Advertisement

ನಿರಾಶ್ರಿತರ ಭರವಸೆಯಾಗಿ ಬರಲಿದೆ ಆ್ಯಪ್‌

06:34 AM Feb 03, 2019 | |

ಬೆಂಗಳೂರು: ಮನೆ ತೊರೆದು ಬಂದು ಬೆಂಗಳೂರಿನ ಹಾದಿ-ಬೀದಿಯಲ್ಲಿ ವಾಸವಿರುವ ನಿರಾಶ್ರಿತರ ನೆರವಿಗೆ ಬಿಬಿಎಂಪಿ ಧಾವಿಸಿದ್ದು, ಮರಳಿ ಅವರನ್ನು ಕುಟುಂಬದ ಜತೆ ಸೇರಿಸಲು ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಲಿದೆ.

Advertisement

ಬೆಂಗಳೂರಿನ ಕೇಂದ್ರ ಭಾಗದ ಮೂರು ವಲಯಗಳಲ್ಲಿ ವಸತಿ ರಹಿತ ನಿರಾಶ್ರಿತರ ಸಮೀಕ್ಷೆ ಪೂರ್ಣಗೊಳಿಸಿರುವ ಅಧಿಕಾರಿಗಳು, ಉಳಿದ ಐದು ವಲಯಗಳಲ್ಲಿಯೂ ಸಮೀಕ್ಷೆ ಆರಂಭಿಸಿದ್ದಾರೆ. ಸಮೀಕ್ಷೆಯ ವೇಳೆ ದೇಶದ ನಾನಾ ರಾಜ್ಯಗಳಿಂದ ಹಾಗೂ ರಾಜ್ಯ ವಿವಿಧ ಜಿಲ್ಲೆಗಳಿಂದ ಜನರು ಬೆಂಗಳೂರಿಗೆ ಬಂದು ಫ‌ುಟ್‌ಪಾತ್‌, ಉದ್ಯಾನಗಳಲ್ಲಿ ವಾಸಿಸುತ್ತಿರುವುದು ಬೆಳಕಿಗೆ ಬಂದಿದೆ.

ಕುಟುಂಬ ಕಲಹಗಳಿಂದ ಬೇಸರಗೊಂಡು, ಗುಣವಾಗದ ಕಾಯಿಲೆಯಿಂದ ಬಳಲುತ್ತಿರುವ ಹಾಗೂ ಮರೆವು ಕಾಯಿಲೆಯವರು ನಗರಕ್ಕೆ ಬಂದಿರುವ ಉದಾಹರಣೆಗಳಿವೆ. ನಗರಕ್ಕೆ ಬಂದು ಹಲವು ವರ್ಷ ಕಳೆದರೂ ಅವರು ವಾಪಸ್‌ ಹೋಗಿಲ್ಲ. ಜತೆಗೆ ತಮ್ಮ ಊರು, ಕುಟುಂಬದವರನ್ನು ಮರೆತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಮನೆ ತೊರೆದು ಬಂದವರನ್ನು ಮತ್ತೆ ಕುಟುಂಬದ ಜತೆ ಸೇರಿಸುವ ಪ್ರಯತ್ನಕ್ಕೆ ಪಾಲಿಕೆ ಕೈ ಹಾಕಿದ್ದು, ಕಳೆದು ಹೋದವರನ್ನು ಹುಡುಕುವ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ತಪ್ಪಿ ಹೋದವರನ್ನು ಮರಳಿ ಕುಟುಂಬ ಸೇರಿಸುವ ಕಾರ್ಯದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಘಗಳೊಂದಿಗೆ ಮಾತುಕತೆ ನಡೆಸಿರುವ ಅಧಿಕಾರಿಗಳು, ರಾಜ್ಯ ಪೊಲೀಸ್‌ ಇಲಾಖೆ ಸಹಕಾರ ಪಡೆಯಲು ನಿರ್ಧರಿಸಿದೆ.

ನಿರಾಶ್ರಿತರ ಸಂಪೂರ್ಣ ಮಾಹಿತಿ ಲಭ್ಯ: ಸಮೀಕ್ಷೆಯ ವೇಳೆ ಅಧಿಕಾರಿಗಳು ನಿರಾಶ್ರಿತರನ್ನು ಭೇಟಿ ಮಾಡಿ, ಅವರು ಎಲ್ಲಿಂದ ಬಂದಿದ್ದಾರೆ, ವಯಸ್ಸು, ಆರೋಗ್ಯದ ಸ್ಥಿತಿ, ನಗರಕ್ಕೆ ಬಂದು ಎಷ್ಟು ಕಾಲವಾಗಿದೆ, ಮನೆ ಬಿಟ್ಟು ಬರಲು ಕಾರಣವೇನು? ಎಂಬ ಪ್ರಶ್ನೆಗಳಿಗೆ ಅವರಿಂದ ಉತ್ತರ ಪಡೆದಿದ್ದಾರೆ. ಜತೆಗೆ ಅವರು ಯಾವ ಭಾಷೆ ಮಾತನಾಡುತ್ತಿದ್ದಾರೆ ಎಂಬ ಮಾಹಿತಿಯೊಂದಿಗೆ ಅವರ ಫೋಟೋ ಸಂಗ್ರಹಿಸಲಾಗಿದೆ.

