ಅಡಹಳ್ಳಿ: ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಸರ್ಕಾರಕ್ಕೆ ತಮ್ಮ ಅಹವಾಲನ್ನು ಹೋರಾಟದ ಮೂಲಕ ಸಲ್ಲಿಸಿ ಸರ್ಕಾರದ ಗಮನ ಸೆಳೆಯಲಾಗುವುದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಬೆಳಗಾವಿ ಜಿಲ್ಲಾ ಅಧ್ಯಕ್ಷ ಈರನಗೌಡ ಪಾಟೀಲ ಮನವಿ ಮಾಡಿದರು.
ಕಟಗೇರಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ನಡೆದ ರೈತ ಸಂಘ ಹಾಗೂ ಹಸಿರುಸೇನೆ ಸಂಘದ ಸದಸ್ಯರುಗಳ ಸಭೆಯಲ್ಲಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ಡಿ.13ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಜಿಲ್ಲಾದ್ಯಂತ ಅಕಾಲಿಕ ಮಳೆಗೆ ನಾಶವಾಗಿರುವ ಬೆಳೆಗೆ ಪರಿಹಾರ ಘೋಷಣೆ ಮಾಡಬೇಕು.
ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಯವರು ಕಬ್ಬಿನ ದರ ನಿಗದಿ ಪಡಿಸಬೇಕು, ಸಿ2 ಪ್ಲಸ್ 50% ಕನಿಷ್ಟ ಬೆಂಬಲ ಬೆಲೆ ಕಾನೂನಾತ್ಮಕವಾಗಿ ಜಾರಿಗೊಳಿಸಿ ವಿದ್ಯುತ್ ಖಾಸಗೀಕರಣ ಹಿಂಪಡೆಯಬೇಕು, ರಾಜ್ಯ ಸರ್ಕಾರದ ಭೂ ಸುಧಾರಣೆ, ಕಾರ್ಮಿಕರ, ಜಾನುವಾರ ಮಾರಾಟ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು, ಶಿವಸಾಗರ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಿಸಿ ರೈತರ ಕಬ್ಬಿನ ಬಾಕಿ ಹಣ ನೀಡಬೇಕು, ರಾಮದುರ್ಗ ತಾಲೂಕಿನ ಪ್ಯಾರಿ ಶುಗರ್ನವರು ರೈತರಿಂದ 2500 ರೂ. ಕಬ್ಬಿನ ದರದ ಒಪ್ಪಿಗೆ ಪತ್ರ ಪಡೆದು ಕಬ್ಬು ಕಟಾವಿಗೆ ಆದೇಶ ನೀಡುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಮದುರ್ಗ ಸುತ್ತಲಿನ ಸಕ್ಕರೆ ಕಾರ್ಖಾನೆಯವರು ನೀಡುವ ಸ್ಪರ್ಧಾತ್ಮಕ ದರ 2700 ನೀಡುವಂತೆ ಪ್ಯಾರಿ ಶುಗರ್ನವರಿಂದಲೂ 2700 ರೂ. ದರ ಕೋಡಿಸಬೇಕು. ಮುಧೋಳ ರನ್ನ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ತೇರದಾಳ ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ 21 ಕೋಟಿ ರೂ. ಕಬ್ಬಿನ ಬಾಕಿ ಹಣ ಕೊಡಿಸಿ ಪುನಃ ಕಾರ್ಖಾನೆ ಪ್ರಾರಂಭಿಸುವ ಕುರಿತು ಸರ್ಕಾರದ ಗಮನ ಸೆಳೆಯಲು ರೈತರ ಆಂದೋಲನ ನಡೆಸಲಾಗುತ್ತಿದ್ದು, ಡಿ.12ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ನ್ಯಾಯಾಲಯ ಹಿಂಭಾಗದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಆಂದೋಲನದಲ್ಲಿ ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಹಾವೇರಿ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಗೋಕಾಕ ತಾಲೂಕು ಅಧ್ಯಕ್ಷ ಬಾಳಪ್ಪ ಬಿರಾದಾರಪಾಟೀಲ, ಅಥಣಿ ತಾಲೂಕು ಅಧ್ಯಕ್ಷ ರಾವಸಾಬ ಜಗತಾಪ, ರೈತ ಮುಖಂಡ ಶಿವಪುತ್ರ ಜಕಬಾಳ, ಯಮನಪ್ಪ ಚಿಂಚನೂರ, ಉದಕುಮಾರ ಪಾಟೀಲ ಸೇರಿದಂತೆ ಇತರರು ಇದ್ದರು.