ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್‌ನ ವಿಜೇತ ಅಭ್ಯರ್ಥಿ (ಸದ್ಯ ಅನರ್ಹ)
ಎನ್. ಮುನಿರತ್ನ ಚುನಾವಣ ಅಕ್ರಮ ಎಸಗಿದ್ದು, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ವಿಜೇತ ಎಂದು ಘೋಷಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಮಧ್ಯಾಂತರ ಮನವಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇದರೊಂದಿಗೆ ಚುನಾವಣ ಆಯೋಗಕ್ಕೆ ಇಷ್ಟು ದಿನ ಉಪ ಚುನಾವಣೆ ನಡೆಸಲು ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.
ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳಲ್ಲಿ ಒಂದನ್ನು ತಿರಸ್ಕರಿಸಿರುವ ನ್ಯಾಯಪೀಠ, ಮುನಿರತ್ನ ಸಲ್ಲಿಸಿದ್ದ ಮೂರು ಮಧ್ಯಂತರ ಅರ್ಜಿಗಳಲ್ಲಿ ಒಂದನ್ನು ಅಂಗೀಕರಿಸಿದ್ದು ಎರಡನ್ನು ತಿರಸ್ಕರಿಸಿದೆ.
ಚುನಾವಣಾ ಅಕ್ರಮ ಎಸಗಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಲು ಕೋರಿದ ಅಂಶವನ್ನು ತಿದ್ದುಪಡಿ ಅರ್ಜಿಯಲ್ಲಿ ಸೇರಿಸಲು ನ್ಯಾಯಪೀಠ ಅರ್ಜಿದಾರರಿಗೆ ಅವಕಾಶ ಕಲ್ಪಿಸಿದೆ. ಮೂಲ ಅರ್ಜಿಯಲ್ಲಿ ಈ ಅಂಶ ಇರಲಿಲ್ಲ ಎಂಬ ಕಾರಣಕ್ಕೆ ಈಗ ಅದನ್ನು ಸೇರ್ಪಡೆ ಮಾಡಿ ವಿಚಾರಣೆ ನಡೆಸಬೇಕು ಎಂಬ ತುಳಸಿ ಮುನಿರಾಜು ಗೌಡರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.
ತುಳಸಿ ಮುನಿರಾಜುಗೌಡ ಕೋರಿರುವ ಮನವಿಯಲ್ಲಿ ಎರಡು ಮಧ್ಯಂತರ ಅರ್ಜಿಗಳನ್ನು ವಜಾ ಮಾಡಬೇಕು ಎಂಬ ಮುನಿರತ್ನ ಅವರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.
ಮುನಿರತ್ನ ಚುನಾವಣಾ ಭ್ರಷ್ಟಾಚಾರ ಮಾಡಿದ್ದಾರೆ. ನಕಲಿ ಮತದಾರರ ಚೀಟಿಗಳ ಮುಖಾಂತರ ಮತದಾನ ಮಾಡಿಸಿಕೊಂಡು ಗೆದ್ದಿದ್ದಾರೆ. ಒಂದು ವೇಳೆ ಈ ಅಕ್ರಮ ನಡೆಯದೇ ಹೋಗಿದ್ದರೆ ಮುನಿರತ್ನ ಅವರಿಗೆ ದಕ್ಕಬಹುದಾಗಿದ್ದ ಮತಗಳು ನನಗೇ ದಕ್ಕುತ್ತಿದ್ದವು. ಹಾಗಾಗಿ ನಾನೇ ಗೆಲ್ಲುತ್ತಿದ್ದೆ ಎಂಬ ಅಂಶವನ್ನೂ ಮೂಲ ಅರ್ಜಿಯ ಮನವಿಯಲ್ಲಿ ಸೇರ್ಪಡೆ ಮಾಡಿಕೊಂಡು ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಬೇಕು ಎಂದು ತುಳಸಿ ಮುನಿರಾಜುಗೌಡ ಕೋರಿದ್ದರು.