ಭಯನೇ ತುಂಬಿದ ಊರಿಗೆ, ಭಯ ಅಂದ್ರೆ ಏನು ಅಂತಾನೇ ಗೊತ್ತಿಲ್ವೇ ಇರೋನು ಒಬ್ಬ ಬಂದ… – ಇದು “ವಿಕ್ರಾಂತ್ ರೋಣ’ ಚಿತ್ರದ ಟ್ರೇಲರ್‌ನಲ್ಲಿರುವ ಒಂದು ಡೈಲಾಗ್. ಡೈಲಾಗ್‌ಗೆ ತಕ್ಕಂತೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿರೋದು ಟ್ರೇಲರ್ ನೋಡಿದಾಗ ಗೊತ್ತಾಗುತ್ತದೆ.
ಗುರುವಾರ ಬಿಡುಗಡೆಯಾಗಿರುವ “ವಿಕ್ರಾಂತ್ ರೋಣ’ ಚಿತ್ರದ ಟ್ರೇಲರ್ ನಿಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುವುದರಲ್ಲಿ ಎರಡು ಮಾತಿಲ್ಲ. ನಿರ್ದೇಶಕ ಅನೂಪ್ ಭಂಡಾರಿ ಥ್ರಿಲ್ಲರ್ ಹಿನ್ನೆಲೆಯಲ್ಲಿ ಇಡೀ ಕಥೆಯನ್ನು ಕಟ್ಟಿಕೊಟ್ಟಿರೋದು ಎದ್ದು ಕಾಣುತ್ತದೆ.
ಟ್ರೇಲರ್‌ನಲ್ಲಿ ತೋರಿಸಿರುವ ಸಣ್ಣ ತುಣುಕು, ಸಿನಿಮಾದೊಳಗಿರುವ ದೊಡ್ಡ ಕುತೂಹಲಕ್ಕೆ ನಾಂದಿ ಹಾಡಿರೋದು ಸುಳ್ಳಲ್ಲ. ಟ್ರೇಲರ್ ನೋಡಿದವರಿಗೆ ಇದು ರೆಗ್ಯುಲರ್ ಜಾನರ್ ಸಿನಿಮಾವಲ್ಲ ಎಂಬುದು ಮೊದಲ ನೋಟಕ್ಕೆ ಸ್ಪಷ್ಟವಾಗುತ್ತದೆ.
ಚಿತ್ರದಲ್ಲಿ ನಿಗೂಢ ಊರು, ಆ ಊರಿನಲ್ಲಿ ನಿಗೂಢವಾಗಿ ನಡೆಯುವ ಘಟನೆಗಳು, ಭಯಭೀತ ಜನರ ಮಧ್ಯೆ ಡೇರ್ ಡೇವಿಲ್‌ನಂತಹ ನಾಯಕನ ಎಂಟ್ರಿ… ಹೀಗೆ ಹಲವು ಅಂಶಗಳನ್ನು ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ. ಮುಖ್ಯವಾಗಿ ಕಥೆಗೆ ಪೂರಕವಾಗಿರುವ ಪರಿಸರ ಟ್ರೇಲರ್‌ನ ಹೈಲೈಟ್. ಕಲಾ ನಿರ್ದೇಶಕ ಶಿವಕುಮಾರ್, ಛಾಯಾಗ್ರಾಹಕ ವಿಲಿಯಂ ಡೇವಿಡ್ ಅವರ ಕೈ ಚಳಕ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತದೆ. ಚಿತ್ರತಂಡ ಕಥೆಗೆ ಪೂರಕವಾದ ಸೂಕ್ಷ್ಮ ಅಂಶಗಳ ಬಗ್ಗೆ ಗಮನ ಹರಿಸಿರೋದು ಎದ್ದು ಕಾಣುತ್ತದೆ.
ಟ್ರೇಲರ್ ನೋಡಿದ ಕಿಚ್ಚನ ಅಭಿಮಾನಿಗಳು ಫಿದಾ ಆಗಿದ್ದಾರೆ. ಪರಿಣಾಮ ಸಿಕ್ಕಾಪಟ್ಟೆ ಹಿಟ್ಸ್ ನೊಂದಿಗೆ ಟ್ರೇಲರ್ ಮುನ್ನುಗ್ಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ “ರ.. ರ.. ರಕ್ಕಮ್ಮ’ ಹಾಡು ಸೂಪರ್ ಹಿಟ್ ಆಗಿದ್ದು, ಜಾಕ್ವೆಲಿನ್ ಸ್ಟೆಪ್ ವೈರಲ್ ಆಗಿದೆ. ಈಗ ಟ್ರೇಲರ್ ಸಿನಿಮಾದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಜಾಕ್ ಮಂಜು ನಿರ್ಮಿಸಿರುವ ಈ ಚಿತ್ರ ವನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಜುಲೈ 28ಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ.