ಬೆಂಗಳೂರು: ಭಾರತದಲ್ಲಿ ತನ್ನ ವಹಿವಾಟನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಐಫೋನ್ ತಯಾರಕ, ಅಮೆರಿಕಾದ ಆಪಲ್ ಕಂಪೆನಿ ಬೆಂಗಳೂರಿನ ಹೃದಯಭಾಗದಲ್ಲಿ 15 ಅಂತಸ್ತುಗಳ ನೂತನ ಕಚೇರಿಯನ್ನು ಆರಂಭಿಸಿದೆ.
ಆಪಲ್ ನ ನೂತನ ಕಚೇರಿಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದ ಮಿನ್ಸ್ಕ್ ಸ್ಕ್ವೇರ್ನಲ್ಲಿ ತಲೆಯೆತ್ತಿದೆ. ಈ ಕಚೇರಿಯಲ್ಲಿ 1200 ಮಂದಿ ಉದ್ಯೋಗಿಗಳು ಕೆಲಸ ನಿರ್ವಹಿಸಲಿದ್ದಾರೆ.
ಬೆಂಗಳೂರಿನ ಹೃದಯಭಾಗದಲ್ಲಿ ನೂತನ ಕಚೇರಿಯನ್ನು ತೆರೆಯುತ್ತಿರುವುದು ನಮಗೆ ಸಂಭ್ರಮದ ವಿಷಯವಾಗಿದೆ. ಕ್ರಿಯಾಶೀಲ ನಗರವಾದ ಬೆಂಗಳೂರು ನಮ್ಮ ಅನೇಕ ಪ್ರತಿಭಾವಂತ ಉದ್ಯೋಗಿಗಳ ತಂಡಕ್ಕೆ, ಸಾಫ್ಟ್ ವೇರ್, ಹಾರ್ಡ್ ವೇರ್ ತಂತ್ರಜ್ಞಾನ ಕಂಪೆನಿಗಳಿಗೆ ಆಶ್ರಯತಾಣವಾಗಿದೆ. ಹಾಗೆಯೇ ನಮ್ಮ ಆಪಲ್ ಕಂಪೆನಿಯ ನೂತನ ಆವಿಷ್ಕಾರಗಳು, ಕ್ರಿಯಾಶೀಲತೆ, ಸಂಪರ್ಕಗಳಿಗೆ ಅದ್ಭುತ ತಾಣ ಇದಾಗಿದೆ ಎಂದು ಆಪಲ್ ವಕ್ತಾರರು ಸಂತಸ ವ್ಯಕ್ತಪಡಿಸಿದ್ದಾರೆ.
15 ಅಂತಸ್ತುಗಳ ತಮ್ಮ ಕಚೇರಿಯು ವಿಧಾನಸೌಧ, ಹೈಕೋರ್ಟ್, ಸೆಂಟ್ರಲ್ ಲೈಬ್ರರಿಯಂಥ ಸ್ಥಳಗಳ ಸಮೀಪ, ಉದ್ಯಾನವನ ಪ್ರದೇಶದಲ್ಲಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಹತ್ತಿರ ಇರುವುದರಿಂದ ಉದ್ಯೋಗಿಗಳು ಸಾರ್ವಜನಿಕ ಸಾರಿಗೆ ಬಳಸಲು ಅನುಕೂಲಕರವಾಗಿದೆ ಎಂದು ಕಂಪೆನಿ ತಿಳಿಸಿದೆ.
ಈ ಕಚೇರಿಯಲ್ಲಿ ಆಪಲ್ ಉದ್ಯೋಗಿಗಳು ಸಾಫ್ಟ್ ವೇರ್, ಹಾರ್ಡ್ ವೇರ್, ಸರ್ವೀಸ್, ಗ್ರಾಹಕ ಸಂಪರ್ಕ ಇತ್ಯಾದಿ ಕೆಲಸಗಳನ್ನು ನಿರ್ವಹಿಸುತ್ತಾರೆ. ಆಪಲ್ ಭಾರತದಲ್ಲಿ ಒಟ್ಟು ಮೂರು ಸಾವಿರ ಉದ್ಯೋಗಿಗಳನ್ನು ಹೊಂದಿದೆ. ತನ್ನ ವಹಿವಾಟಿನ ಮೂಲಕ ದೇಶಾದ್ಯಂತ ಸಾವಿರಾರು ಜನರಿಗೆ ಉದ್ಯೋಗಾವಕಾಶ ನೀಡಿದೆ ಎಂದು ತಿಳಿಸಿದೆ.
ಈ ಕಚೇರಿಯಲ್ಲಿ ವಿಶಾಲ ಲ್ಯಾಬ್ ಸ್ಥಳಾವಕಾಶವಿದ್ದು, ಸ್ಥಳೀಯವಾಗಿ ಲಭ್ಯವಾಗುವ ಗ್ರಾನೈಟ್ ಹಾಗೂ ಮರಗಳಿಂದ ಕಟ್ಟಡ ನಿರ್ಮಿಸಲಾಗಿದೆ. ಆಪಲ್ ಕಂಪೆನಿಯು ಕಾರ್ಬನ್ ನ್ಯೂಟ್ರಲ್ ಮಾನದಂಡವನ್ನು ಅನುಸರಿಸುತ್ತಾ ಬಂದಿದ್ದು, ಅದರಂತೆ ಈ ನೂತನ ಕಚೇರಿಯು ಶೇ. 100ರಷ್ಟು ಮರುಬಳಕೆ ಮಾಡಬಹುದಾದ ಇಂಧನಗಳ ಬಳಕೆ, ಪರಿಸರ ಸ್ನೇಹಿ ವಿನ್ಯಾಸ (ಲೀಡ್ ಪ್ಲಾಟಿನಂ ರೇಟಿಂಗ್) ಹೊಂದಿದೆ.