Advertisement

ಎಪಿಎಂಸಿ ರೈಲ್ವೇ ಅಂಡರ್‌ಪಾಸ್‌ ಕೇಂದ್ರ ಸರಕಾರ ಅನುಮೋದನೆ

10:36 PM Feb 29, 2020 | mahesh |

ಪುತ್ತೂರು: ಎಪಿಎಂಸಿ ರೈಲ್ವೇ ಅಂಡರ್‌ಪಾಸ್‌ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕಿದೆ. ಇನ್ನು ರಾಜ್ಯ ಸರಕಾರ ಎಷ್ಟು ಹಣ ವಿನಿಯೋಗಿಸುತ್ತದೆ ಎಂದು ನೋಡಿ ಉಳಿದ ಹಣವನ್ನು ಎಪಿಎಂಸಿ ಭರಿಸಲಿದೆ. ಆದರೆ ಎಪಿಎಂಸಿ ರಸ್ತೆಯ ಸುತ್ತಮುತ್ತ ಅಂಗಡಿ, ಮನೆಗಳಿಂದ ತೆರಿಗೆ ಸಂಗ್ರಹ ಮಾಡುತ್ತಿರುವ ಪುತ್ತೂರು ನಗರಸಭೆ ಯೋಜನೆಗೆ ಅನುದಾನ ನೀಡುತ್ತಿಲ್ಲ. ನಗರಸಭೆಯಿಂದ ಅನುದಾನ ಇಲ್ಲ ಎಂದು ಆಡಳಿತಾ ಧಿಕಾರಿ ತಿಳಿಸಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಹೇಳಿದರು. ಫೆ. 29ರಂದು ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಕೇಂದ್ರದಿಂದ ಎಪಿಎಂಸಿ ರೈಲ್ವೇ ಅಂಡರ್‌ಪಾಸ್‌ ಬ್ರಿಡ್ಜ್ಗೆ ಅನುಮೋದನೆ ಸಿಕ್ಕಿದೆ. ಮುಂದೆ ಮೂಲ ಸೌಕರ್ಯ ಇಲಾಖೆಯಿಂದ ಅನುದಾನ ಸಿಗಲಿದೆ. ಅದಕ್ಕೆ ಸರಕಾರ ಎಷ್ಟು ಹಣ ವಿನಿ ಯೋಗಿಸಲಿದೆ ಎಂದು ನೋಡಿ ಉಳಿದ ಹಣ ಎಪಿಎಂಸಿ ಭರಿಸಲಿದೆ. ಮುಂದಿನ ವಾರ ರೈಲ್ವೇ ಮೈಸೂರು ವಿಭಾಗೀಯ ಕೇಂದ್ರಕ್ಕೆ ಎಪಿಎಂಸಿ ನಿಯೋಗ ಹೋಗಿ ಅವರಿಗೆ ಎಪಿಎಂಸಿ ಕಡೆಯಿಂದ ಅನು ದಾನದ ಪತ್ರ ಕೊಡಲಿದ್ದೇವೆ ಎಂದರು.

ಮೈಸೂರಿನ ವಿಭಾಗೀಯ ಕಚೇರಿ ಯಿಂದ ರಾಜ್ಯ ಮೂಲ ಸೌಕರ್ಯ ಇಲಾಖೆಗೆ ಅಂದಾಜು ಪಟ್ಟಿ ಹೋಗಲಿದೆ. ಈ ನಡುವೆ ಸಂಸದರು, ಶಾಸಕರ ಉಪಸ್ಥಿತಿಯಲ್ಲಿ ರಾಜ್ಯದಿಂದ ಹೆಚ್ಚಿನ ಅನುದಾನ ನೀಡುವ ಕುರಿತು ಮಾತುಕತೆ ನಡೆಸಲಾಗುವುದು ಎಂದರು.

ನಗರಸಭೆ ವಿರುದ್ಧ ಅಸಮಾಧಾನ
ಸಾರ್ವಜನಿಕ ಉಪಯೋಗ ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ರೂಪಿಸಿದರೂ ಪುತ್ತೂರು ನಗರಸಭೆ ಅನುದಾನ ನೀಡಿಲ್ಲ. ಎಪಿಎಂಸಿ ರಸ್ತೆ ಎಪಿಎಂಸಿ ಸುಪರ್ದಿಯಲ್ಲಿದ್ದರೂ ಅದರ ಬಹುತೇಕ ಉಪಯೋಗ ಪಡೆಯುವುದು ನಗರಸಭೆ. ರಸ್ತೆ ಬದಿಯ ಅಂಗಡಿ, ಮನೆಗಳಿಂದ ತೆರಿಗೆ ಸಂಗ್ರಹ ಮಾಡುವುದು ನಗರಸಭೆ. ಆದರೆ ಯೋಜನೆಗೆ ನಗರಸಭೆ ಅನುದಾನ ಇಲ್ಲ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಎಪಿಎಂಸಿ ಸದಸ್ಯರು ಧ್ವನಿಗೂಡಿಸಿದರು.

