ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧ ವಿರೋಧಿಸಿ ವಾರಗಳ ಕಾಲ ನಡೆದ ಭಾರಿ ಪ್ರತಿಭಟನೆಯ ದಿಕ್ಕು ತಪ್ಪಿಸುವ ದುರುದ್ದೇಶ ಹೊಂದಿ ಸಮಾಜ ವಿದ್ರೋಹಿಗಳು ಮತ್ತು ದುಷ್ಕರ್ಮಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಶುಕ್ರವಾರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಪನ್ನೀರ್ ಸೆಲ್ವಂ ‘ಸಮಾಜ ವಿದ್ರೋಹಿಗಳಿಗೆ ಪ್ರತಿಭಟನೆ ಮರೀನಾ ಬೀಚ್‌ನಲ್ಲಿ ಅಂತ್ಯಗೊಳ್ಳುವುದು ಬೇಕಿರಲಿಲ್ಲ. ದೊಡ್ಡ ದೊಂಬಿಯನ್ನಾಗಿ ಪರಿವರ್ತಿಸುವು ದುರುದ್ದೇಶವಿತ್ತು, ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೆ ಸಾರ್ವಜನಿಕ ರ ಪ್ರಾಣ ಮತ್ತು ಆಸ್ತಿ ಹಾನಿಯನ್ನು ತಡೆದರು’ ಎಂದರು.
‘ಕೆಲ ಪ್ರತಿಭಟನಾಕಾರರು ಪ್ರತ್ಯೇಕ ತಮಿಳುನಾಡು ರಚನೆಗೆ ಘೋಷಣೆಗಳನ್ನು ಕೂಗಿದ್ದು, ಇನ್ನು ಕೆಲ ಪ್ರತಿಭಟನಾಕಾರರು ಉಗ್ರ ಒಸಮಾ ಬಿನ್ ಲಾಡೆನ್ ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಗಣರಾಜ್ಯ ದಿನಾಚರಣೆಯನ್ನು ಬಹಿಷ್ಕರಿಸಲು ಘೋಷಣೆ ಕೂಗಿರುವ ಬಗ್ಗೆ ಫೋಟೋ ಸಾಕ್ಷಿಗಳಿವೆ’ ಎಂದರು.
‘ಜನವರಿ 26 ರಂದು ಪ್ರತಿಭಟನಾಕಾರರನ್ನು ಮರೀನಾ ಬೀಚ್‌ನಿಂದ ಪೊಲೀಸರು ತೆರವುಗೊಳಿಸಲು ಮುಂದಾದಾಗ 10,000 ದಷ್ಟಿದ್ದ ಪ್ರತಿಭಟನಾಕಾರರ ಪೈಕಿ 2,000 ದಷ್ಟು ಜನರು ಅಲ್ಲೇ ಉಳಿದು ಕೊಂಡಿದ್ದರು. ಕೆಲ ಸಂಘಟನೆಗಳು ಮತ್ತು ಸಮಾಜ ದ್ರೋಹಿಗಳು ಪ್ರತಿಭಟನೆಯ ದಿಕ್ಕು ತಪ್ಪಿಸಲು ಮುಂದಾಗಿದ್ದರು’ ಎಂದರು.
ದುಷ್ಟ ಶಕ್ತಿಗಳನ್ನು ಶೀಘ್ರ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪನ್ನೀರ್ ಸೆಲ್ವಂ ಹೇಳಿದರು.
‘ಜಲ್ಲಿಕಟ್ಟು ನಿಷೇಧ ಆಗಿರುವುದು 2011 ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ, ಆಗ ಡಿಎಂಕೆ ಮಿತ್ರ ಪಕ್ಷವಾಗಿತ್ತು. ಮಾಜಿ ಮುಖ್ಯಮಂತ್ರಿ ಅಮ್ಮಾ ಜಯಲಲಿತಾ ಮತ್ತು ನಾನು ಜಲ್ಲಿಕಟ್ಟನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡಿದ್ದೆವು’ ಎಂದರು.