ಕೋಲಾರ: ಕೃಷಿ ವಲಯದ ಅಭಿವೃದ್ಧಿ ಮತ್ತು ಪುನಶ್ಚೇತನಕ್ಕಾಗಿ ಸಂಸತ್ತಿನಲ್ಲಿ ಮಂಡಿಸಿರುವ ಮಸೂದೆಗಳನ್ನು ವಿರೋಧ ಪಕ್ಷದವರು ಬೆಂಬಲಿಸುವ ಬದಲಿಗೆ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೇಣುಗೋಪಾಲರೆಡ್ಡಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಪಕ್ಷದ ರೈತ ಮೋರ್ಚಾ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೂದೆಗಳ ಬಗ್ಗೆ ಅಪಸ್ವರ ಮಾಡುವುದು ಬಿಟ್ಟು ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದನೆ ಸಲ್ಲಿಸಬೇಕಾಗಿದೆ ಎಂದರು
ಕ್ರಾಂತಿಕಾರಕ ಹಾಗೂ ದೂರದೃಷ್ಟಿಯುಳ್ಳ ಮಸೂದೆಗಳಾಗಿವೆ. ರೈತರ ಉತ್ಪನ್ನಗಳಿಗೆ ಯೋಗ್ಯ ದರಒದಗಿಸುವುದು, ಕೃಷಿ ಉತ್ಪನ °ಗಳ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಈ ಮಸೂದೆಗಳ ಉದ್ದೇಶವಾಗಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ದರ ಕುಸಿದಾಗ ಸರ್ಕಾರವೇ ಮಧ್ಯಪ್ರವೇಶ ಮಾಡಿ ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಖರೀದಿಸುವುದು ಈ ಮಸೂದೆಗಳ ಮೂಲಕ ಅವಕಾಶ ನೀಡಲಾಗಿದೆ ಎಂದರು.
ಕೃಷಿ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಈ ಮಸೂದೆಗಳು ಪ್ರೋತ್ಸಾಹದಾಯಕವಾಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಸೂದೆ ಮಂಡಿಸಲಾಗಿದ್ದು, ಇದಕ್ಕೆ ಒಪ್ಪಿಗೆ ಪಡೆದ ನಂತರ ಪರಿಣಾಮಕಾರಿ ಜಾರಿಗೆ ಸರ್ಕಾರ ಮುಂದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣಗೌಡ, ಕೋರ್ ಕಮಿಟಿ ಸದಸ್ಯ ಎಸ್‌ಬಿ ಮುನಿವೆಂಕಟಪ್ಪ, ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ನಗರ ಅಧ್ಯಕ್ಷ ತಿಮ್ಮರಾಯಪ್ಪ, ಗ್ರಾಮಾಂತರ ಅಧ್ಯಕ್ಷ ರಾಮಚಂದ್ರಗೌಡ ಕೆಂಬೋಡಿ, ನಾರಾಯಣಸ್ವಾಮಿ ಇದ್ದರು.