ರಾಯಚೂರು: ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ಶುಕ್ರವಾರ ದಲಿತರ ಮೇಲೆ ಹಲ್ಲೆ ನಡೆಸಿ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಜರುಗಿಸುವಂತೆ ದಲಿತ ಮಹಾಸಭಾದ ಸದಸ್ಯರು ಒತ್ತಾಯಿಸಿದರು.
ಈ ಕುರಿತು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಮಹಾಸಭಾದ ಸದಸ್ಯರು, ಕುನ್ನಟಗಿ ಗ್ರಾಮದ ಹಿರೇಬಸಪ್ಪ, ಸಣ್ಣ ಬಸಪ್ಪ ಎನ್ನುವ ದಲಿತರ ಮನೆಗಳಿಗೆ ಖಾದರಬಾಷಾ, ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ 30 ಜನ ದಾಳಿ ಮಾಡಿದ್ದಾರೆ.
ಸೆ.23ನಲ್ಲಿ ಹಿರೇಬಸಪ್ಪ ಅವರ ಮಗನಾದ ಜಮದಗ್ನಿ ಅವರನ್ನು ಕೊಲೆಗೈಯ್ಯಲಾಗಿದೆ. ಈ ಪ್ರಕರಣದಲ್ಲಿ ಲಕ್ಷ್ಮೀಕಾಂತರೆಡ್ಡಿ ಸೇರಿ 14 ಜನರ ಮೇಲೆ ದೂರು ದಾಖಲಾಗಿದೆ. ಆದರೆ, 8 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇನ್ನೂ 6 ಜನರನ್ನು ಬಂಧಿಸಿಲ್ಲ. ಇದರಲ್ಲಿ ಪೊಲೀಸರ ವೈಫಲ್ಯ ಕಂಡುಬರುತ್ತದೆ. ಈ ಘಟನೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
ಬಂಧನವಾಗಿದ್ದ ಎಂಟು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದವರೊಂದಿಗೆ ಇನ್ನೂ ಕೆಲವರು ಸೇರಿಕೊಂಡು ದಲಿತರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಘಟನೆ ನಿಯಂತ್ರಿಸುವಲ್ಲಿ ವಿಫಲಗೊಂಡ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದರು.
ಸಂಘಟನೆ ಜಿಲ್ಲಾಧ್ಯಕ್ಷ ಕೆ.ಇ. ಕುಮಾರ, ಸದಸ್ಯರಾದ ಪ್ರಾಣೇಶ ಮಂಚಾಲ, ಮಲ್ಲೇಶ ಕೊಲುಮಿ, ವೆಂಕಟೇಶ ಕಲ್ಲೂರು, ಮಾರೆಪ್ಪ, ಬಿ.ಕೆ.ಬಾಬು ಸೇರಿ ಇತರರಿದ್ದರು.