Advertisement

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕಾಗಿ ಅನುದಾನಕ್ಕೆ ಕೇಂದ್ರಕ್ಕೆ ಮನವಿ

06:31 PM Oct 08, 2021 | Team Udayavani |

ನವದೆಹಲಿ: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಎನ್‍ಎಚ್‍ಎಂ ಅಡಿ ಅನುದಾನ ನೀಡಲು ಕೇಂದ್ರ ಸರಕಾರಕ್ಕೆ ಕೋರಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ಸಚಿವ ಡಾ.ಕೆ.ಸುಧಾಕರ್ ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ, ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಆರೋಗ್ಯ ಸಚಿವರು, ರಾಜ್ಯ ಕೋವಿಡ್ ನಿರ್ವಹಣೆಯಲ್ಲಿ ಸಾಧಿಸಿರುವ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಲಸಿಕೆ ಡೋಸ್ ಸಂಗ್ರಹವಿದೆ. ಮೊದಲ ಡೋಸ್ ನಲ್ಲಿ ಶೇ.82 ಹಾಗೂ ಎರಡೂ ಡೋಸ್ ನಲ್ಲಿ ಒಟ್ಟು ಶೇ.37 ರಷ್ಟು ಪ್ರಗತಿಯಾಗಿದೆ. ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ ಎನ್‍ಎಚ್‍ಎಂ ಅಡಿಯಲ್ಲಿ ಹೆಚ್ಚು ಅನುದಾನ ಬೇಕಿದೆ ಎಂದು ಕೋರಲಾಗಿದೆ. ಇದಕ್ಕೆ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿದೆ. ಜಿಲ್ಲೆಗಳಲ್ಲಿ ತುರ್ತು ಘಟಕ, ದ್ವಿತೀಯ, ತೃತೀಯ ಹಂತದ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಬಗ್ಗೆಯೂ ಚರ್ಚಿಸಲಾಗಿದೆ. ರಾಜ್ಯದಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ಮಕ್ಕಳಿಗೆ ನೀಡಲಾಗುವ ಲಸಿಕೆಗೆ ನಾವೂ ಕಾಯುತ್ತಿದ್ದೇವೆ. ಇದು ಇನ್ನೂ ಪ್ರಯೋಗದ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಲಸಿಕೆ ತಯಾರಿಕಾ ಕಂಪನಿಗಳೊಂದಿಗೆ ಚರ್ಚಿಸಿದ ಬಳಿಕ ಕೇಂದ್ರ ಸರಕಾರ ಈ ಬಗ್ಗೆ ಪ್ರಕಟಿಸಲಿದೆ. ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆಗೆ ಮಾರ್ಗಸೂಚಿ ನೀಡಲಾಗಿದೆ. ಕೊರೊನಾ ಪರೀಕ್ಷೆಯನ್ನು ನಿರಂತರವಾಗಿ ಮಾಡುತ್ತಿದ್ದು, ನಿತ್ಯ ಒಂದೂವರೆ ಲಕ್ಷ ಪರೀಕ್ಷೆ ನಡೆಯುತ್ತಿದೆ. ಪಾಸಿಟಿವಿಟಿ ದರ 0.4% ಗಿಂತಲೂ ಕಡಿಮೆ ಇದೆ. ಆದ್ದರಿಂದ ಹೆಚ್ಚು ಆತಂಕವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next