Advertisement

CAA: ಪೌರತ್ವಕ್ಕಾಗಿ ಅರ್ಜಿ ; ಇಬ್ಬರಿಗೆ ಭಾರತದ ಪೌರತ್ವ ಅನುಮೋದನೆ

01:26 AM Oct 10, 2024 | Team Udayavani |

ಮಂಗಳೂರು: ಸಿಎಎ ಪೌರತ್ವಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರ ಭಾರತದ ಪೌರತ್ವ ಅನುಮೋದನೆಗೊಂಡಿದೆ.

Advertisement

ಸಿಎಎ ಅರ್ಜಿ ಪರಿಶೀಲನೆಗೆ ಅಂಚೆ ಕಚೇರಿ ನೇತೃತ್ವದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಕಾರ್ಯ ನಿರ್ವಹಿಸುತ್ತಿದೆ.

ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕ ಎಂ. ಸುಧಾಕರ ಮಲ್ಯ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸಂವಾದದಲ್ಲಿ ಮಾತನಾಡಿ, 2014 ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದವರಿಗೆ ಪೌರತ್ವ ನೀಡಲಾಗುತ್ತದೆ. ಅವರು ಮೊದಲು ಅಂಚೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಸಮಿತಿಯು ಪರಿಶೀಲಿಸಿ ಆನ್‌ಲೈನ್‌ ಪೋರ್ಟಲ್‌ ಮೂಲಕ ರಾಜ್ಯ ಸಮಿತಿಗೆ ಕಳುಹಿಸಲಿದೆ. ಅದರಂತೆ ಜಿಲ್ಲೆಯ ಇಬ್ಬರು ಪ್ರಜೆಗಳ ಭಾರತೀಯ ಪೌರತ್ವ ರಾಜ್ಯ ಮಟ್ಟದಲ್ಲಿ ಅನುಮೋದನೆಗೊಂಡಿದೆ ಎಂದರು.

ಇಲಾಖೆ ವತಿಯಿಂದ ಅ.7 ರಿಂದ 11ರವರೆಗೆ “ನಮ್ಮ ನಿಮ್ಮೆಲ್ಲರ ಅಭ್ಯುದಯ’ ಎಂಬ ಧ್ಯೇಯ ವಾಕ್ಯದಡಿ ರಾಷ್ಟ್ರೀಯ ಅಂಚೆ ಸಪ್ತಾಹ ನಡೆಯುತ್ತಿದೆ. ಈಗಾಗಲೇ ಪಾರ್ಸೆಲ್‌ ದಿನ, ಅಂಚೆ ಚೀಟಿ ದಿನ, ಜಾಗತಿಕ ಆಂಚೆ ಒಕ್ಕೂಟದಿಂದ ರಾಷ್ಟ್ರೀಯ ಅಂಚೆ ದಿನಾಚರಣೆ ಆಚರಿಸಲಾಯಿತು.

ಅ.10 ರಂದು ಅಂತ್ಯೋದಯ ದಿವಸ ಆಚರಣೆ ನಡೆಯಲಿದ್ದು, ಆಧಾರ್‌, ಪಾನ್‌ ಕಾರ್ಡ್‌ ಸಹಿತ ಹಲವು ನಾಗರಿಕ ಸೇವೆಗೆ ಆದ್ಯತೆ ನೀಡಲಾಗುತ್ತದೆ. ಕೊನೆಯ ದಿನವಾದ ಅ.11 ರಂದು ವಿತ್ತೀಯ ಸಶಸ್ತ್ರೀಕರಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

Advertisement

ಅಂಚೆ ಇಲಾಖೆಯು “ಬರಹಗಾರಿಕೆಯಲ್ಲಿ ಖುಷಿ; ಡಿಜಿಟಲ್‌ ಯುಗದಲ್ಲಿ ಪತ್ರದ ಮಹತ್ವ’ ಕುರಿತು ರಾಷ್ಟ್ರ ಮಟ್ಟದ ಪತ್ರ ಬರಹದ ಸ್ಪರ್ಧೆ ಹಮ್ಮಿಕೊಂಡಿದೆ. 18 ವರ್ಷದೊಳಗಿನವರು ಮತ್ತು 18 ವರ್ಷ ಮೇಲ್ಪಟ್ಟವರು ಈ ಎರಡು ವಿಭಾಗಗಳಲ್ಲಿ ಸ್ಪರ್ದೆ ಇದ್ದು, ಆಸಕ್ತರು ತಮ್ಮ ಬರಹವನ್ನು 1,000 ಪದಗಳ ಒಳಗೆ ಬರೆದು ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕರ ಕಚೇರಿಗೆ ಡಿ.14ರ ಒಳಗೆ ತಲುಪುವಂತೆ ಕಳುಹಿಸಬಹುದು ಎಂದರು.

ಮಂಗಳೂರಿನ 41 ಅಂಚೆ ಕಚೇರಿಯಲ್ಲಿ ಆಧಾರ್‌ ಸೇವಾ ಕೇಂದ್ರ, ಪಾಸ್‌ಪೋರ್ಟ್‌ ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳುವ ಸೇವೆ ಲಭ್ಯವಿದೆ. ವಿದೇಶಿ ರಫ್ತಿಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ಉತ್ತೇಜಿಸಲು ಮಂಗಳೂರಿನಲ್ಲೂ ತೆರೆದ “ಡಾಕ್‌ ನಿರ್ಯಾತ್‌ ಕೇಂದ್ರ’ ಗಳಿಗೆ ಹೆಚ್ಚಿನ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.

ಅಂಚೆ ಅಧಿಕಾರಿಗಳಾದ ದಿನೇಶ್‌ ಪಿ., ವಿಲ್ಸನ್‌ ಡಿಸೋಜ, ಯತಿನ್‌ ಕುಮಾರ್‌, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪ್ರಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next