Advertisement

Menstrual cycle: ಋತುಚಕ್ರ ಬಂಧದ ಸಂದರ್ಭದಲ್ಲಿ ಆತಂಕ

06:13 PM Sep 04, 2023 | Team Udayavani |

ಋತುಚಕ್ರ ಬಂಧವು ನೈಸರ್ಗಿಕ ವಿದ್ಯಮಾನ. ಕೆಲವು ಸ್ತ್ರೀಯರು ಋತುಚಕ್ರ ಬಂಧದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಿಂದ ತೊಂದರೆಗೆ ಈಡಾಗುತ್ತಾರೆ. ಆದರೆ ಎಲ್ಲ ಸ್ತ್ರೀಯರಿಗೂ ಇದಕ್ಕೆ ಚಿಕಿತ್ಸೆ ಅಗತ್ಯವಾಗಿರುವುದಿಲ್ಲ. ಮಹಿಳೆಯೊಬ್ಬರ ಒಟ್ಟು ಜೀವಿತಾವಧಿಯಲ್ಲಿ ಮೂರನೇ ಒಂದರಷ್ಟು ಕಾಲ ಋತುಚಕ್ರ ಬಂಧದ ಬಳಿಕದ ವಯಸ್ಸಾಗಿರುತ್ತದೆ. ಆದ್ದರಿಂದ ಲಕ್ಷಣಗಳಿಗೆ ಚಿಕಿತ್ಸೆ ಒದಗಿಸುವುದು ಮತ್ತು ಸಂಕೀರ್ಣ ಸಮಸ್ಯೆಗಳು ಉಂಟಾಗುವುದನ್ನು ತಡೆಗಟ್ಟುವುದು ಆದ್ಯತೆಯಾಗಿರುತ್ತದೆ. ಋತುಚಕ್ರ ಬಂಧದ ಅವಧಿಯಲ್ಲಿ ಕಾಣಿಸಿಕೊಳ್ಳುವ ಆತಂಕವನ್ನು ನಿಭಾಯಿಸುವುದು ಈ ವಯೋಮಾನದ ಮಹಿಳೆರಿಗೆ ಒಂದು ದೊಡ್ಡ ಸವಾಲಾಗಿರುತ್ತದೆ. ಆಪ್ತ ಸಮಾಲೋಚನೆ, ಈ ಸ್ಥಿತಿಯನ್ನು ಒಪ್ಪಿಕೊಂಡು ಸ್ವೀಕರಿಸುವುದು ಮತ್ತು ಜೀವನ ವಿಧಾನ ಬದಲಾವಣೆಗಳ ಮೂಲಕ ಬಹುತೇಕ ಮಹಿಳೆಯರಲ್ಲಿ ಇದನ್ನು ನಿಭಾಯಿಸಬಹುದಾಗಿರುತ್ತದೆ. ಜತೆಗೆ ವೈದ್ಯರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ಫಾಲೊಅಪ್‌ ಗಳು ಕೂಡ ಸಹಾಯ ಮಾಡುತ್ತವೆ.

Advertisement

ಋತುಚಕ್ರ ಬಂಧ (ಮೆನೊಪಾಸ್‌) ಅಂದರೇನು?

ಸ್ತ್ರೀಯರು 12 ತಿಂಗಳುಗಳ ಅವಧಿಯಲ್ಲಿ ಸತತವಾಗಿ ಋತುಚಕ್ರವನ್ನು ಹೊಂದದೆ ಇದ್ದರೆ ಅದನ್ನು ಋತುಚಕ್ರ ಬಂಧ ಎನ್ನಲಾಗುತ್ತದೆ. ಋತುಚಕ್ರ ಬಂಧದ ಹಿಂದಿನ ಅವಧಿಯನ್ನು ಋತುಚಕ್ರ ಬಂಧಪೂರ್ವ ಅವಧಿ ಅಥವಾ ಪೆರಿಮೆನೊಪಾಸ್‌ ಎನ್ನಲಾಗುತ್ತದೆ.

ಲಕ್ಷಣಗಳು

ದೇಹ ಬಿಸಿಯಾಗುವುದು/ ತಾಪವನ್ನು ತಾಳಿಕೊಳ್ಳಲಾಗದಿರುವುದು

Advertisement

ಬೆವರುವುದು

ಎದೆಬಡಿತ ಹೆಚ್ಚಳ

ನಿದ್ದೆಯ ಕೊರತೆ

ಜನನಾಂಗ ಶುಷ್ಕವಾಗುವುದು

ಆತಂಕ ಅಥವಾ ಖನ್ನತೆ

ಭಾವನಾತ್ಮಕ ಏರಿಳಿತಗಳು

ಸುಲಭವಾಗಿ ಕಿರಿಕಿರಿಗೊಳ್ಳುವುದು/ ಸಿಟ್ಟು ಬರುವುದು

ನಿಮ್ಮ ಆಹಾರದಲ್ಲಿ ಇವು ಇರಲಿ:

