Advertisement

ಆ್ಯಂಟಿ ಬಯಾಟಿಕ್‌ ; ಹೊಳಪು ಕಳೆದುಕೊಳ್ಳುತ್ತಿರುವ ವಜ್ರ

12:30 AM Mar 03, 2019 | |

ನಮ್ಮ ದೇಹಕ್ಕೆ ಸೂಕ್ಷ್ಮಜೀವಿಗಳು ಹಾನಿ  ಉಂಟು ಮಾಡಿದಾಗ ಉಂಟಾಗುವ ಅನಾರೋಗ್ಯ ಸ್ಥಿತಿಯನ್ನು ಸೋಂಕು ಎಂದು ಕರೆಯಲಾಗುತ್ತದೆ. ಏಕಜೀವಕೋಶವುಳ್ಳ  ಸೂಕ್ಷ್ಮಜೀವಿಗಳು ನಮ್ಮ ಸುತ್ತಮುತ್ತಲೂ ಇರುತ್ತವೆ. ಅತಿ ಸೂಕ್ಷ್ಮ ಜೀವಾಣುಗಳಾಗಿರುವ ಇವುಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ, ಸೂಕ್ಷ್ಮದರ್ಶಕದಿಂದ  ಮಾತ್ರ ಸಾಧ್ಯ.

Advertisement

ವಿವಿಧ ಸೂಕ್ಷ್ಮಜೀವಿಗಳು ಯಾವುವು?
ಬ್ಯಾಕ್ಟೀರಿಯಾ, ಶಿಲೀಂಧ್ರ, ವೈರಸ್‌, ಪರೋಪಜೀವಿಗಳು ಇತ್ಯಾದಿಯಾಗಿ ಸೂಕ್ಷ್ಮಜೀವಿಗಳಲ್ಲಿ ಹಲವಾರು ವಿಧಗಳಿವೆ.  ತಮ್ಮ ಸಂರಚನೆ ಮತ್ತು ಆಂತರಿಕ ಅಂಗರಚನೆಯಿಂದ ಅವು ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುತ್ತವೆ. 

ನಮ್ಮ ದೇಹದಲ್ಲೂ ಸೂಕ್ಷ್ಮಜೀವಿಗಳು ಇರುತ್ತವೆಯೇ?
ಹೌದು. ಸೂಕ್ಷ್ಮಜೀವಿಗಳು ನಮ್ಮ ದೇಹದ ಅವಿಭಾಜ್ಯ ಅಂಗವಾಗಿವೆ. ನಮ್ಮ ಚರ್ಮ ಮತ್ತು ಕರುಳಿನಲ್ಲೂ ಅವು ಇವೆ. ಮನುಷ್ಯ ದೇಹ ಕಾರ್ಯನಿರ್ವಹಿಸಲು ಸೂಕ್ಷ್ಮಜೀವಿಗಳ ಇರುವಿಕೆ ಅಗತ್ಯವಾಗಿದೆ. ರೋಗ ನಿರೋಧಕ ಶಕ್ತಿ ಬೆಳೆಯಲು ಮತ್ತು ಆಹಾರ ಪಚನವಾಗಲು ಸೂಕ್ಷ್ಮಜೀವಿಗಳು ಅಗತ್ಯ. ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು ಇಲ್ಲದೆ ಇದ್ದರೆ ಬದುಕುವುದು ಕಷ್ಟ.

ಎಲ್ಲ ಅನಾರೋಗ್ಯಗಳಿಗೂ ಆ್ಯಂಟಿ ಬಯಾಟಿಕ್‌ 
ಔಷಧ ತೆಗೆದುಕೊಳ್ಳಬೇಕೇ?

