ಇಂಡಿ: ತಾಲೂಕಿನಾದ್ಯಂತ ಗ್ರಾಮೀಣ ಭಾಗದ ರೈತರಿಗೆ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಮತ್ತು ರೈತರು ಹೆಸ್ಕಾಂ ಇಲಾಖೆ ಅಧಿಕಾರಿ ಎಸ್.ಆರ್. ಮೇಡೆಗಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ಇಂಡಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಇಂತಹ ಸಂದರ್ಭದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಕಳೆದ ಒಂದು ವಾರದಿಂದ ಸಿಂಗಲ್ ಫೇಸ್ ವಿದ್ಯುತ್ ಕಡಿತಗೊಳಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ರೈತರಿಗೆ ಅತೀವ ತೊಂದರೆಯಾಗಿದೆ. ಕಾರಣ ಕೆಪಿಟಿಸಿಎಲ್ ಅಧಿಕಾರಿಗಳು ಈ ಕೂಡಲೇ ಸಿಂಗಲ್ ಫೇಸ್ ವಿದ್ಯುತ್ ಸರಬರಾಜನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಹಾಗೂ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ಮಕ್ಕಳಿಗೆ ಓದಿಕೊಳ್ಳಲು ವಿದ್ಯುತ್ ಅವಶ್ಯಕತೆ ಇದೆ. ಕಾರಣ ಕಡಿತಗೊಳಿಸಿರುವ ಸಿಂಗಲ್ ಫೇಸ್ ವಿದ್ಯುತ್ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಮನವಿ ಮಾಡಿಕೊಂಡರು.
ವಿಜಯಪುರ ಜಿಲ್ಲೆಯಿಂದ ಥರ್ಮಲ್ ವಿದ್ಯುತ್ ಉತ್ಪಾದನೆ, ಜಲ ವಿದ್ಯುತ್ ಉತ್ಪಾದನೆ, ವಿಂಡ್ ವಿದ್ಯುತ್ ಉತ್ಪಾದನೆಯಿಂದ ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಒದಗಿಸಲಾಗುತ್ತಿದೆ. ಆದರೂ ಇಂಡಿ ಭಾಗದ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಕಡಿತ ಮಾಡುತ್ತಿರುವುದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದರು.
ಸಿದ್ದು ಡಂಗಾ, ಮಹಿಬೂಬ ಬೇವನೂರ, ಹನುಮಂತ ಕನ್ನೊಳ್ಳಿ, ಮರೆಪ್ಪ ಗಿರಣಿವಡ್ಡರ, ಶಿವಾನಂದ ಹಂಜಗಿ, ರಾಜು ಮುಲ್ಲಾ, ಶಾಮ ಪೂಜಾರಿ, ದುಂಡು ಬಿರಾದಾರ, ಬಾಷಾ ಇಂಡಿಕರ, ಸಂಜು ಪಾಯಕರ, ಬಸವರಾಜ ಹಂಜಗಿ, ನಿಯಾಜ್ ಅಗರಖೇಡ, ಪಿಂಟು ಜಾಧವ, ಮೌಲಾಸಾಬ ಲಿಂಗಸೂರ, ಸಾಯಬಲಾಲ್ ಚಬನೂರ, ಮಾಳು ಮ್ಯಾಕೇರಿ, ಸಿದ್ದು ಬಿರಾದಾರ ಮತ್ತಿತರರಿದ್ದರು.