ಬೆಂಗಳೂರು: ಈವರೆಗೆ ಪ್ರಕ್ರಿಯೆಗಷ್ಟೇ ಸೀಮಿತವಾಗಿದ್ದ ಪೌರಕಾರ್ಮಿಕರ ನೇಮಕಾತಿಗೆ ಕೊನೆಗೂ ಬಿಬಿಎಂಪಿ ಚಾಲನೆ ನೀಡಿದೆ. ಬಿಬಿಎಂಪಿಯಲ್ಲಿ ಖಾಲಿ ಇರುವ 3,673 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಬಿಬಿಎಂಪಿಯಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಕಳೆದೆರಡು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿತ್ತು. ಆದರೆ, ಪೌರಕಾರ್ಮಿಕರ ಆಯ್ಕೆಗೆ ಸಂಬಂಧಿಸಿದಂತೆ ನಿಗದಿ ಮಾಡಲಾದ ಷರತ್ತುಗಳು, ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳದ ಕ್ರಮ ಸೇರಿ ಇನ್ನಿತರ ಕಾರಣಗಳಿಂದಾಗಿ ಈವರೆಗೆ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ.ಕಳೆದ ಸಚಿವ ಸಂಪುಟ ಸಭೆ ನಂತರ ಪೌರಕಾರ್ಮಿಕರ ನೇಮಕಕ್ಕೆ ರಾಜ್ಯ ಸರ್ಕಾರ ಗ್ರೀನ್‌ಸಿಗ್ನಲ್ ನೀಡಿತ್ತು. ಆ ಹಿನ್ನೆಲೆಯಲ್ಲಿ ಪೌರಕಾರ್ಮಿಕ ನೇಮಕ ಪ್ರಕ್ರಿಯೆಗೆ ಬಿಬಿಎಂಪಿ ಚಾಲನೆ ನೀಡಿದೆ. ಜ. 16ರಿಂದ ಅರ್ಜಿ ಸಲ್ಲಿಕೆ ಆರಂಭಿಸಲಾಗಿದ್ದು, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಹುದ್ದೆಗಳನ್ನು ಮೀಸಲಿರಿಸಲಾಗಿದೆ.
3,673 ಪೌರಕಾರ್ಮಿಕರ ನೇಮಕ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಪೈಕಿ 2,600 ಕಾಯಂ ಪೌರಕಾರ್ಮಿಕರಿದ್ದಾರೆ. ಉಳಿದಂತೆ 18 ಸಾವಿರ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ 3,673 ಪೌರಕಾರ್ಮಿಕ ಹುದ್ದೆಗೆ ಕಾಯಂ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಲ್ಲಿ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನೇ ನೇಮಕಕ್ಕೆ ಪರಿಗಣಿಸಲಾಗುತ್ತಿದೆ. ಅದರ ಜತೆಗೆ 3,673 ಪೌರಕಾರ್ಮಿಕ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ 430 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಉಳಿದ 3,243 ಹುದ್ದೆಗಳನ್ನು ರಾಜ್ಯದ ಇತರ ಜಿಲ್ಲೆಗಳವರಿಗೆ ನಿಗದಿ ಮಾಡಲಾಗಿದೆ.
ಎಸ್ಸಿ/ಎಸ್ಟಿ ಸಮುದಾಯಕ್ಕೆ 882: ನೇಮಕಾತಿಯಲ್ಲಿ ಎಸ್ಸಿ/ಎಸ್ಟಿ, ಸಾಮಾನ್ಯ ವರ್ಗ, ಪ್ರವರ್ಗ 1, 2ಎ, 2ಬಿ, 3ಎ, 3ಬಿಗೆ ಪ್ರತ್ಯೇಕವಾಗಿ ಹುದ್ದೆಗಳ ಸಂಖ್ಯೆಯನ್ನು ನಿಗದಿ ಮಾಡಲಾಗಿದೆ. ಅದರಲ್ಲಿ ಸಾಮಾನ್ಯ ವರ್ಗದವರಿಗೆ ಅತಿಹೆಚ್ಚು ನಿಗದಿ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕದ ಹುದ್ದೆಗಳೂ ಸೇರಿ ಒಟ್ಟು 1,617 ಸಾಮಾನ್ಯ ವರ್ಗದ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ಪರಿಶಿಷ್ಟ ಜಾತಿಯವರಿಗೆ 624, ಪರಿಶಿಷ್ಟ ಪಂಗಡದವರಿಗೆ 258 ಹುದ್ದೆ ಮೀಸಲಿರಿಸಲಾಗಿದೆ. ಉಳಿದ ಹುದ್ದೆಗಳು ಉಳಿದ ಪ್ರವರ್ಗದವರಿಗೆ ನಿಗದಿ ಮಾಡಲಾಗಿದೆ. ಅಲ್ಲದೆ, ಎಲ್ಲ ವರ್ಗದಲ್ಲೂ ಶೇ. 