ಕೆಜಿಎಫ್: ವಿಚಾರಣೆಗೆ ಬಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಪೈಕಿ ಅಪ್ಪೆನ್ ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.4ರಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಬೆಂಗಳೂರಿನ ಮಹದೇವ ಪುರ ಠಾಣೆಯಿಂದ ಬಂದಿದ್ದ ಸಬ್ ಇನ್ಸ್‌ಪೆಕ್ಟರ್ ಹರಿನಾಥಬಾಬು ಮತ್ತು ತಂಡದವರು ನಡುರಾತ್ರಿ ಅಪ್ಪೆನ್ ಮನೆಗೆ ಹೋಗಿದ್ದರು.
ಆ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಂದ ಅಪ್ಪೆನ್ ಮತ್ತು ಲಾಲ್, ಮಚ್ಚು ಮತ್ತು ದೊಣ್ಣೆಯಿಂದ ಸಬ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದರು. ಈ ಹಂತದಲ್ಲಿ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದರು. ಸ್ಥಳದಿಂದ ಪರಾರಿಯಾದ ಆರೋಪಿಗಳನ್ನು ಬಂಧಿ ಸಲು ತಂಡಗಳನ್ನು ರಚಿಸಲಾಗಿತ್ತು. ಗುರುವಾರ ಬೆಳಗ್ಗೆ ಆತನ ಮನೆಯ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ಮುಂದುವರಿದಿದೆ.
ನಗರದಲ್ಲಿ 16 ಪ್ರಕರಣ:
ಆರೋಪಿ ಅಪ್ಪೆನ್ ಮಾತ್ರ ಸಿಕ್ಕಿದ್ದು, ಲಾಲ್ ಇನ್ನೂ ಸಿಕ್ಕಿಲ್ಲ. ಅಪ್ಪೆನ್ ನಗರದ ಆಂಡರಸನ್ ಪೇಟೆ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಬೆಂಗಳೂರಿನ ಕೆಂಪೇಗೌಡ ನಗರ, ಹೈಗ್ರೌಂಡ್ಸ್, ರಾಮಮೂರ್ತಿ ನಗರ ಮೊದಲಾದ ಕಡೆ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ನಗರ ದಲ್ಲಿ ಕೂಡ 16 ಪ್ರಕರಣಗಳು ಆತನ ಮೇಲಿದೆ ಎಂದು ತಿಳಿಸಿದರು. ಸಮಾಜಕ್ಕೆ ತೊಂದರೆ ಇಲ್ಲದ ವ್ಯಕ್ತಿಗಳನ್ನು ರೌಡಿಶೀಟ್‌ನಿಂದ ತೆಗೆಯ ಲಾಗುವುದು. ಅವರ ಮೇಲೆ ನಿಗಾ ಇಟ್ಟು ನಂತರ ಎಚ್ಚರಿಕೆ ಕೊಟ್ಟು ಕಳಿಸ ಲಾಗುವುದು. ಅಮಾಯಕರ ಮೇಲೆ ರೌಡಿಶೀಟ್ ತೆಗೆಯುವುದಿಲ್ಲ ಎಂದು ಹೇಳಿದರು. ನಗರದಲ್ಲಿ 1050 ರೌಡಿ ಗಳಿದ್ದು, ಅವರನ್ನೆಲ್ಲಾ ಮುಂದಿನ ದಿನಗಳಲ್ಲಿ ಕರೆಸಿ ಎಚ್ಚರಿಕೆ ಕೊಟ್ಟು ಕಳಿಸಲಾಗುವುದು ಎಂದು ಎಸ್ಪಿ ಹೇಳಿದರು. ಡಿವೈಎಸ್ಪಿ ಬಿ.ಕೆ.ಉಮೇಶ್ ಹಾಜರಿದ್ದರು.