Advertisement

ಸಿಖ್‌ ವಿರೋಧಿ ದಂಗೆ: ಸಜ್ಜನ್‌ಗೆ ಜೀವಾವಧಿ

06:00 AM Dec 18, 2018 | Team Udayavani |

ನವದೆಹಲಿ: 1984ರ ಸಿಖ್‌ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಸಜ್ಜನ್‌ ಕುಮಾರ್‌ಗೆ ದೆಹಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಮೂಲಕ ಮೂವತ್ನಾಲ್ಕು ವರ್ಷಗಳ ಬಳಿಕ ಸಂತ್ರಸ್ತರಿಗೆ ನ್ಯಾಯ ಸಿಕ್ಕಿದೆ. ಅಷ್ಟೇ ಅಲ್ಲ, ಇಡೀ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ರಾಜಕಾರಣಿಯೊಬ್ಬರು ಶಿಕ್ಷೆಗೆ ಗುರಿಯಾಗಿದ್ದು, ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟು ಮಾಡಿದೆ.

Advertisement

ದೆಹಲಿ ಹೈಕೋರ್ಟ್‌ನ ಈ ತೀರ್ಪು ಮಧ್ಯಪ್ರದೇಶದಲ್ಲಿ ನಡೆದ ಕಮಲ್‌ನಾಥ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಮೇಲೂ ಮಂಕು ಕವಿಸಿತು. ಈ ಪ್ರಕರಣದ ತನಿಖೆ ನಡೆಸಿದ್ದ ನಾನಾವತಿ ಆಯೋಗದ ವರದಿಯಲ್ಲಿ ಕಮಲ್‌ನಾಥ್‌ ಅವರ ಹೆಸರೂ ಉಲ್ಲೇಖವಾಗಿರುವುದರಿಂದ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ನಾಯಕರು, ಕಮಲ್‌ನಾಥ್‌ ಅವರನ್ನು ಹೇಗೆ ಸಿಎಂ ಮಾಡುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆಗೈದರು. ಇನ್ನೊಂದೆಡೆ, ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಅವರು ಈ ತೀರ್ಪನ್ನು ಸ್ವಾಗತಿಸಿದ್ದಾರೆ.

ದೆಹಲಿಯ ಪಾಲಂ ಕಾಲೋನಿಯ ರಾಜನಗರ ಪಾರ್ಟ್‌ 1 ಪ್ರದೇಶದ ಐವರು ಸಿಖVರು ಮತ್ತು ಗುರುದ್ವಾರವೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಈ ಶಿಕ್ಷೆ ನೀಡಲಾಗಿದೆ. ಸಜ್ಜನ್‌ ಜತೆಗೆ ಇನ್ನೂ ಐವರ ಶಿಕ್ಷೆಯನ್ನೂ ಹೈಕೋರ್ಟ್‌ ಖಚಿತಪಡಿಸಿದೆ. ಡಿ.31ರೊಳಗೆ ಅಪರಾಧಿಗಳೆಲ್ಲರೂ ಶರಣಾಗಬೇಕು ಎಂದೂ ಸೂಚಿಸಿದೆ.

ಈ ಮಧ್ಯೆ, ತೀರ್ಪು ಪ್ರಶ್ನಿಸಿ ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಸಜ್ಜನ್‌ಕುಮಾರ್‌ ಪರ ವಕೀಲರು ಹೇಳಿದ್ದಾರೆ. 31ರ ವರೆಗೆ ಕಾಲಾವಕಾಶವಿದ್ದು, ಅಷ್ಟರಲ್ಲಿ ಸುಪ್ರೀಂ ಕದ ಬಡಿಯುತ್ತೇವೆ ಎಂದಿದ್ದಾರೆ.

ಕೋರ್ಟ್‌ ಹೇಳಿದ್ದೇನು?: ಈ ಜೀವಾವಧಿ ತೀರ್ಪು ಸಜ್ಜನ್‌ಕುಮಾರ್‌ ಅವರ “ಹಿಂದಿನ ಸಾಮಾನ್ಯ ಜೀವನವನ್ನು ನೆನಪಿಸಿಕೊಳ್ಳುವ ಶಿಕ್ಷೆ’ ಎಂದು ಹೈಕೋರ್ಟ್‌ ಹೇಳಿತು. ಜತೆಗೆ ಇಡೀ ಸಿಖ್‌ ವಿರೋಧಿ ದಂಗೆಯು “ರಾಜಕೀಯ ಕೃಪಾಕಟಾಕ್ಷದ ಅಮಲಿನಲ್ಲಿ ಮಾನವತೆಯ ಮೇಲೆ ನಡೆಸಿದ ದೌರ್ಜನ್ಯ’ ಎಂದು ಬಣ್ಣಿಸಿತು. ಅಪರಾಧಿಗಳಿಗೆ ಶಿಕ್ಷಿಸಲು ಮೂರು ದಶಕ ತೆಗೆದುಕೊಂಡರೂ, ಸಂತ್ರಸ್ತರ ಪಾಲಿಗೆ ಇದೊಂದು “ನಿರಾಕರಿಸಲಾಗದ’ ನ್ಯಾಯವಾಗಿದೆ ಎಂದ ನ್ಯಾಯಾಲಯ, “”ಸತ್ಯ ಎಂದಿಗೂ ಮೇಲುಗೈ ಸಾಧಿಸುತ್ತದೆ ಮತ್ತು ನ್ಯಾಯ ಸಿಕ್ಕೇ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟಿತು.

Advertisement

ಈ ತೀರ್ಪು ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. ಇಲ್ಲಿವರೆಗೆ ನಾವು ಅನುಭವಿಸಿದ ಅನ್ಯಾಯವನ್ನು ಬೇರೆ ಯಾರೂ ಅನುಭವಿಸಿರಲು ಸಾಧ್ಯವಿಲ್ಲ.
– ಜಗದೀಶ್‌ ಕೌರ್‌, ಹೋರಾಟಗಾರ್ತಿ

ಘಟನೆಗೆ ಕಾರಣರಾದ ಅಪರಾಧಿಗಳು ರಾಜಕೀಯ ಆಶ್ರಯ ಪಡೆದಿದ್ದರಿಂದ ಸಂತ್ರಸ್ತರು ತಮಗೆ ನ್ಯಾಯ ಸಿಗುವ ಅವಕಾಶವೇ ಇಲ್ಲ ಎಂದು ಭಾವಿಸಿದ್ದರು.
– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next