ಬೆಂಗಳೂರು: ಸಿಲಿಕಾನ್‌ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿ ಆರಂಭಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮ್ಮನ್ನ ಭೇಟಿ ಮಾಡಿದ ಅಮೆರಿಕ ನಿಯೋಗಕ್ಕೆ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಭಾರತದಲ್ಲಿನ ಅಮೆರಿಕ ರಾಯಭಾರಿ ನಿಯೋಗದ ಜತೆ ಚರ್ಚಿಸಿದ ಸಿಎಂ ಕುಮಾರಸ್ವಾಮಿ, ಬೆಂಗಳೂರಿನಿಂದ ಅಮೆರಿಕಗೆ ತೆರಳುವವರಿಗೆ ವೀಸಾ ನೀಡುವ ನಿಟ್ಟಿನಲ್ಲಿ ಈ ಕಚೇರಿಯನ್ನು ತಕ್ಷಣ ಆರಂಭಿಸುವುದು ಅಗತ್ಯವಾಗಿದೆ. ರಾಯಭಾರಿ ಕಚೇರಿ ಆರಂಭಿಸುವ ಸಂಬಂಧ ಅಗತ್ಯವಿರುವ ಜಾಗ ಹಾಗೂ ಇತರ ಎಲ್ಲಾ ಮೂಲ ಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸುತ್ತದೆ ಎಂದು ಭರವಸೆ ನೀಡಿದರು.
ಅಮೆರಿಕದಲ್ಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವರು ಪ್ರಮುಖ ಹಾಗೂ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಪ್ರವಾಸಿ ವೀಸಾದಡಿ ಅಮೆರಿಕಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ರಾಜಧಾನಿಯಲ್ಲೇ ಕಚೇರಿ ಆರಂಭಿಸುವುದರಿಂದ, ವಿವಿಧ ಉದ್ದೇಶಗಳಿಗೆ ಅಮೆರಿಕಗೆ ಭೇಟಿ ನೀಡುತ್ತಿರುವವರಿಗೆ ಅನುಕೂಲವಾಗಲಿದೆ ಎಂದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಭಾರತದಲ್ಲಿರುವ ಅಮೆರಿಕ ರಾಯಭಾರಿ ಜಸ್ಟರ್ ಅವರು, ಈ ಬಗ್ಗೆ ಉನ್ನತ ಹಂತದಲ್ಲಿ ಚರ್ಚಿಸಿ, ರಾಯಭಾರಿ ಕಚೇರಿ ತೆರೆಯಲು ಪ್ರಯತ್ನಿಸುವುದಾಗಿ ತಿಳಿಸಿದರು. ಅಲ್ಲದೆ ಬೆಂಗಳೂರಿನಲ್ಲಿ ಅಮೆರಿಕ ಮೂಲದ 370 ಕಂಪನಿಗಳಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿವೆ. ಈ ಸಂಸ್ಥೆಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಈ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಒದಗಿಸುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಕಾರ್ಯದರ್ಶಿ ರತ್ನಪ್ರಭಾ, ಬೆಂಗಳೂರಿನಲ್ಲಿ ಮೆಟ್ರೋ ರೈಲು, ಎಕ್ಸಪ್ರಸ್ ಹೈವೇ, ಕುಡಿಯುವ ನೀರಿನ ಬಗ್ಗೆ ನಿಯೋಗಕ್ಕೆ ಮನವರಿಕೆ ಮಾಡಿದರು. ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದ್ದನ್ನು ಅಮೆರಿಕಾ ನಿಯೋಗ ಶ್ಲಾ ಸಿತು.
ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್, ಚೆನೈ ಅಮೆರಿಕದ ಕಾನ್ಸುಲ್ ಜನರಲ್ ರಾಬರ್ಟ್ ಜಿ. ಬರ್ಗೆಸ್, ರಾಜಕೀಯ ಹಾಗೂ ಆರ್ಥಿಕ ಅಧಿಕಾರಿ ಜೊಸೆಫ್ ಬರ್ನತ್ ಹಾಗೂ ಸಾರ್ವಜನಿಕ ಅಧಿಕಾರಿ ಲಾರೆನ್ ಲವಲೇಸ್ ನಿಯೋಗದಲ್ಲಿದ್ದರು. ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ವಿಜಯ ಭಾಸ್ಕರ್, ಡಿ.ವಿ. ಪ್ರಸಾದ್, ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.