಾ, ಭಾಸ್ಕರ್, ಲಕ್ಷ್ಮೀ ಹೆಗಡೆ, ರೂಪೇಶ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತವಿದೆ. ಮ್ಯಾಥುರಾಜನ್ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ ಮಾಡಿದರೆ, ಸುಜಿ, ಅನೀ, ಕಲ್ಪನ್ ನೃತ್ಯ ಸಂಯೋಜಿಸಿದ್ದಾರೆ. ರಿಯಲ್ ಸತೀಶ್ ಸಾಹಸವಿದೆ. ಚಿತ್ರವನ್ನು ನಾಗೇಂದ್ರಸಿಂಗ್ ಅವರು ಸಿಂಗ್ ಸಿನಿಮಾಸ್ ಮೂಲಕ ನಿರ್ಮಾಣ ಮಾಡಿದ್ದಾರೆ.