Advertisement

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

11:17 PM May 01, 2024 | Team Udayavani |

ಉಡುಪಿ: ರಾಜ್ಯದ ಹಲವು ತಾಲೂಕುಗಳಲ್ಲಿ ಬರ ಇರುವುದರಿಂದ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುವಂತೆ ಬೇಸಗೆ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ನಿರ್ದೇಶನ ನೀಡಿತ್ತಾದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬಿಸಿಯೂಟ ಸೇವಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಸೂರ್ಯನ ತಾಪವೂ ಒಂದು ಕಾರಣ.

Advertisement

ಉಭಯ ಜಿಲ್ಲೆಯಲ್ಲಿ ಕೇವಲ ಒಂದು ಶಾಲೆಯಲ್ಲಿ ಮಾತ್ರ ಸುಮಾರು 40 ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಅದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬ್ರಹ್ಮಾವರದ ಸರಕಾರಿ ಶಾಲೆ.

ಮಕ್ಕಳನ್ನು ಕಳುಹಿಸಲು ಪಾಲಕರ ಹಿಂದೇಟು
ರಜಾ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಬಗ್ಗೆ ಎಲ್ಲ ಶಾಲೆಗಳಲ್ಲೂ ಸರಕಾರದ ನಿಯಮಾನುಸಾರ ಮಕ್ಕಳ ಪಾಲಕ, ಪೋಷಕರಿಗೆ ಸೂಚನೆ ಕಳುಹಿಸಲಾಗಿತ್ತು. ಹಾಗೆಯೇ ಮಕ್ಕಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಕಳುಹಿಸುವ ಪಾಲಕ, ಪೋಷಕರಿಂದ ಶಾಲಾಡಳಿತ ಮಂಡಳಿ ಒಪ್ಪಿಗೆ ಬರೆಸಿಕೊಳ್ಳಬೇಕಾಗಿತ್ತು. ಕಾರಣ ಶಾಲೆಯಲ್ಲಿ ಊಟ ಸಿದ್ಧಪಡಿಸಿದ ಅನಂತರ ವಿದ್ಯಾರ್ಥಿಗಳು ಬಾರದೇ ಇದ್ದರೆ ಊಟ ಉಳಿಯುವ ಸಾಧ್ಯತೆ ಇದೆ. ಆದರೆ ಒಂದು ಶಾಲೆ ಹೊರತುಪಡಿಸಿ ಬೇರೆ ಯಾವ ಶಾಲೆಗಳ ಮಕ್ಕಳ ಪಾಲಕರು ಇದಕ್ಕೆ ಒಪ್ಪಿಗೆ ನೀಡಲಿಲ್ಲ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಊಟಕ್ಕಾಗಿಯೇ ಹೋಗಬೇಕು: ಶಾಲೆ ರಜೆ ಇರುವುದರಿಂದ ಯಾವುದೇ ಶೈಕ್ಷಣಿಕ ಚಟುವಟಿಕೆ ಶಾಲಾವರಣದಲ್ಲಿ ನಡೆಯುತ್ತಿಲ್ಲ. ಪಠ್ಯೇತರ ಚಟುವಟಿಕೆ ನಡೆಸಲು ಶಿಕ್ಷಕರು ನಿತ್ಯ ಶಾಲೆಗೆ ಬರುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಕೇಲವ ಮಧ್ಯಾಹ್ನದ ಬಿಸಿಯೂಟಕ್ಕಾಗಿಯೇ ಹೋಗಬೇಕು. ಅಲ್ಲದೇ ಈಗ ಬಿಸಿಲಿನ ತೀವ್ರತೆಯೂ ಹೆಚ್ಚಿದ್ದು ಮಧ್ಯಾಹ್ನದ ಹೊತ್ತಿಗೆ ಶಾಲೆಗೆ ಮಗುವನ್ನು ಕರೆದೊಯ್ದು, ಊಟ ಆಗುವ ತನಕ ಅಲ್ಲೇ ಇದ್ದು ವಾಪಸ್‌ ಕರೆದುಕೊಂಡು ಬರಬೇಕಾಗುತ್ತದೆ. ಇದಕ್ಕಿಂತ ಮನೆಯಲ್ಲೇ ಎಲ್ಲರ ಜತೆಗೆ ಮಗು ಊಟ ಮಾಡಬಹುದು ಎನ್ನುವ ಉದ್ದೇಶದಿಂದಷ್ಟೆ ಕಳುಹಿಸುತ್ತಿಲ್ಲ ಎನ್ನುತ್ತಾರೆ ಪೋಷಕರು.

ಬಿಸಿಲಿನ ಹೊಡೆತ
ಉಭಯ ಜಿಲ್ಲೆಗಳಲ್ಲೂ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಯೂಟಕ್ಕಾಗಿ ಮಕ್ಕಳು ಶಾಲೆಗೆ ಹೋಗುವುದು ಕಷ್ಟಸಾಧ್ಯ. ಮಧ್ಯಾಹ್ನದ ಹೊತ್ತಿಗೆ ಯಾರೂ ಬಿಸಿಲಿಗೆ ಬರಬಾರದು ಎಂದು ಜಿಲ್ಲಾಡಳಿತಲೇ ಸಲಹೆ ನೀಡಿದೆ. ಆದ್ದರಿಂದ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಕೋವಿಡ್‌ ಸಂದರ್ಭ ನೀಡುತ್ತಿದ್ದಂತೆ ಆಹಾರ ಧಾನ್ಯವನ್ನು ಮನೆಗೆ ಕೊಂಡೊಯ್ಯಲು ನೀಡಬೇಕು. ಎರಡು ತಿಂಗಳ ಲೆಕ್ಕಾಚಾರದಲ್ಲಿ ಮಕ್ಕಳ ಮನೆಗೆ ಆಹಾರ ಧಾನ್ಯ ನೀಡುವ ಕ್ರಮ ಸರಕಾರ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

Advertisement

ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರದಲ್ಲಿ ಒಂದು ಶಾಲೆಯ ಪಾಲಕ, ಪೋಷಕರು ಮಾತ್ರ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಉಳಿದಂತೆ ಎಲ್ಲಿಯೂ ಮಕ್ಕಳು ಬರುತ್ತಿಲ್ಲ. ಹೀಗಾಗಿ ಬೇರೆ ಯಾವುದೇ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುತ್ತಿಲ್ಲ. ಮಕ್ಕಳ ಮನೆಗೆ ಆಹಾರ ಧಾನ್ಯ ಒದಗಿಸುವ ಬಗ್ಗೆ ಸರಕಾರವೇ ತೀರ್ಮಾನ ತೆಗೆದುಕೊಳ್ಳಬೇಕು. ಜಿಲ್ಲಾ ಹಂತದಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ.
-ಕೆ. ಗಣಪತಿ / ವೆಂಕಟೇಶ ಸುಬ್ಯಾಯ ಪಾಟಗಾರ,
ಡಿಡಿಪಿಐಗಳು, ಉಡುಪಿ/ ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next