ಇಲ್ಲ. ಎಲ್ಲ ಸೋಂಕು ಕಾಯಿಲೆಗಳಿಗೂ ಆ್ಯಂಟಿ ಬಯಾಟಿಕ್‌ ಔಷಧಗಳು ಅಗತ್ಯವಲ್ಲ. ಆ್ಯಂಟಿ ಬಯಾಟಿಕ್‌ ಚಿಕಿತ್ಸೆಯನ್ನು ಆರಂಭಿಸುವುದಕ್ಕೆ ಮುನ್ನ ಕಾಯಿಲೆ ಉಂಟಾಗಿರುವ ಕಾರಣವನ್ನು ಪತ್ತೆ ಹಚ್ಚುವುದು ಅತ್ಯಂತ ಮುಖ್ಯ. “ಪ್ರತಿ ಬಾರಿಯೂ ಆ್ಯಂಟಿ ಬಯಾಟಿಕ್‌ ಔಷಧಗಳೇ ಉತ್ತರವಲ್ಲ’. ಆ್ಯಂಟಿ ಬಯಾಟಿಕ್‌ ತೆಗೆದುಕೊಳ್ಳುವುದಕ್ಕೆ ಮುನ್ನ ವೃತ್ತಿಪರ ಪರಿಣತ ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕ.  ನಾವೇ ಆಗಿ ಆ್ಯಂಟಿ ಬಯಾಟಿಕ್‌ ಔಷಧಗಳನ್ನು ಏಕೆ ತೆಗೆದುಕೊಳ್ಳಬಾರದು ಎಂದರೆ, ಮೊದಲನೆಯದಾಗಿ ನಮಗೆ ಉಂಟಾಗಿರುವ ಅನಾರೋಗ್ಯಕ್ಕೆ ಆ್ಯಂಟಿ ಬಯಾಟಿಕ್‌ ಅಗತ್ಯವೇ ಎಂಬುದನ್ನು ನಿರ್ಧರಿಸುವಷ್ಟು ಪರಿಣತಿ ನಮಗಿರುವುದಿಲ್ಲ. ಅನಾರೋಗ್ಯಕ್ಕೆ ಬ್ಯಾಕ್ಟೀರಿಯಾ ಕಾರಣವಾಗಿಲ್ಲದ ಸಂದರ್ಭದಲ್ಲಿ ಆ್ಯಂಟಿ ಬಯಾಟಿಕ್‌ ತೆಗೆದುಕೊಂಡರೆ ಬ್ಯಾಕ್ಟೀರಿಯಾ ಎಚ್ಚೆತ್ತುಕೊಳ್ಳುತ್ತದೆ ಮತ್ತು ನಿಧಾನವಾಗಿ ಆ್ಯಂಟಿ ಬಯಾಟಿಕ್‌ ತನ್ನ ಮೇಲೆ ಬೀರುವ ಪರಿಣಾಮಕ್ಕೆ ರಕ್ಷಣಾ ವ್ಯವಸ್ಥೆಯನ್ನು ಬೆಳೆಯಿಸಿಕೊಳ್ಳುತ್ತದೆ. ಈ ವಿದ್ಯಮಾನವನ್ನು ಪ್ರತಿರೋಧ ಎನ್ನಲಾಗುತ್ತದೆ. ಇದರರ್ಥವೆಂದರೆ, ಬ್ಯಾಕ್ಟೀರಿಯಾವು ಆ್ಯಂಟಿ ಬಯಾಟಿಕ್‌ ತನ್ನ ಮೇಲೆ ಬೀರುವ ಪರಿಣಾಮವನ್ನು ಅರ್ಥ ಮಾಡಿಕೊಂಡು ಅದರಿಂದ ಪಾರಾಗಲು ಸಾಧ್ಯವಾಗುವಂತಹ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತದೆ. ಆದ್ದರಿಂದ ನಾವು ಅನಗತ್ಯವಾಗಿ ಆ್ಯಂಟಿ ಬಯಾಟಿಕ್‌ ಔಷಧಗಳನ್ನು ಸೇವಿಸಿದರೆ ಸೂಕ್ಷ್ಮಜೀವಿಗಳು ಆ ನಿರ್ದಿಷ್ಟ ಆ್ಯಂಟಿ ಬಯಾಟಿಕ್‌ಗೆ ಪ್ರತಿರೋಧವನ್ನು ಬೆಳೆಯಿಸಿಕೊಳ್ಳುತ್ತವೆ ಹಾಗೂ ಆ ಆ್ಯಂಟಿ ಬಯಾಟಿಕ್‌ ಸೂಕ್ಷ್ಮಜೀವಿಗಳನ್ನು ನಿವಾರಿಸುವಲ್ಲಿ ಉಪಯೋಗರಹಿತವಾಗುತ್ತದೆ. ಆದ್ದರಿಂದ ಈ ಪ್ರತಿರೋಧ ಮತ್ತು ಅದರ ವಿಸ್ತರಣೆಯನ್ನು ತಡೆಯುವುದಕ್ಕೆ ಆ್ಯಂಟಿ ಬಯಾಟಿಕ್‌ಗಳನ್ನು ಎಚ್ಚರಿಕೆ ಮತ್ತು ವಿವೇಚನೆಯಿಂದ ಬಳಸುವುದು ಅಗತ್ಯವಾಗಿದೆ.

