Advertisement
ವಿಜಯನಾಥ ಶೆಣೈಯವರ ಪತ್ನಿ ಮಂಜುಳಾ ಶೆಣೈ, ಮಕ್ಕಳಾದ ಶ್ರೀನಿವಾಸ ಶೆಣೈ ಮತ್ತು ಅನುರೂಪಾ ಶೆಣೈ ಅವರನ್ನು ಶ್ರೀಮಠಕ್ಕೆ ಕರೆಸಿ ಅನುಗ್ರಹಿಸಿದ ಶ್ರೀಪಾದರು, “”ಪರ್ಯಾಯೋತ್ಸವದಂಥ ಧಾರ್ಮಿಕ ಸಂಭ್ರಮಕ್ಕೆ ಸಾಂಸ್ಕೃತಿಕ ಆಯಾಮ ನೀಡುವಲ್ಲಿ ವಿಜಯನಾಥ ಶೆಣೈ ಕೊಡುಗೆ ಮಹಣ್ತೀದ್ದು. ಹತ್ತು ಪರ್ಯಾಯ ಮಹೋತ್ಸವಗಳಲ್ಲಿ ಅವರು ಸಕ್ರಿಯರಾಗಿ ತೊಡಗಿಸಿ ಕೊಂಡರು. ಕಲಾತ್ಮಕವಾದ ಸ್ತಬ್ಧಚಿತ್ರ ಗಳನ್ನು ಸಂಯೋಜಿಸಿ ಪರ್ಯಾಯ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದರು.
“”ಪ್ರತಿ ಕಾರ್ಯಕ್ರಮವನ್ನು ಸಂಪೂರ್ಣ ವಿನ್ಯಾಸಗೊಳಿಸಿ, ಬಳಿಕ ತಾವು ತೆರೆಯ ಮರೆಯಲ್ಲಿ ಇದ್ದು ಬಿಡುವ ನಿರ್ಮಮಕಾರದ ವ್ಯಕ್ತಿತ್ವ ಅವರದು. ವಿಶ್ವಖ್ಯಾತಿಯ ಕಲಾವಿದರನ್ನು ಉಡುಪಿಗೆ ಕರೆಸಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸಿದ ವಿಜಯನಾಥ ಶೆಣೈ ಸಾಂಪ್ರದಾಯಿಕ ವಾಸ್ತುಸೌಂದರ್ಯದ ಹಸ್ತಶಿಲ್ಪ, ಹೆರಿಟೇಜ್ ವಿಲೇಜ್‌ಗಳನ್ನು ನಿರ್ಮಿಸಿ ಸಮಾಜಕ್ಕೆ ಮಾದರಿಯಾದರು” ಎಂದು ಶ್ರೀಪಾದರು ನುಡಿದರು.
ಶ್ರೀಮಠದ ವಿಷ್ಣುಮೂರ್ತಿ ಆಚಾರ್ಯ, ಎಸ್.ವಿ. ಭಟ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಆರ್ಟಿಸ್ಟ್ ಫೋರಮ್ ಅಧ್ಯಕ್ಷ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.