Advertisement

40 ವರ್ಷ ಮೀರಿದವರೇ ಹೆಚ್ಚು: ಪಾಲಿಕೆಯಿಂದ ಈವರೆಗೆ ನಡೆಸಿರುವ ಸಮೀಕ್ಷೆಯಲ್ಲಿ 40 ವರ್ಷ ಮೀರಿದ ನಿರಠಾಶ್ರಿತರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡುಬಂದಿದೆ. ಪ್ರಮುಖವಾಗಿ ಕೌಟುಂಬಿಕ ಕಲಹ ಹಾಗೂ ಗುಣವಾಗದ ಕಾಯಿಲೆಗೆ ಒಳಗಾಗಿ ಕುಟುಂಬದವರಿಗೆ ಹೊರೆಯಾಗದಿರಲು ನಿರ್ಧರಿಸಿ ಮನೆ ತೊರೆದಿರುವುದು ಕಂಡು ಬಂದಿದೆ. ನಿರಾಶ್ರಿತರಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆ, ಪಂಜಾಬಿ ಭಾಷಿಗರಿದ್ದು, ಉತ್ತರ ಕರ್ನಾಟಕ, ಮೈಸೂರು, ಮಂಡ್ಯ, ಕರಾವಳಿ ಹೀಗೆ ರಾಜ್ಯದ ಎಲ್ಲ ಭಾಗಗಳ ಜನ ಸಿಕ್ಕಿದ್ದಾರೆ.

ಆ್ಯಪ್‌ ಹೇಗೆ ಕೆಲಸ ಮಾಡುತ್ತದೆ?: ಪಾಲಿಕೆ ಅಭಿವೃದ್ಧಿಪಡಿಸುತ್ತಿರುವ ಆ್ಯಪ್‌ನಲ್ಲಿ ಸಮೀಕ್ಷೆಗೆ ಒಳಪಟ್ಟ ಎಲ್ಲ ನಿರಾಶ್ರಿತರ ಮಾಹಿತಿಯನ್ನು ಫೋಟೋ ಸಹಿತ ಅಪ್‌ಲೋಡ್‌ ಮಾಡಲಾಗುತ್ತದೆ. ಬಳಿಕ ಕಳೆದು ಹೋದವರನ್ನು ಹುಡುಕುವ ಕಾರ್ಯದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರುವ ಇತರೆ ರಾಜ್ಯಗಳಲ್ಲಿನ ಸಂಸ್ಥೆಗಳಿಗೆ ಆ್ಯಪ್‌ ಕುರಿತು ಮಾಹಿತಿ ನೀಡಲಾಗುತ್ತದೆ.

ಜತೆಗೆ ವ್ಯಕ್ತಿ ಕಳೆದುಹೋದಾಗ ಸಂಬಂಧಿಕರು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸುವುದರಿಂದ ಪೊಲೀಸರ ಜತೆ ಸಮನ್ವಯ ಸಾಧಿಸಿದರೆ, ನಿರಾಶ್ರಿತರನ್ನು ಬೇಗ ಮನೆಗೆ ತಲುಪಿಸಬಹುದು. ಆ ಹಿನ್ನೆಲೆಯಲ್ಲಿ ಈ ಕುರಿತು ಹಿರಿಯ ಅಧಿಕಾರಿಗಳು ಪೊಲೀಸ್‌ ಇಲಾಖೆಯೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರಿಗೆ ಸೂರು, ತರಬೇತಿ: ನಗರದ ಎಲ್ಲಾ ವಲಯಗಳಲ್ಲಿ ಸಮೀಕ್ಷೆ ನಡೆಸಿ ನಿರಾಶ್ರಿತರಿಗೆ ಸೂರು ಕಲ್ಪಿಸಲು ನಿರ್ಧರಿಸಿರುವ ಅಧಿಕಾರಿಗಳು, ಲೈಂಗಿಕ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ ಒದಗಿಸಲು ಯೋಜನೆ ರೂಪಿಸಿದ್ದಾರೆ. ಜತೆಗೆ ಅವರನ್ನು ಸ್ವವಲಂಬಿಗಳನ್ನಾಗಿಸುವ ಉದ್ದೇಶದಿಂದ ಟೈಲರಿಂಗ್‌, ಕ್ಯಾಂಡಲ್‌ ತಯಾರಿಕೆ, ಕೈತೋಟ, ಕಂಪ್ಯೂಟರ್‌ ತರಬೇತಿಯಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

ಈಗಾಗಲೇ ಉಪ್ಪಾರಪೇಟೆ ಪೊಲೀಸ್‌ಠಾಣೆ ಸಮೀಪವಿರುವ ಪಾಲಿಕೆಯ ಕಟ್ಟಡದಲ್ಲಿ 100 ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಪಾಲಿಕೆಯ ಕಲ್ಯಾಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು. 

ಐದು ವಲಯಗಳಲ್ಲಿ ನಿರಾಶ್ರಿತರ ಸಮೀಕ್ಷೆ ನಡೆಸುತ್ತಿದ್ದು, ಮನೆ ಬಿಟ್ಟು ಬಂದವರನ್ನು ಮರಳಿ ಮನೆಗೆ ಸೇರಿಸುವ ಉದ್ದೇಶದಿಂದ ಆ್ಯಪ್‌ ಅಭಿವೃದ್ಧಿಸಲಾಗುತ್ತಿದೆ. ಜತೆಗೆ ಮನೆಯಿಂದ ಹೊರದೂಡಲ್ಪಟ್ಟ ಲೈಂಗಿಕ ಅಲ್ಪಸಂಖ್ಯಾತರು ಬದಕು ರೂಪಿಸಿಕೊಳ್ಳಲು ವಸತಿ, ತರಬೇತಿ ಕಲ್ಪಿಸುವ ಚಿಂತನೆಯಿದೆ.
-ಜಗದೀಶ್‌, ಉಪ ಆಯುಕ್ತರು (ಕಲ್ಯಾಣ)

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next