ನಾಮನಿರ್ದೇಶನದಿಂದ ಕುಂದಾಪುರ ಎಪಿಎಂಸಿ ಕಾಂಗ್ರೆಸ್‌ಗೆ ಅಧಿಕಾರ
ಉಡುಪಿ: ಉಡುಪಿ ಜಿಲ್ಲೆಯ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಎರಡರಲ್ಲಿ ಬಿಜೆಪಿ ಅಧಿಕಾರ ಗಳಿಸಿದರೆ, ಒಂದರಲ್ಲಿ ನಾಮನಿರ್ದೇಶಿತರ ಬಲದಲ್ಲಿ ಕಾಂಗ್ರೆಸ್ ಅಧಿಕಾರ ಗಳಿಸಲಿದೆ.
ಉಡುಪಿ ಮತ್ತು ಕಾರ್ಕಳ ತಾಲೂಕು ಎಪಿಎಂಸಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಕುಂದಾಪುರ ಎಪಿಎಂಸಿಯಲ್ಲಿ ಈಗ ಚುನಾಯಿತರಲ್ಲಿ ಬಿಜೆಪಿ ಬಹು ಸ್ಥಾನ ಪಡೆದಿದ್ದರೂ ನಾಮನಿರ್ದೇಶಿತರಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಏರಲಿದೆ.
ಉಡುಪಿಯಲ್ಲಿ 13 ಸ್ಥಾನದಲ್ಲಿ ವ್ಯಾಪಾರಸ್ಥರು, ಸಹಕಾರ ಸಂಘಗಳು ಈ ಎರಡು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 11 ಸ್ಥಾನಗಳಲ್ಲಿ ಚುನಾವಣೆ ನಡೆಯಿತು. ಶನಿವಾರ ಮತ ಎಣಿಕೆ ನಡೆದಾಗ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಚುನಾಯಿತರಾದರು.
ಅವಿರೋಧ ಆಯ್ಕೆಯಲ್ಲಿ ತಲಾ ಒಂದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಹೀಗಾಗಿ ಇಲ್ಲಿನ ಬಲ ಬಿಜೆಪಿ 9, ಕಾಂಗ್ರೆಸ್ 4. ಕಾರ್ಕಳದಲ್ಲಿಯೂ ವ್ಯಾಪಾರಸ್ಥರು, ಸಹಕಾರ ಸಂಘಗಳ ಕ್ಷೇತ್ರಗಳಲ್ಲಿ ತಲಾ ಒಂದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅವಿರೋಧವಾಗಿ ಆಯ್ಕೆಯಾಗಿತ್ತು. 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಂಟರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾದರು. ಅವಿರೋಧ ಆಯ್ಕೆ ಸೇರಿದಂತೆ ಬಿಜೆಪಿ 9, ಕಾಂಗ್ರೆಸ್ 4 ಸ್ಥಾನ ಪಡೆದಿದೆ.
ಕುಂದಾಪುರದಲ್ಲಿ ಏಳು ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಇವರಲ್ಲಿ 4 ಬಿಜೆಪಿ, 3 ಕಾಂಗ್ರೆಸ್ ಬೆಂಬಲಿಗರು. ಆರು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ನಡೆದಾಗ ತಲಾ ಮೂರು ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೀಗಾಗಿ ಬಿಜೆಪಿ 7, ಕಾಂಗ್ರೆಸ್ 6 ಸ್ಥಾನ ಪಡೆದುಕೊಂಡಂತಾಗಿದೆ.
ಪ್ರತಿ ಎಪಿಎಂಸಿಗಳಿಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಸರಕಾರಕ್ಕೆ ಇದೆ. ಹೀಗೆ ಮಾಡಿದರೂ ಉಡುಪಿ ಮತ್ತು ಕಾರ್ಕಳದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಿಗೆ ಇರುತ್ತದೆಯಾದ ಕಾರಣ ಬಿಜೆಪಿ ಅಧಿಕಾರಕ್ಕೇರಲಿದೆ.
ಕುಂದಾಪುರದಲ್ಲಿ ಮಾತ್ರ ನಾಮನಿರ್ದೇಶನದೊಂದಿಗೆ ಕಾಂಗ್ರೆಸ್ ಸದಸ್ಯರ ಸಂಖ್ಯೆ 9ಕ್ಕೇರಲಿದೆ. ಆಗ ಎಪಿಎಂಸಿ ಕಾಂಗ್ರೆಸ್ ತೆಕ್ಕೆಗೆ ಬರಲಿದೆ. ಆದರೆ ಇದು ಈಗಿನ ಕಾಂಗ್ರೆಸ್ ಸರಕಾರ ಇರುವವರೆಗೆ ಮಾತ್ರ, ಮುಂದೆ ಯಾವ ಸರಕಾರ ಬರುತ್ತದೋ ಅದರಂತೆ ನಾಮನಿರ್ದೇಶನ ನಡೆಯಬೇಕು. ಎಪಿಎಂಸಿ ನೂತನ ಮಂಡಳಿ ಅವಧಿ ಐದು ವರ್ಷ.