1 ಹುದ್ದೆಯನ್ನು ತೃತೀಯ ಲಿಂಗಿಗಳಿಗೆ ಮೀಸಲಿರಿಸಲಾಗಿದೆ. ಪ್ರಮುಖವಾಗಿ ಸಾಮಾನ್ಯ ವರ್ಗ ಅಥವಾ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು ನಿಗದಿಯಷ್ಟು ದೊರೆಯದಿದ್ದರೆ ಆ ಹುದ್ದೆಗೆ ಮೀಸಲಾತಿ ಆಧಾರದ ಮೇಲೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಅರ್ಜಿ ಸಲ್ಲಿಕೆ ಆರಂಭ: ಪೌರಕಾರ್ಮಿಕ ಹುದ್ದೆಗೆ ಜ. 16 (ಸೋಮವಾರ)ದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಜ. 30ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಪೌರಕಾರ್ಮಿಕ ಹುದ್ದೆಗೆ ನೇಮಕವಾಗಲು ಬಯಸುವವರು ಆಯಾ ವಾರ್ಡ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಘನತ್ಯಾಜ್ಯ) ಇವರಿಗೆ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10ರಿಂದ ಸಂಜೆ 5.30ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸುವವರ ಗುತ್ತಿಗೆ ಆಧಾರದಲ್ಲಿ ಕನಿಷ್ಠ 2 ವರ್ಷಗಳ ಕಾಲ ಪೌರಕಾರ್ಮಿಕರಾಗಿ ಹಾಲಿ ಕೆಲಸ ಮಾಡಿರಬೇಕಿದೆ. ಅಭ್ಯರ್ಥಿಯ ವಯಸ್ಸು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ 2022ರ ನವೆಂಬರ್ 23ಕ್ಕಿಂತ ಮುಂಚೆ 55 ವರ್ಷಗಳಿಗಿಂತ ಹೆಚ್ಚಿರಬಾರದು ಎಂದು ತಿಳಿಸಲಾಗಿದೆ.
ಇಬ್ಬರು ಪತ್ನಿಯಿದ್ದರೆ ಅನರ್ಹರು: ಅರ್ಜಿ ಸಲ್ಲಿಸುವ ಪುರುಷ ಪೌರಕಾರ್ಮಿಕರಿಗೆ ಇಬ್ಬರು ಪತ್ನಿಯರಿರಬಾರದು ಎಂದು ಷರತ್ತಿನಲ್ಲಿ ಉಲ್ಲೇಖೀಸಲಾಗಿದೆ. ಅದರ ಜತೆಗೆ ಮಹಿಳಾ ಪೌರಕಾರ್ಮಿಕರು ಇಬ್ಬರು ಪತ್ನಿ ಇರುವವರನ್ನು ವಿವಾಹವಾಗಿರಬಾರದು ಎಂದೂ ತಿಳಿಸಲಾಗಿದೆ. ಅಲ್ಲದೆ, ಕ್ರಿಮಿನಲ್ ಪ್ರಕರಣ ಇರುವವರು, ಈ ಹಿಂದೆ ಸೇವೆಯಿಂದ ವಜಾಗೊಂಡವರು ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ. ನಿಗದಿತ ಷರತ್ತುಗಳಿಗೆ ವಿರುದ್ಧವಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಹಾಗೂ ಅಪೂರ್ಣ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಎಂದೂ ಬಿಬಿಎಂಪಿ ಹೇಳಿದೆ. 3,673 ಪೌರಕಾರ್ಮಿಕರ ನೇಮಕಕ್ಕೆ ಸಂಬಂಧಿಸಿದಂತೆ ಇದ್ದಂತಹ ತೊಡಕುಗಳೆಲ್ಲವೂ ನಿವಾರಣೆಯಾಗಿದೆ.
ಸೋಮವಾರದಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಜ. 30 ಅರ್ಜಿ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಅದಾದ ನಂತರ ಅರ್ಜಿ ಪರಿಶೀಲನೆ ಸೇರಿ ಇನ್ನಿತರ ಕೆಲಸ ಮಾಡಲಾಗುವುದು.
–ಡಾ|ಕೆ.ಹರೀಶ್‌ಕುಮಾರ್, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ)
–ಗಿರೀಶ್ ಗರಗ