ಎಲ್ಲ ಸೂಕ್ಷ್ಮಜೀವಿಗಳೂ ಅಪಾಯಕಾರಿಯೇ?
ಅಲ್ಲ. ಸೂಕ್ಷ್ಮಜೀವಿಗಳಿಂದ ಉಂಟಾಗಬಹುದಾದ ಅಪಾಯವನ್ನು ನಿಭಾಯಿಸುವಲ್ಲಿ ನಮ್ಮ ದೇಹ ರೋಗ ನಿರೋಧಕ ಶಕ್ತಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಬ್ಯಾಕ್ಟೀರಿಯಾಗಳ ಅಪಾಯಕಾರಿ ಪರಿಣಾಮಗಳ ನಡುವೆ ಅತ್ಯಂತ ನಿಖರ ಮತ್ತು ಸ್ಪಷ್ಟವಾದ ಸಮತೋಲನ ಇರುತ್ತದೆ. ನಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾದಾಗ ಸೂಕ್ಷ್ಮಜೀವಿಗಳಿಗೆ ನಮ್ಮ ದೇಹಕ್ಕೆ ಹಾನಿ ಉಂಟು ಮಾಡಲು ಸಾಧ್ಯವಾಗುತ್ತದೆ ಮತ್ತು ಪರಿಣಾಮವಾಗಿ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲವು ಅನಾರೋಗ್ಯ ಸ್ಥಿತಿಗಳಿಗೆ ಉದಾಹರಣೆ ಎಂದರೆ, ಅಪೌಷ್ಟಿಕತೆ, ವೃದ್ಧಾಪ್ಯ, ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾ, ಕ್ಯಾನ್ಸರ್‌ ಇತ್ಯಾದಿ. ಈ ಅನಾರೋಗ್ಯ ಅಥವಾ ದೈಹಿಕ ಸ್ಥಿತಿಗಳನ್ನು ಹೊಂದಿರುವವರು ಸೂಕ್ಷ್ಮಜೀವಿಗಳಿಂದ ಉಂಟಾಗುವ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಅಧಿಕ.
  
ನಾವು ಕಾಯಿಲೆಗೆ ತುತ್ತಾಗುವುದಕ್ಕೆ ಕಾರಣವಾಗಬಲ್ಲ ಇತರ ಸ್ಥಿತಿಗಳೆಂದರೆ ನಮ್ಮ ಉದ್ಯೋಗ, ಪ್ರವಾಸ ಇತಿಹಾಸ, ನೈರ್ಮಲ್ಯ, ಆಹಾರ ಸೇವನೆ, ಶುಚಿಗೊಳಿಸುವುದು ಮತ್ತು ಅಡುಗೆ ವಿಧಾನ ಮತ್ತು ಮನೆಯ ನೈರ್ಮಲ್ಯ. 

Advertisement

ಆ್ಯಂಟಿ ಬಯಾಟಿಕ್‌ ಪ್ರತಿರೋಧವನ್ನು ಬೆಳೆಯಿಸಿಕೊಳ್ಳುವುದಕ್ಕೆ 
ಕಾರಣವಾಗುವ ಸನ್ನಿವೇಶಗಳು ಯಾವುವು?

