Advertisement

ಏ.10ರೊಳಗೆ ನೇಮಕಾತಿ ಆದೇಶ: ಸಚಿವ ರಾಯರಡ್ಡಿ

11:49 AM Mar 23, 2018 | Team Udayavani |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಏ.10ರೊಳಗೆ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆದೇಶ ಪ್ರತಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಭರವಸೆ ನೀಡಿದ್ದಾರೆ.

Advertisement

2014ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆ ಅನ್ವಯ ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡದೇ ಇರುವುದು ಸೇರಿದಂತೆ ಹಲವು ವಿಷಯದ ಬಗ್ಗೆ ಚರ್ಚಿಸಲು ಗುರುವಾರ ನಗರದ ಉನ್ನತ ಶಿಕ್ಷಣ ಪರಿಷತ್‌ ಸಭಾಂಗಣದಲ್ಲಿ ಕರೆದಿದ್ದ ಮೇಲ್ಮನೆ ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.

ರಾಜ್ಯದ ವಿವಿಧ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ 2014ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ 2160 ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2015ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು.

ಅದರಲ್ಲಿ ಅರ್ಹತೆ ಪಡೆದು ನೇಮಕವಾದ 1882 ಮಂದಿಗೆ ಈಗಾಗಲೇ ಆದೇಶ ಪ್ರತಿ ನೀಡಿದ್ದು, ರಾಜ್ಯದ ವಿವಿಧ ಪದವಿ ಕಾಲೇಜುಗಳಲ್ಲಿ ಬೋಧನಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂಬ ವಿವರಿಸಿದರು.

ಆದೇಶ ಪ್ರತಿ ನೀಡಿಲ್ಲ: ತಾಂತ್ರಿಕ ಸಮಸ್ಯೆ ಹಾಗೂ ಜೇಷ್ಠತೆಯ ಕೊರತೆಯಿಂದ ಕೆಲವು ಅಭ್ಯರ್ಥಿಗಳಿಗೆ ಆದೇಶ ಪ್ರತಿ ಇನ್ನೂ ನೀಡಿಲ್ಲ. ಯುಜಿಸಿ ಮಾನದಂಡದಂತೆ ನೇಮಕ ಮಾಡಿಕೊಳ್ಳಬೇಕಿರುವುದರಿಂದ ಅಭ್ಯರ್ಥಿಗಳ ಅರ್ಹತೆ ಯುಜಿಸಿ ನಿಯಮಕ್ಕೆ ಸರಿ ಹೊಂದಬೇಕು.

Advertisement

ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಸಿ ಉಳಿದ ಅಭ್ಯರ್ಥಿಗಳಿಗೆ ಏ.10ರೊಳಗೆ ಆದೇಶ ಪ್ರತಿ ನೀಡಲಾಗುತ್ತದೆ ಎಂದು ತಿಳಿಸಿದರು. ಮೇಲ್ಮನೆ ಸದಸ್ಯರಾದ ಚೌಡರೆಡ್ಡಿ, ವಿ.ಎಸ್‌.ಸಂಕನೂರ, ಅರುಣ್‌ ಶಹಪುರ, ರಮೇಶ್‌ ಬಾಬು, ಗಣೇಶ್‌ ಕಾರ್ಣಿಕ್‌ ಮೊದಲಾದವರು ಉಪಸ್ಥಿತರಿದ್ದರು.

ಹೋರಾಟದ ಎಚ್ಚರಿಕೆ: ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳಿಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಆದೇಶ ನೀಡುವಂತೆ ಸಚಿವರಿಗೆ ಅನೇಕ ಬಾರಿ ಮನವಿ ಮಾಡಿದ್ದೆವು. ಕೆಲವರಿಗೆ ನೇಮಕಾತಿ ಆದೇಶ ನೀಡಿ, ಇನ್ನು ಕೆಲ ಅಭ್ಯರ್ಥಿಗಳನ್ನು ಸರ್ಕಾರ ಸತಾಯಿಸುತ್ತಿದೆ. ಏ.10ರೊಳಗೆ ಎಲ್ಲರಿಗೂ ಆದೇಶ ಪತ್ರ ನೀಡಲು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರ ಮಾತು ತಪ್ಪಿಸದರೆ ಉಗ್ರ ಹೋರಾಟ ನಡೆಸಲಿದ್ದೇವೆ ಎಂಬ ಎಚ್ಚರಿಕೆಯನ್ನು ಮೇಲ್ಮನೆ ಸದಸ್ಯ ಪುಟ್ಟಣ್ಣ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next