ಚೆನ್ನೈ : ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿರುವ ಕಮಲ್ ಹಾಸನ್ ಅವರು ಅಚ್ಚರಿಯ ಯೂ ಟರ್ನ್ ನಲ್ಲಿ ಈ ಹಿಂದೆ ನೋಟ್ ಬ್ಯಾನ್ ಕ್ರಮವನ್ನು ಬೆಂಬಲಿಸಿದ್ದಕ್ಕೆ ತಡವಾಗಿ ಜನತೆಯ ಕ್ಷಮೆ ಯಾಚಿಸಿದ್ದಾರೆ…!
ತಮಿಳು ನಿಯತಕಾಲಿಕೆ ವಿಕಟನ್‌ಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಸರ್ಕಾರದ ಅಪನಗದೀಕರಣದ ನಿರ್ಧಾರವನ್ನು ತರಾತುರಿಯಲ್ಲಿ ಬೆಂಬಲಿಸಿದ್ದಕ್ಕಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ.
‘ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂಬ ಕಾರಣಕ್ಕೆ ನಾನು ಅಪನಗದೀಕರಣಕ್ಕೆ ಬೆಂಬಲ ನೀಡಿದ್ದೆ . ಆದರೆ ನನ್ನ ನಿರ್ಧಾರಕ್ಕೆ ಅರ್ಥಶಾಸ್ತ್ರ ತಿಳಿದವರು ಟೀಕೆಗಳನ್ನು ಮಾಡಿದ್ದರು. ಆ ಬಳಿಕ ನಾನು ಯೋಜನೆ ಒಳ್ಳೆಯದೆ ಆದರೂ ಕಾರ್ಯಗತಗೊಳಿಸುವಲ್ಲಿ ಸಮಸ್ಯೆಗಳಿರುವ ಬಗ್ಗೆ ಹೇಳಿದ್ದೆ’ ಎಂದಿದ್ದಾರೆ.
ಇದೇ ವೇಳೆ ಮೋದಿಗೆ ಟಾಂಗ್ ನೀಡಿರುವ ಕಮಲ್ ‘ಒಬ್ಬ ಒಳ್ಳೆಯ ನಾಯಕ ಎನಿಸಿಕೊಂಡವನು ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ದನಿರಬೇಕು. ಪ್ರಧಾನಿ ತನ್ನ ತಪ್ಪನ್ನು ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡರೆ ಅವರಿಗೆ ನನ್ನದು ಇನ್ನೊಂದು ಸಲಾಂ.ಗಾಂಧಿ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಸ್ವಭಾವ ಹೊಂದಿದ್ದರು, ಅದು ಇಂದಿಗೂ ಸಾಧ್ಯವಿದೆ’ ಎಂದಿದ್ದಾರೆ.
ಕಳೆದ ವರ್ಷ ನವೆಂಬರ್ 8 ರಂದು 500 ರೂ ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಪ್ರಧಾನಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. ಈ ವೇಳೆ ಕಮಲಹಾಸನ್ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದರು.