ಪಣಜಿ: ದೇಶದಲ್ಲಿ ರಾಜ್ಯ ರಾಜ್ಯಗಳ ನಡುವೆ ನಡೆಯುತ್ತಿರುವ ವಾದ ವಿವಾದಗಳು ಹೊಸತೇನಲ್ಲ. ಇದೀಗ ದ್ವೀಪಗಳನ್ನು ತಮ್ಮ ವ್ಯಾಪ್ತಿಗೆ ಪಡೆದುಕೊಳ್ಳಲು ರಾಜ್ಯಗಳ ನಡುವೆ ಪ್ರಯತ್ನ ನಡೆಯುತ್ತಿದೆ. ಗೋವಾ ಸರಕಾರವು ಕರ್ನಾಟಕದ ಬಳಿಯಿರುವ 12 ದ್ವೀಪಗಳನ್ನು ಪಡೆದುಕೊಳ್ಳಲು ಭಾರತ ಸರಕಾರದ ಬಳಿ ಮನವಿ ಮಾಡಿದ್ದು ಈ ಕುರಿತ ಪತ್ರವನ್ನು ಕೇಂದ್ರಕ್ಕೆ ಕಳುಹಿಸಿದೆ. ಭಾರತ ಸರಕಾರವು ಈ ಪತ್ರವನ್ನು ಕರ್ನಾಟಕಕ್ಕೆ ಕಳುಹಿಸಿದೆ ಎನ್ನಲಾಗಿದ್ದು ಕರ್ನಾಟಕ ಸರಕಾರವು ಕಾರವಾರ ಜಿಲ್ಲಾಧಿಕಾರಿಗಳಿಗೆ ಸರ್ವೆ ನಡೆಸಲು ಆದೇಶ ಹೊರಡಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಕಾರವಾರದ ಸಮೀಪವಿರುವ ಅಂಜಿವಾಡಾ, ಕೂರ್ಮಗಡ, ದೇವಗಡ, ಗುಂಜಿ, ಜನಿಗುಡ್ಡ, ಮದಲಿಗುಡ್ಡ, ಸೇರಿದಂತೆ 12 ದ್ವೀಪಗಳನ್ನು ಪಡೆದುಕೊಳ್ಳಲು ಗೋವಾ ಸರಕಾರ ಪ್ರಯತ್ನ ನಡೆಸಿದೆ.
ಈ ಕುರಿತ ಪತ್ರವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸರಕಾರವು ಕೇಂದ್ರ ಗೃಹಮಂತ್ರಾಲಯಕ್ಕೆ ಕಳುಹಿಸಿದೆ. ಈ ಕುರಿತು ಸಂಬಂಧಿತ ದ್ವೀಪಗಳಿಗೆ ಸಂಬಂಧಿಸಿದ ವರದಿಯನ್ನು ಕಳುಹಿಸುವಂತೆ ಕೇಂದ್ರವು ಕರ್ನಾಟಕ ಸರಕಾರಕ್ಕೆ ಸೂಚನೆ ನೀಡಿದೆ ಎನ್ನಲಾಗಿದೆ. ಈ ದ್ವೀಪಗಳು ಕರ್ನಾಟಕ ಕಡಲ ತೀರದಿಂದ ಸುಮಾರು 12 ರಿಂದ 15 ನಾಟಿಕಲ್ ಮೈಲಿ ದೂರವಿದ್ದು ಭೌಗೋಳಿಕವಾಗಿ ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. 1947 ರಲ್ಲಿ ಭಾರತ ಬ್ರಿಟೀಷರಿಂದ ಸ್ವಾತಂತ್ರ್ಯಗೊಂಡರೂ ಪೋರ್ಚುಗೀಸರು ಗೋವಾದಲ್ಲಿ ಆಡಳಿತ ಕೊನೆಗೊಳಿಸಿರಲಿಲ್ಲ. ಹೀಗಾಗಿ ಈ ನಡುಗಡ್ಡೆಗಳು ಸ್ವಾತಂತ್ರ್ಯದ ಬಳಿಕ ದಶಕಗಳ ಕಾಲ ಪೋರ್ಚುಗೀಸರ ಹಿಡಿತದಲ್ಲಿಯೇ ಇದ್ದ ಕಾರಣ ಅವು ಗೋವಾ ರಾಜ್ಯದ ಹೆಸರಿನಲ್ಲಿಯೇ ದಾಖಲಾಗಿದ್ದವು.
ಪೋರ್ಚುಗೀಸರು ಭಾರತ ಬಿಟ್ಟು ತೆರಳಿದ ಬಳಿಕ ಕರ್ನಾಟಕದ ಕಂದಾಯ ಇಲಾಖೆ ಈ ನಡುಗಡ್ಡೆಗಳನ್ನು ತನ್ನ ಹೆಸರಿಗೆ ಮಾಡಿಕೊಳ್ಳಬೇಕಿತ್ತು. ಆದರೆ ಕಂದಾಯ ಭೂ ದಾಖಲೆ ಪುಟದಲ್ಲಿ ಇವುಗಳ ಸೇರ್ಪಡೆ ಆಗಿಲ್ಲ. ಹೀಗಾಗಿ 500 ವರ್ಷದ ಹಿಂದಿನ ದಾಖಲೆಯ ಪ್ರಕಾರ ಈ ನಡುಗಡ್ಡೆಗಳು ಇನ್ನೂ ಗೋವಾದ ಹೆಸರಿನಲ್ಲೇ ಇದೆ. ಆದರೆ ಹೆಸರಿಗೆ ಮಾತ್ರ ಕಾರವಾರ ಬಳಿಯ ನಡುಗಡ್ಡೆಗಳಾಗಿ ರಾಜ್ಯಕ್ಕೆ ಸೀಮಿತವಾಗಿದೆ.
ಕಾರವಾರ ಬಳಿಯ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಗುಡಿಯಿದ್ದು ಅಲ್ಲಿನ ಪೂಜಾ ಕೈಂಕರ್ಯಗಳನ್ನು ಕಾರವಾರದ ಕಡವಾಡದ ಮನೆತನವೇ ನೋಡಿಕೊಳ್ಳುತ್ತಿದೆ.