ಆ್ಯಂಟಿ ಬಯಾಟಿಕ್‌ಗಳ ಅತಿಯಾದ ಬಳಕೆ ಮತ್ತು ದುರ್ಬಳಕೆಯು ಬ್ಯಾಕ್ಟೀರಿಯಾಗಳು ಪ್ರತಿರೋಧ ವನ್ನು ಬೆಳೆಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ವ್ಯಕ್ತಿಯು ಆ್ಯಂಟಿ ಬಯಾಟಿಕ್‌ ಸೇವಿಸಿದಾಗ ಅದಕ್ಕೆ ಸೂಕ್ಷ್ಮಸಂವೇದಿಯಾಗಿರುವ ಬ್ಯಾಕ್ಟೀರಿಯಾವು ಸಾಯುತ್ತದೆ. ಆದರೆ ಪ್ರತಿರೋಧ ಶಕ್ತಿಯನ್ನು ಹೊಂದಿರುವ ಬ್ಯಾಕ್ಟೀರಿಯಾವು ಬೆಳವಣಿಗೆ ಹೊಂದಿ ಪ್ರಸಾರವಾಗುತ್ತದೆ. ಆ್ಯಂಟಿ ಬಯಾಟಿಕ್‌ಗಳ ವಿವೇಚನಾ ರಹಿತ ಬಳಕೆಯಿಂದ ಔಷಧ ಪ್ರತಿರೋಧ ಹೊಂದಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹೀಗೆ ವೃದ್ಧಿಯಾಗಬಹುದು. ಪ್ರತಿರೋಧ ಉತ್ಪಾದನೆಗೆ ಕಾರಣವಾಗಬಲ್ಲ ಇನ್ನೊಂದು ಸಂಗತಿ ಎಂದರೆ, ಶಿಫಾರಸು ಮಾಡಲಾದ ಆ್ಯಂಟಿ ಬಯಾಟಿಕ್‌ನ ನಿರ್ದಿಷ್ಟ ಕೋರ್ಸ್‌ ಅನ್ನು ಸಂಪೂರ್ಣಗೊಳಿಸದೇ ಇರುವುದು. ಆದ್ದರಿಂದ ವಿವೇಚನೆ ಮತ್ತು ಎಚ್ಚರಿಕೆಯಿಂದ ಕೂಡಿದ ಹಾಗೂ ಯೋಜಿತವಾದ ಆ್ಯಂಟಿ ಬಯಾಟಿಕ್‌ ಬಳಕೆಯು ಪ್ರತಿರೋಧದ ಬೆಳವಣಿಗೆ ಮತ್ತು ಪ್ರಸಾರವನ್ನು ತಪ್ಪಿಸುವ ನಿಟ್ಟಿನಲ್ಲಿ ಅತ್ಯಂತ ಮುಖ್ಯ.

ಅನಾರೋಗ್ಯ ಉಂಟಾದಾಗ 
ಏನು ಮಾಡುತ್ತೇವೆ?

ಅನಾರೋಗ್ಯಕ್ಕೆ ತುತ್ತಾದಾಗ ನಾವು ವೈದ್ಯರ ಬಳಿಗೆ ಹೋಗುತ್ತೇವೆ ಮತ್ತು ಯಾವುದೇ ಔಷಧ ಸೇವಿಸುವುದಕ್ಕೆ ಮುನ್ನ ಅವರ ಸಲಹೆ ಪಡೆಯುತ್ತೇವೆ. ನಮಗೆ ಉಂಟಾಗಿರುವ ಅನಾರೋಗ್ಯವು ಸೂಕ್ಷ್ಮಜೀವಿಗಳಿಂದ ಉಂಟಾಗಿರುವಂಥದೇ ಅಥವಾ ಇತರ ಕಾರಣಗಳಿಂದಲೇ ಎಂಬುದನ್ನು ನಿರ್ಧರಿಸುವಲ್ಲಿ ವೈದ್ಯರು ತಜ್ಞರಾಗಿರುತ್ತಾರೆ. ವೈದ್ಯರ ಸಲಹೆ ಇಲ್ಲದೆಯೇ ಔಷಧದ ಅಂಗಡಿಗೆ ತೆರಳಿ ಆ್ಯಂಟಿ ಬಯಾಟಿಕ್‌ ಔಷಧ ಪಡೆದು ಸೇವಿಸುವ ಪ್ರಮಾದವನ್ನು ಯಾವತ್ತೂ ಮಾಡಬಾರದು.

ಆ್ಯಂಟಿ ಬಯಾಟಿಕ್‌ ಬಳಕೆಯನ್ನು ಕಡಿಮೆ ಮಾಡುವುದು ಏಕೆ ಅಗತ್ಯ?
ಆ್ಯಂಟಿ ಬಯಾಟಿಕ್‌ ಬಳಕೆಯಿಂದ ಆ್ಯಂಟಿ ಬಯಾಟಿಕ್‌ ಪ್ರತಿರೋಧ ಹೊಂದಿರುವ ಬ್ಯಾಕ್ಟೀರಿಯಾ ಉಗಮವಾಗಬಹುದು ಎಂಬುದು ಸ್ಪಷ್ಟ. ಹೀಗಾಗಿ ಆ್ಯಂಟಿ ಬಯಾಟಿಕ್‌ಗಳಿಗೆ ಬ್ಯಾಕ್ಟೀರಿಯಾಗಳು ಪ್ರತಿರೋಧ ಬೆಳೆಸಿಕೊಳ್ಳುವುದನ್ನು ತಡೆಯಲು ಇರುವ ಒಂದು ಪರಿಣಾಮಕಾರಿ ವಿಧಾನ ಎಂದರೆ, ಆ್ಯಂಟಿ ಬಯಾಟಿಕ್‌ಗಳ ಉಪಯೋಗವನ್ನು ಕಡಿಮೆ ಮಾಡುವುದು. ಆ್ಯಂಟಿ ಬಯಾಟಿಕ್‌ಗಳ ದುರ್ಬಳಕೆ, ಅತಿಯಾದ ಬಳಕೆ ಮತ್ತು ವಿವೇಚನಾ ರಹಿತ ಉಪಯೋಗವನ್ನು ತಡೆಯುವುದಕ್ಕೆ ಹಾಗೂ ಅವುಗಳನ್ನು ವಿವೇಚನೆಯಿಂದ ಉಪಯೋಗಿಸುವುದಕ್ಕಾಗಿ ವೈದ್ಯರು ಆ್ಯಂಟಿ ಬಯಾಟಿಕ್‌ಗಳನ್ನು ರಾಷ್ಟ್ರೀಯ ಚಿಕಿತ್ಸಾ ಮಾರ್ಗದರ್ಶಿ ಸೂತ್ರಗಳ ಅನುಸಾರವಾಗಿ ಶಿಫಾರಸು ಮಾಡಬೇಕು. ಅಲ್ಲದೆ, ರೋಗಿಗಳು ಆ್ಯಂಟಿ ಬಯಾಟಿಕ್‌ಗಳನ್ನು ವೈದ್ಯರ ಶಿಫಾರಸು ಪ್ರಕಾರವೇ ಉಪಯೋಗಿಸಬೇಕು ಹಾಗೂ ಶಿಫಾರಸು ಮಾಡಿರುವ ಕೋರ್ಸ್‌ನ್ನು ಪೂರ್ಣಗೊಳಿಸಬೇಕು. ಕೃಷಿಯಲ್ಲಿ, ಅದರಲ್ಲೂ ಮುಖ್ಯವಾಗಿ ಆಹಾರವಾಗಿ ಉಪಯೋಗವಾಗುವ ಪ್ರಾಣಿಗಳಲ್ಲಿ ಆ್ಯಂಟಿ ಬಯಾಟಿಕ್‌ ಬಳಕೆಯನ್ನು ಕಡಿಮೆ ಮಾಡುವುದು ಕೂಡ ಅತ್ಯಂತ ಮುಖ್ಯ. ಆಹಾರ, ಪರಿಸರದ ಮೂಲಕ ಪ್ರತಿರೋಧ ಶಕ್ತಿ ಹೊಂದಿರುವ ವಂಶವಾಹಿಗಳು ಮನುಷ್ಯ ದೇಹ ಪ್ರವೇಶಿಸುವುದನ್ನು ತಡೆಯದ ವಿನಾ ಮನುಷ್ಯರಲ್ಲಿ ಆ್ಯಂಟಿ ಬಯಾಟಿಕ್‌ ಪ್ರತಿರೋಧದ ಸಮಸ್ಯೆಯನ್ನು ಪರಿಹರಿಸುವುದು ಸಾಧ್ಯವಿಲ್ಲ. 

– ಮುಂದುವರಿಯುವುದು

– ಮೊಹಮ್ಮದ್‌ ಝೈಬುದ್ದೀನ್‌ ಅಹದ್‌,
 ಆ್ಯಂಟಿಮೈಕ್ರೊಬಿಯಲ್‌ ಸ್ಟೀವರ್ಡ್‌ಶಿಪ್‌ ರಿಸರ್ಚ್‌ ಅಸೋಸಿಯೇಟ್‌
– ಅಸೀಮ್‌ ಆಲಿ,ಜೂನಿಯರ್‌ ರೆಸಿಡೆಂಟ್‌

Advertisement

Udayavani is now on Telegram. Click here to join our channel and stay updated with the latest news.

Next