ಬಾಗೇಪಲ್ಲಿ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ 38 ವರ್ಷದ ವ್ಯಾಪಾರಿಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಪಿಎಂಸಿ ಮಾರು ಕಟ್ಟೆಯ ಮುಂಭಾಗದ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಸೋಂಕಿತ ವ್ಯಕ್ತಿ ಎಪಿಎಂಸಿ ಮಾರುಕಟ್ಟೆಯಲ್ಲಿರುವ ತನ್ನ ಅಣ್ಣನ ಅಂಗಡಿಯಲ್ಲಿ ತರಕಾರಿ ವ್ಯಾಪಾರ ಮಾಡು ತ್ತಿದ್ದು, ಈತನೇ ಖುದ್ದು ತರಕಾರಿಯನ್ನು ಬೆಂಗಳೂರು, ತಮಿಳುನಾಡು ಹಾಗೂ ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆಗಳಿಗೆ ತರಕಾರಿ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಸ್ನೇಹಿತರ ಮಾತು ಕೇಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ -19 ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದ.
ಶುಕ್ರವಾರ ಸಂಜೆ ವರದಿ ಪಾಸಿಟಿವ್ ಬಂದ ನಂತರ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಆತ ವಾಸವಾಗಿರುವ ಎಪಿಎಂಸಿ ಮಾರುಕಟ್ಟೆಯ ಮುಂಭಾಗದ ರಸ್ತೆಯನ್ನು ಸೀಲ್ ಡೌನ್ ಮಾಡಿ ಸೋಂಕಿತ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ಕೋವಿಡ್-19 ಆಸ್ಪತ್ರೆಗೆ ಕಳುಹಿಸಲಾಗಿದೆ. ಸೋಂಕಿತ ವ್ಯಕ್ತಿಯು ಬಹಳಷ್ಟು ಸುತ್ತಾಡಿದ್ದು ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.
ಇದರಿಂದ ಎಚ್ಚೆತ್ತುಕೊಂಡ ತಾಲೂಕು ಆರೋಗ್ಯ ಇಲಾಖೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ, ಕೂಲಿ ಕಾರ್ಮಿಕರು ಹಾಗೂ ವ್ಯಾಪಾರಿಗಳ ಗಂಟಲು ದ್ರವ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಎಸ್.ಸೋಮ ಶೇಖರ್ ಪ್ರತಿಕ್ರಿಯಿಸಿ, ಮಾರುಕಟ್ಟೆಯ ಆವರಣದಲ್ಲಿ ಪ್ರತಿಯೊಬ್ಬ ವ್ಯಾಪಾರಿ, ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದ್ದು, ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗಬೇಕಾಗಿದೆ.
ಇಲ್ಲದಿದ್ದರೆ ಆವರಣದ ಒಳಕ್ಕೆ ಪ್ರವೇಶಕ್ಕೆ ನಿರಾಕರಿಸಲಾಗುವುದು ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯ ನಾರಾಯಣರೆಡ್ಡಿ, ವರ್ತಕರ ಸಂಘದ ಅಧ್ಯಕ್ಷ ಎಚ್. ಎಸ್.ನರೇಂದ್ರ ಹಾಗೂ ವೆಂಕಟೇಶಬಾಬು, ನಾರಾ ಯಣಸ್ವಾಮಿ, ಶ್ರೀನಿವಾಸ ಮತ್ತಿತರರು ಹಾಜರಿದ್ದರು.