ಸೋಯಾಬೀನ್ಸ್‌

ಕಡಲೆ

ಮಸೂರ್‌ ದಾಲ್‌

ಫ್ಲಾಕ್ಸ್‌ಸೀಡ್ಸ್‌

ಕಾಳುಗಳು

ಬೀನ್ಸ್‌

ಹಣ್ಣುಗಳು

ತರಕಾರಿಗಳು

ನೆರವು ಗುಂಪುಗಳನ್ನು ಸೇರಿಕೊಳ್ಳುವುದು

ಋತುಚಕ್ರ ಬಂಧವನ್ನು ಅನುಭವಿಸುತ್ತಿರುವ ಇತರ ಮಹಿಳೆಯರ ಜತೆಗೆ ಸೇರಿಕೊಂಡು ಅನುಭವ, ಭಾವನೆಗಳನ್ನು ಹಂಚಿಕೊಳ್ಳುವುದು ಅಪಾರ ಸಾಂತ್ವನವನ್ನು ಒದಗಿಸುತ್ತದೆ. ನಿಮ್ಮನ್ನು ಕಾಡುತ್ತಿರುವ ವಿವಿಧ ಭಾವನೆಗಳ ಬಗ್ಗೆ ಚರ್ಚಿಸುವುದು ಮತ್ತು ವಿವಿಧ ಸಂಶಯಗಳು, ಪ್ರಶ್ನೆಗಳನ್ನು ಚರ್ಚಿಸಿ ಸಮಾಧಾನಕರ ಉತ್ತರ ಕಂಡುಕೊಳ್ಳುವುದಕ್ಕೆ ಸಮಾನ ಮನಸ್ಕರ ಸಹಾಯ ಗುಂಪುಗಳಲ್ಲಿ ಸೇರಿಕೊಳ್ಳುವುದರಿಂದ ಸಾಧ್ಯವಾಗುತ್ತದೆ. ಜತೆಗೆ, ಯಾವುದಾದರೂ ವಿಧವಾದ ಗುಂಪು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆಯಲ್ಲದೆ ಜೀವನವನ್ನು ಸ್ವತಂತ್ರವಾಗಿ ನಡೆಸಲು ಸಹಾಯವಾಗುತ್ತದೆ. ಇದಲ್ಲದೆ, ಕೆಫಿನ್‌ಯುಕ್ತ ಪಾನೀಯಗಳು, ಮದ್ಯಪಾನವನ್ನು ವರ್ಜಿಸುವಂತಹ ಆಹಾರ ಶೈಲಿಯ ಬದಲಾವಣೆಗಳು ನೆರವಾಗುತ್ತವೆ. ಮಸಾಲೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ ಮತ್ತು ಸಸ್ಯಜನ್ಯ ಈಸ್ಟ್ರೋಜನ್‌ (ಐಎಸ್‌ಒ ಸ್ವಾದಗಳು)ನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಪ್ರಮಾಣದಲ್ಲಿ ಸೇರ್ಪಡೆಗೊಳಿಸುವುದು ಉತ್ತಮವಾಗಿರುತ್ತದೆ.

ಇದಲ್ಲದೆ, ಧೂಮಪಾನವನ್ನು ವರ್ಜಿಸಬೇಕು, ದೇಹತೂಕವನ್ನು ಕಡಿಮೆ ಮಾಡಿಕೊಳ್ಳಬೇಕು, ಸಡಿಲವಾದ ಉಡುಗೆಗಳನ್ನು ಧರಿಸಬೇಕು, ಫ್ಯಾನ್‌ ಹಾಕಿಕೊಳ್ಳುವುದು ಮತ್ತು ಚೆನ್ನಾಗಿ ಗಾಳಿ ಬೆಳಕು ಆಡುವ ಕಡೆ ಇರುವುದರಿಂದಲೂ ಸಹಾಯವಾಗುತ್ತದೆ. ವ್ಯಾಯಾಮ ಮಾಡುವುದು, ಅದರಲ್ಲೂ ಮನಶಾÏಂತಿ ಒದಗಿಸುವ ಯೋಗ, ಧ್ಯಾನದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ನೆಮ್ಮದಿಯಾಗಿರುತ್ತದೆ ಮತ್ತು ನಿಮಗಿರಬಹುದಾದ ಆತಂಕ ಮತ್ತು ಭಯವನ್ನು ಕಡಿಮೆ ಮಾಡುತ್ತದೆ.

ಮೇಲೆ ಹೇಳಲಾಗಿರುವ ಪರಿಹಾರೋಪಾಯಗಳು ಸಹಾಯ ಮಾಡದೆ ಇದ್ದಲ್ಲಿ ವೈದ್ಯರನ್ನು ಭೇಟಿಯಾಗಿ ಆಪ್ತ ಸಮಾಲೋಚನೆಗೆ ಒಳಗಾಗುವುದು ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಪರಿಸ್ಥಿತಿ ಉತ್ತಮವಾಗುತ್ತದೆ. ನಿಮಗಿರುವ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಲು ಹಾರ್ಮೋನಲ್‌/ನಾನ್‌ ಹಾರ್ಮೋನಲ್‌ ಔಷಧಗಳಿಂದ ಸಹಾಯವಾಗಬಹುದೇ ಎಂಬ ಬಗ್ಗೆ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ. ಕೆಲವೊಮ್ಮೆ ಕೊಗ್ನಿಟಿವ್‌ ಬಿಹೇವಿಯರಲ್‌ ಥೆರಪಿ (ಸಿಬಿಟಿ)ಯಿಂದ ಕೂಡ ಸಹಾಯವಾಗಬಹುದಾಗಿದೆ.

-ಡಾ| ಸಮೀನಾ ಎಚ್‌.

ಕನ್ಸಲ್ಟಂಟ್‌ ಒಬ್‌ಸ್ಟ್ರೆಟಿಕ್ಸ್‌ ಮತ್ತು ಗೈನಕಾಲಜಿಸ್ಟ್‌ ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬ್‌ಸ್ಟ್ರೆಟಿಕ್ಸ್‌ ಮತ್ತು ಗೈನಕಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next