18-19ರ ಕ್ರಿಯಾ ಯೋಜನೆ ಪೂರ್ಣ
ಕಳೆದ 2018-19ನೇ ಸಾಲಿನ ಕ್ರಿಯಾಯೋಜನೆ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಗೋದಾಮಿನಲ್ಲಿ ಶೀಟ್‌ ಅಳವಡಿಸುವ ಕೆಲಸ ಮಾತ್ರ ಬಾಕಿ ಇದೆ. ಅದನ್ನು ತಿಂಗಳೊಳಗೆ ಪೂರ್ಣಗೊಳಿಸಿಕೊಡಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದವರು ಮಾಹಿತಿ ನೀಡಿ, ಮುಂದೆ ಉದ್ಘಾಟನ ಕಾರ್ಯಕ್ರಮ ನೆರವೇರಿಸಲು ಸದಸ್ಯರಿಂದ ಅಧ್ಯಕ್ಷರು ಸಲಹೆ ಪಡೆದರು.

Advertisement

ಸಣ್ಣ ವ್ಯಾಪಾರಿಗಳಿಗೆ ಹೊಡೆತ
ದೊಡ್ಡ ಉದ್ಯಮದಿಂದಾಗಿ ಸಣ್ಣ ವ್ಯಾಪಾರಿಗಳಿಗೆ ಹೊಡೆತ ಉಂಟಾಗಿದೆ. ಅಲ್ಲದೆ ದೊಡ್ಡ ಉದ್ಯಮಗಳಿಂದ ವ್ಯವಹಾರದ ಹಣ ಬೇರೆ ಕಡೆ ಹೋಗುತ್ತದೆ. ಸಣ್ಣ ವ್ಯಾಪಾರಿಗಳಿಂದ ವ್ಯವಹರಿಸಿದ ಹಣ ಪರಿಸರದಲ್ಲೆ ರೊಟೇಶನ್‌ ಆಗುತ್ತದೆ ಎಂದು ನಿರ್ದೇಶಕ ಶಕೂರ್‌ ಅವರು ಸಭೆಯಲ್ಲಿ ಪ್ರಸ್ತಾವಿಸಿದರು. ರಿಲಾಯನ್ಸ್‌ನಲ್ಲಿ ಸೀಯಾಳವನ್ನು ಕೃಷಿಕರಿಂದ ಪಡೆಯುವ ಹಣಕ್ಕಿಂತಲೂ ಕಡಿಮೆ ಇಟ್ಟು ಮಾರಾಟ ಮಾಡುವ ಮೂಲಕ ಸಣ್ಣ ವ್ಯಾಪಾರಿಗಳಿಗೆ ಹೊಡೆತ ಕಾಣುತ್ತಿದೆ ಎಂದು ಹೇಳಿದರು. ಈ ಕುರಿತು ನಿರ್ದೇಶಕರು ಚರ್ಚಿಸಿದರು. ಅಧ್ಯಕ್ಷರು ಮಾತನಾಡಿ, ಅದು ಗ್ರಾಹಕರನ್ನು ತಮ್ಮ ಕಡೆ ಎಳೆಯುವ ಸ್ಪರ್ಧೆ ಆಗಿರಬಹುದು ಎಂದರು.

ಉತ್ತಮ ನೀರಿನ ಪೈಪ್‌ ಅಳವಡಿಸಿ
ಪ್ರಾಂಗಣದಲ್ಲಿರುವ ನೀರು ಪೂರೈಕೆಯ ಪೈಪ್‌ಲೈನ್‌ ವಿಸ್ತರಣೆ ಮತ್ತು ಹಳೆಯ ಪೈಪ್‌ಲೈನ್‌ ಬದಲಾವಣೆ ಸೇರಿದಂತೆ ದುರಸ್ತಿ ಕಾರ್ಯದಲ್ಲಿ ಟೆಂಡರ್‌ದಾರರಿಗೆ ಉತ್ತಮ ಗುಣಮಟ್ಟದ ಪೈಪ್‌ ಹಾಕಲು ಸೂಚಿಸಬೇಕು. ನೀರಿನ ಬಳಕೆ ಮಿತ ಮತ್ತು ನೀರು ಸೋರಿಕೆಯಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಕಾಮಗಾರಿ ಉತ್ತಮ ಆಗಿರಬೇಕೆಂದು ನಿರ್ದೇಶಕಿ ಪುಲಸಾö ರೈ ಸಭೆಯಲ್ಲಿ ಪ್ರಸ್ತಾವಿಸಿದರು. ಎಲ್ಲವೂ ಉತ್ತಮ ಗುಣಮಟ್ಟದ ಪೈಪ್‌ ಅಳವಡಿಸುವ ಕುರಿತು ಸೂಚನೆ ನೀಡಬೇಕೆಂದು ಕಾರ್ಯದರ್ಶಿಯವರಿಗೆ ಅಧ್ಯಕ್ಷರು ಸೂಚಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಎನ್‌.ಎಸ್‌. ಮಂಜುನಾಥ್‌, ನಿರ್ದೇಶಕ ಕುಶಾಲಪ್ಪ ಗೌಡ, ತೀರ್ಥಾನಂದ ದುಗ್ಗಳ, ಮೇದಪ್ಪ ಗೌಡ, ಬೂಡಿಯರ್‌ ರಾಧಾಕೃಷ್ಣ ರೈ, ಕೃಷ್ಣಕುಮಾರ್‌ ರೈ ಉಪಸ್ಥಿತರಿದ್ದರು. ಪ್ರಭಾರ ಕಾರ್ಯದರ್ಶಿ ರಾಮಚಂದ್ರ ಸಭಾ ವಿಷಯದ ಟಿಪ್ಪಣಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next