ವಿಜಯಪುರ: ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಗರಹುಕುಂ ಸಾಗುವಳಿ ಮಾಡುತ್ತಿರುವ 55 ರೈತರಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರೈತ ಪ್ರಾಂತ ಸಂಘ, ಜನವಾದಿ ಮಹಿಳಾ ಸಂಘ ಹಾಗೂ ಭಾರತಿಯ ದಲಿತ ಪ್ಯಾಂಥರ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ರೈತರು, ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ಸಂಘ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ನಿಡಗುಂದಿ ತಹಶೀಲ್ದಾರ್‌ರಿಗೆ ಇದೇ ವಿಷಯವಾಗಿ 13-3-2019ರಂದು ಅರ್ಜಿ ಸಲ್ಲಿಸಿದ ಅರ್ಜಿಗೆ, 12-5-2022ರಂದು ಹಿಂಬರಹ ಕೊಟ್ಟಿದ್ದಾರೆ. ಸದರಿ ಜಮೀನು ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯಕ್ಕೆ ಸೇರಿದೆ. ಆದರೆ ಸರಕಾರ ಕಂದಾಯ ಹೋಗಿ ಅರಣ್ಯ ಇದ್ದು ಕಂದಾಯ ಇಲಾಖೆಗೆ ಪರಿವರ್ತನೆ ಹೊಂದಿದೆ ಎಂದು ವಿವರಿಸಿದ್ದಾರೆ. 50 ರೈತರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪುನರ್ ವಿಮರ್ಶೆ ಮಾಡಿ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದರು.
ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಸ.ನಂ. 221ರ 109 ಎಕರೆ 34 ಗುಂಟೆ ಅರಣ್ಯ ಪ್ರದೇಶವಿದೆ. ಇದಕ್ಕೆ ಪೂರ್ವವಾಗಿ ಕಂದಾಯ ಇಲಾಖೆಗೆ ಸೇರಿತ್ತು. ಸದರಿ ಭೂಮಿಯನ್ನು 55 ದಲಿತರು ಹಿಂದುಳಿದವರು 2 ಎಕರೆಯಂತೆ ಸುಮಾರು ವರ್ಷಗಳಿಂದ ಬಗರಹುಕುಂ ಸಾಗುವಳಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಬಸವರಾಜ ಗುಡಿಮನಿ ಮಾತನಾಡಿ, ಅರಣ್ಯ ಅಂತ ಪರಿವರ್ತನೆ ಮಾಡಿ ನಮ್ಮನ್ನು ಒಕ್ಕಲೆಬಿಸಿದ್ದು, ಪೊಲೀಸ್ ಪ್ರಕರಣವೂ ದಾಖಲಾಗಿ, ಖುಲಾಸೆಯಾಗಿದೆ. ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದಲ್ಲಿ 500 ಎಕರೆ ಆರಣ್ಯ ಇಲಾಖೆಗೆ ಸೇರಿದ್ದು ಇದರಲ್ಲಿ ಸ.ನಂ.221 ಕ್ಷೇತ್ರ 109 ಎಕರೆ 34 ಗುಂಟೆ ಪ್ರದೇಶದಲ್ಲಿ 55 ಭೂಹೀನ ದಲಿತ, ಹಿಂದುಳಿದವರು ಕಬ್ಜಾ ವಹಿವಾಟುಗಳ ದಾಖಲೆಗಳಿವೆ ಎಂದು ವಿವರಿಸಿದರು. ಹೀಗಾಗಿ ದಾಖಲೆಗಳನ್ನು ಪರಿಶೀಲನೆ ಮಾಡಿ ಅಕ್ರಮ-ಸಕ್ರಮ ಯೋಜನೆಯಲ್ಲಿ ನಮ್ಮ ಸಾಗುವಳಿ ಜಮೀನನ್ನು ಸಕ್ರಮಗೊಳಿಸಿ, ಹಕ್ಕುಪತ್ರ ವಿತರಿಸುವಂತೆ ಮನವಿ ಮಾಡಿದರು. ಸೋಮಪ್ಪ ಮಾದರ, ನೀಲವ್ವ ತಳವಾರ, ಸುರೇಖಾ ರಜಪೂತ ಇದ್ದರು.