ಬೆಂಗಳೂರು: ಜಗತ್ತಿನ ಪ್ರತಿಷ್ಠಿತ “ಆ್ಯಪಲ್’ ಸಂಸ್ಥೆ ತನ್ನ ಉತ್ಪಾದನಾ ಘಟಕವನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ ತಯಾರಾಗುವ ಆ್ಯಪಲ್ ಸಂಸ್ಥೆಯ ಮೊಬೈಲ್‌ಗಳು “ಮೇಡ್ ಇನ್ ಇಂಡಿಯಾ’ ಮುದ್ರೆಯೊಂದಿಗೆ ಗ್ರಾಹಕರ ಕೈ ಸೇರಲಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ “ಆ್ಯಪಲ್ ಸಂಸ್ಥೆಯ “ಐ- ಫೋನ್- ಎಸ್‌ಇ’ ಫೋನ್‌ಗಳು ಬೆಂಗಳೂರಿನಲ್ಲಿ ಉತ್ಪಾದನೆಯಾಗಿ “ಮೇಡ್ ಇನ್ ಇಂಡಿಯಾ’ ಮುದ್ರೆಯೊಂದಿಗೆ ಜಗತ್ತಿನ ಮಾರುಕಟ್ಟೆ ತಲುಪುವುದು ಅತ್ಯಂತ ಹೆಮ್ಮೆಯ ಸಂಗತಿ. ಅತ್ಯಂತ ಕಡಿಮೆ ಅವಧಿಯಲ್ಲಿ ಬೆಂಗಳೂರಿನಲ್ಲಿ ಘಟಕ ಆರಂಭಿಸಲು ಸಂಸ್ಥೆ ಮುಂದಾಗಿರುವುದಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ,’ ಎಂದು ಹೇಳಿದ್ದಾರೆ.
“ಸಂಸ್ಥೆಯು ಬೆಂಗಳೂರಿನಲ್ಲಿ ಉತ್ಪಾದನೆ ಕೈಗೊಳ್ಳಲು ಅಗತ್ಯವಿರುವ ಸೌಲಭ್ಯ ಹಾಗೂ ಸಹಕಾರ ನೀಡುವ ಭರವಸೆಯನ್ನು ರಾಜ್ಯ ಸರ್ಕಾರ ಈಗಾಗಲೇ ನೀಡಿದೆ. ಜತೆಗೆ ಸಂಬಂಧಪಟ್ಟವರೊಂದಿಗೆ ಹಲವು ಸುತ್ತಿನ ಸಭೆಗಳನ್ನೂ ನಡೆಸಲಾಗಿದೆ,’ ಎಂದು ಹೇಳಿದ್ದಾರೆ.
“ಆ್ಯಪಲ್ ಸಂಸ್ಥೆಯ ಘಟಕ ಸ್ಥಾಪನೆ ಅವಕಾಶಕ್ಕಾಗಿ ಹಲವು ರಾಜ್ಯಗಳು ಪೈಪೋಟಿ ನಡೆಸಿದ್ದವು. ಆದರೂ ಆ್ಯಪ್ ಸಂಸ್ಥೆ ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಬಂಡವಾಳ ಹೂಡಿಕೆಗೆ ರಾಜ್ಯ ಪ್ರಶಸ್ತ ತಾಣ ಎಂಬುದು ಸಾಬೀತಾಗಿದೆ. ರಾಜ್ಯಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಂದ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಹೆಚ್ಚಿದೆ,’ ಎಂದೂ ಹೇಳಿದ್ದಾರೆ.
“ಆ್ಯಪಲ್‌ನಂತಹ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ತಯಾರಿಕಾ ಘಟಕಗಳನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿರುವುದರಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುವ ಜತೆಗೆ ಸರ್ಕಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಹರಿದುಬರಲಿದೆ,’ ಎಂದು ಹೇಳಿದ್ದಾರೆ.