ಜೇವರ್ಗಿ: ನೊಂದವರಿಗೆ, ಸಂಕಷ್ಟದಲ್ಲಿರುವ ಜನರಿಗೆ ನ್ಯಾಯ ಒದಗಿಸಿಕೊಡಲು ಪೊಲೀಸ್ ಇಲಾಖೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಸೊನ್ನ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಬೀಟ್ ಪೊಲೀಸರನ್ನು ನೇಮಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಇಶಾ ಪಂತ್ ಹೇಳಿದರು.
ತಾಲೂಕಿನ ಸೊನ್ನ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿರಕ್ತ ಮಠದ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಲಾಗಿದ್ದ “ನಿಮ್ಮ ಮನೆ ಬಾಗಿಲಿಗೆ ಪೊಲೀಸ್’ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸರ ಜತೆ ಒಡನಾಟ ಇಟ್ಟುಕೊಳ್ಳಲು, ಮುಕ್ತವಾಗಿ ಮಾತನಾಡಲು ಈ ವಿನೂತನ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕಲಬುರಗಿಯಲ್ಲಿ ಹಾಕಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮದಲ್ಲಿ ರಾತ್ರಿ ವೇಳೆ ಪೊಲೀಸರು ಪೆಟ್ರೋಲಿಂಗ್ ಮಾಡುವಂತೆ ಸೂಚಿಸಲಾಗುವುದು. ಪ್ರಾಥಮಿಕ ಶಾಲೆ ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸೊನ್ನ ಕ್ರಾಸ್ ಬಳಿ ಬಸ್ ನಿಲ್ದಾಣ ಸ್ಥಾಪಿಸಬೇಕು. ಹೊರ ಪೊಲೀಸ್ ಠಾಣೆ ಸ್ಥಾಪಿಸಬೇಕು. ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಯಬೇಕು ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮನವಿ ಮಾಡಿದರು.
ಸೊನ್ನ ಮಠದ ಡಾ|ಶಿವಾನಂದ ಸ್ವಾಮೀಜಿ, ಸಿಪಿಐ ಶಿವಪ್ರಸಾದ ಮಠದ್, ಪಿಎಸ್‌ಐ ಗೌತಮ ಗುತ್ತೇದಾರ, ವಿಶ್ವನಾಥ ಭಾಕರೆ, ಎಎಸ್‌ಐ ಗುರುಬಸ್ಸು, ಗ್ರಾಪಂ ಅದ್ಯಕ್ಷ ಶಿವಪ್ಪ ಗುಬ್ಯಾಡ್, ಮುಖಂಡರಾದ ಎಸ್. ಎಸ್. ಸಲಗರ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ನಿಂಗಯ್ಯ ಗುತ್ತೇದಾರ, ಲಕ್ಷ್ಮಣ ಗುಬ್ಯಾಡ, ಅಶೋಕ ಮಾಲಿಪಾಟೀಲ ಕಲ್ಲಹಂಗರಗಿ, ಮಲ್ಲಿಕಾರ್ಜುನ ಬಿರಾದಾರ, ಸದಾನಂದ ಪಾಟೀಲ, ನಿಂಗಣ್ಣ ಕುಂಬಾರ ಕಲ್ಲಹಂಗರಗಿ, ಬಾಪುಗೌಡ ಪಾಟೀಲ ಕಲ್ಲಹಂಗರಗಿ, ಬಸವರಾಜ ಕೊಬ್ರಿಶೆಟ್ಟಿ ಮತ್ತಿತರರು ಇದ್ದರು.