Advertisement

ಕಾಂಗ್ರೆಸ್‌, ಬಿಜೆಪಿಗೆ ಒಳ ಏಟಿನ ಆತಂಕ

01:34 AM Nov 25, 2021 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ ಟಿಕೆಟ್‌ ಹಂಚಿಕೆಯಲ್ಲಿನ ಅಸಮಾಧಾನ, ಮೂರನೇ ಅಭ್ಯರ್ಥಿ ಸ್ಪರ್ಧೆ, ಅನ್ಯ ಪಕ್ಷ ದವರ ಕರೆತಂದು ಟಿಕೆಟ್‌ ನೀಡಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ “ಒಳಏಟು’ ಆತಂಕ ಪ್ರಾರಂಭವಾಗಿದೆ.

Advertisement

ಬೆಳಗಾವಿ ಕ್ಷೇತ್ರ ದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಯಾಗಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸ್ಪರ್ಧಿಸಿದ್ದರೂ ಲಖನ್‌ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಒಂದೊಮ್ಮೆ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್‌ ಹಾಗೂ ರಮೇಶ್‌ ಜಾರಕಿಹೊಳಿ ನಡುವಿನ ಸಂಘರ್ಷದಲ್ಲಿ ಜಾತಿ ಪ್ರಾಮುಖ್ಯ ಪಡೆದರೆ ಫ‌ಲಿತಾಂಶ ಬುಡಮೇಲು ಆಗಬಹುದು. ಲಖನ್‌ ಜಾರಕಿಹೊಳಿ ಪಕ್ಷೇತರರಾಗಿ ಸ್ಪರ್ಧಿಸದಂತೆ ರಮೇಶ್‌ ಜಾರಕಿಹೊಳಿ ತಡೆಯಬಹುದಿತ್ತು ಎಂದು ಅಲ್ಲಿನ ಮುಖಂಡರು ಪಕ್ಷದ ನಾಯಕರ ಮುಂದೆ ಪ್ರಸ್ತಾವಿಸಿದ್ದಾರೆ ಎಂದು ಹೇಳಲಾಗಿದೆ.

ಅದೇ ರೀತಿ ಮಂಡ್ಯದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗಲು ಬಿಜೆಪಿಯ ಹಿರಿಯ ನಾಯಕ ಎಸ್‌.ಎಂ. ಕೃಷ್ಣ ಸೂಚನೆ ನೀಡಿದ್ದರು ಎಂದು ದಿನೇಶ್‌ ಗೂಳಿಗೌಡ ತಮಗೆ ಹೇಳಿದ್ದಾಗಿ ಖುದ್ದು ಸಚಿವ ಎಸ್‌.ಟಿ. ಸೋಮಶೇಖರ್‌ ಅವರೇ ಹೇಳಿರುವುದರಿಂದ ಮಂಡ್ಯ ಅಧಿಕೃತ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಆತಂಕ ಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ಗೆ ಆತಂಕ ಹೆಚ್ಚು
ಈ ಮಧ್ಯೆ ಆಡಳಿತ ಪಕ್ಷ ಬಿಜೆಪಿಗೆ ಹೋಲಿಸಿದರೆ ವಿಪಕ್ಷ ಕಾಂಗ್ರೆಸ್‌ನಲ್ಲಿಯೇ ಆಂತರಿಕ ಹೊಡೆತ ಹೆಚ್ಚಾಗುವ ಭೀತಿ ನಾಯಕರಲ್ಲಿ ಮೂಡಿದೆ. ಮೇಲ್ಮನೆ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ಅವರಿಗೆ ಟಿಕೆಟ್‌ ತಪ್ಪಿರುವುದರಿಂದ ಬೆಂಬಲಿಗರು ಚುನಾವಣೆಯಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

Advertisement

ಬೆಳಗಾವಿಯಲ್ಲಿ ರಮೇಶ್‌ ಜಾರಕಿಹೊಳಿ ವಿರುದ್ಧ ಜಿದ್ದಿಗೆ ಬಿದ್ದು ಲಕ್ಷ್ಮೀ ಹೆಬ್ಟಾಳ್ಕರ್‌ ಸೋದರನಿಗೆ ಟಿಕೆಟ್‌ ನೀಡಲಾಗಿದೆ. ಅಲ್ಲಿ ಬೇರೆ ಯಾರೇ ಅಭ್ಯರ್ಥಿಯಾಗಿದ್ದರೂ ಲಖನ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರಲಿಲ್ಲ. ಈಗ 3 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಸವಾಲು ಎದುರಿಸಬೇಕಾಗಿದೆ.

ಧಾರವಾಡದಲ್ಲಿ ಹಿರಿಯ ನಾಯಕ ಎ.ಎಂ. ಹಿಂಡಸಗೇರಿಗೆ ಟಿಕೆಟ್‌ ತಪ್ಪಿಸಿ, ಡಿ.ಕೆ. ಶಿವಕುಮಾರ್‌ ಹಠಕ್ಕೆ ಬಿದ್ದು ಕೆಪಿಸಿಸಿ ಕಾರ್ಯಾ ಧ್ಯಕ್ಷ ಸಲೀಂ ಅಹಮದ್‌ಗೆ ಟಿಕೆಟ್‌ ಕೊಡಿಸಿದ್ದು, ಸ್ಥಳೀಯ ನಾಯಕರ ನಡೆ ಕಾಂಗ್ರೆಸ್‌ಗೆ ಆಂತರಿಕ ಹೊಡೆತದ ಆತಂಕ ಸೃಷ್ಟಿಸಿದೆ.

ಕೋಲಾರದಲ್ಲಿ ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಅವರ ವಿರೋಧದ ನಡುವೆ ಅನಿಲ್‌ ಕುಮಾರ್‌ಗೆ ಟಿಕೆಟ್‌ ನೀಡಲಾಗಿದ್ದು, ಮುನಿಯಪ್ಪ ಬೇಸರಗೊಂಡಿದ್ದಾರೆ. ಮುನಿಯಪ್ಪ ತಟಸ್ಥರಾದರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಷ್ಟವಾಗಬಹುದು ಎಂದು ಹೇಳಲಾಗಿದೆ.

ಕೊಡಗಿನಲ್ಲಿ ಸ್ಥಳೀಯ ಟಿಕೆಟ್‌ ಆಕಾಂಕ್ಷಿ ಯನ್ನು ನಿರ್ಲಕ್ಷಿಸಿದ ಕಾಂಗ್ರೆಸ್‌, ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎ. ಮಂಜು ಪುತ್ರ ಮಂಥರ ಗೌಡಗೆ ಟಿಕೆಟ್‌ ನೀಡಿರುವುದು ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬಳ್ಳಾರಿಯಲ್ಲಿ ಸ್ಥಳೀಯ ಶಾಸಕರ ವಿರೋಧದ ನಡುವೆ ಕೆ.ಸಿ. ಕೊಂಡಯ್ಯರಿಗೆ ಟಿಕೆಟ್‌ ನೀಡಿದ್ದು, ಒಳ ಹೊಡೆತದ ಭಯ ಹೆಚ್ಚಾಗುವಂತೆ ಮಾಡಿದೆ.

ಬೆಳಗಾವಿಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಲಖನ್‌ ಜಾರಕಿಹೊಳಿ ಸ್ಪರ್ಧಿಸಿರುವುದರಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.
– ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next