ಬೆಂಗಳೂರು: ನೋಟು ಅಮಾನ್ಯದ 50 ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿರುವ ಮಾಜಿ
ಪ್ರಧಾನಿ ಎಚ್.ಡಿ.ದೇವೇಗೌಡ, ಮಹತ್ವದ ತೀರ್ಮಾನ ಕೈಗೊಂಡ ನಂತರ ಅದರ ನಿರ್ವಹಣೆಯಲ್ಲಿ ಕೇಂದ್ರ ಸಂಪೂರ್ಣ ಎಡವಿದೆ ಎಂದು ಆಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯದ ನಂತರ ಹೊರಡಿಸಲಾದ 60 ಅಧಿಸೂಚನೆಗಳು, ಪ್ರಧಾನಿಯ ಭಾಷಣ, ಇಂದಿಗೂ ಜನರು ಹಣ ಪಡೆಯಲು ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳಿಗೆ ಅಲೆದಾಡುತ್ತಿರುವುದು ಸರ್ಕಾರ ಮತ್ತು ಪ್ರಧಾನಿ ಮೋದಿಯ ವೈಫಲ್ಯತೆಯನ್ನು ಎತ್ತಿ ತೋರಿಸಿವೆ ಎಂದು ಹೇಳಿದರು. ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಪ್ರತಿ ಅಂಶವನ್ನೂ ಬಿಡದಂತೆ ಕೇಳಿದ್ದೇನೆ. ಆರ್ಥಿಕ ಸಚಿವರ ಸಮರ್ಥನೆಯನ್ನೂ ನೋಡಿದ್ದೇನೆ. ಹದಿಮೂರು ತಿಂಗಳು
ದೇಶ ಆಳಿದ ಅನುಭವ ಹಾಗೂ ಹತ್ತಾರು ಪ್ರಧಾನಿಗಳ ಕಾರ್ಯವೈಖರಿ ನೋಡಿದ ನನ್ನ ಪ್ರಕಾರ ಇವರು ನೂರಕ್ಕೆ ನೂರರಷ್ಟು
ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ನರೇಂದ್ರ ಮೋದಿಯವರಿಗೆ ಮಾತನಾಡುವ ಕಲೆ ಗೊತ್ತಿದೆ. ದೆಹಲಿಯಲ್ಲಿ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ, ಬಿಹಾರದಲ್ಲಿ ಅಲ್ಲಿನ ವ್ಯವಸ್ಥೆಗೆ ತಕ್ಕಂತೆ, ಗುಜರಾತ್‌ನಲ್ಲಿ ತಮಗೆ ಬೇಕಾದಂತೆ ಮಾತನಾಡುತ್ತಾರೆ. ಮಾತನಾಡುವ ಕಲೆಯಿಂದ ಸಮಸ್ಯೆ ನಿವಾರಣೆ ಮಾಡಲು, ಬಡವರನ್ನು ಮೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂದರು. ದೇಶ ಉದ್ದೇಶಿಸಿ ಮಾಡಿದ ಮೋದಿ ಅವರ ಭಾಷಣದಲ್ಲಿ ಏನೂ ಇಲ್ಲ. ಗರ್ಭಿಣಿಯರಿಗೆ ಆರು ಸಾವಿರ ರೂ. ಕೊಡುವುದು ಆಹಾರ ಭದ್ರತೆ ಕಾಯ್ದೆಯಡಿ ಹಳೆಯ ಸುದ್ದಿ. ಹಿರಿಯ ನಾಗರಿಕರ ಠೇವಣಿಗೆ ಶೇ.8ರಷ್ಟು ಬಡ್ಡಿ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಅಂಚೆ ಕಚೇರಿಯಲ್ಲಿ ಇಟ್ಟರೆ ಶೇ.8.5 ಬಡ್ಡಿ ಸಿಗುತ್ತಿದೆಯಲ್ಲಾ? ಇನ್ನೇನಿದೆ ಹೊಸದು ಎಂದು ಪ್ರಶ್ನಿಸಿದರು.
ಸತತ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಮಕ್ಕಳು ಅತ್ತರೆ ಮಿಠಾಯಿ ಆಸೆ ತೋರಿಸುವಂತೆ ಎರಡು ತಿಂಗಳ ಬಡ್ಡಿ ಮನ್ನಾ ಮಾಡುವುದಾ? ಎಲ್ಲದರೂ ಉಂಟಾ ಇಂತಹ ತೀರ್ಮಾನ. ಕನಿಷ್ಠ ಸಂಪೂರ್ಣ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದರೂ
ಒಪ್ಪಿಕೊಳ್ಳಬಹುದಿತ್ತು ಎಂದರು.