Advertisement

ಆ್ಯಂಟಿ ಮೈಕ್ರೋಬಿಯಲ್‌ ಪ್ರತಿರೋಧ

06:00 AM Dec 17, 2017 | |

ಯಾವುದೇ ಸೋಂಕಿನ ಹಿಂದೆ ಲಿಲ್‌- ಕ್ಯಾರೆನ್‌ ಅಥವಾ ಡಾಫೆ° ಅಥವಾ ನೀವೂ ಇರಬಹುದು!
ನನ್ನ ಹೆಸರು ಲಿಲ್‌ – ಕ್ಯಾರನ್‌; ನಾನು ನಾರ್ವೇಯ ಓರ್ವ ನಿವೃತ್ತ ಶಾಲಾ ಶಿಕ್ಷಕಿ, 66 ವರ್ಷ ವಯಸ್ಸಿನಾಕೆ. ಮೂವರು ಮಕ್ಕಳು ಮತ್ತು ಐವರು ಮೊಮ್ಮಕ್ಕಳು ನನಗಿದ್ದಾರೆ. ನನ್ನ ಪತಿ ಮರಣಿಸಿದ ಬಳಿಕ ನಾನು ಏಕಾಂಗಿಯಾಗಿ ವಾಸಿಸುತ್ತಿದ್ದೇನೆ, ಓದು, ಹೆಣಿಗೆ, ಹೊಲಿಗೆ, ಕವಿತೆಗಳನ್ನು ಬರೆಯುವುದು ಮತ್ತು ಪ್ರವಾಸಗಳಲ್ಲಿ ನನ್ನ ಸಮಯ ಕಳೆಯುತ್ತದೆ. ನಾನು ಹಲವಾರು ಬಾರಿ ಭಾರತಕ್ಕೆ ಬಂದಿದ್ದೆನಾದರೂ ಕೇರಳಕ್ಕೆ ಭೇಟಿ ನೀಡಿರಲಿಲ್ಲ. ಹೀಗಾಗಿ 2010ರಲ್ಲಿ ನಾನು ಕೇರಳ ಪ್ರವಾಸ ಹಾಕಿಕೊಂಡೆ ಮತ್ತು ಸ್ಥಳೀಯ ಕುಟುಂಬವೊಂದರ ಜತೆಗೆ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿಕೊಂಡೆ. ಆದರೆ ದುರದೃಷ್ಟ ಬಹಳ ಬೇಗನೆ ನನ್ನನ್ನು ಮುತ್ತಿಕೊಂಡಿತು. ನನ್ನ ಆತಿಥ್ಯ ವಹಿಸಿಕೊಂಡಿದ್ದ ವ್ಯಕ್ತಿ ನನ್ನನ್ನು ವಿಮಾನನಿಲ್ದಾಣದಿಂದ ಕರೆದೊಯ್ದರಾದರೂ, ನಾವು ನಗರ ಸೇರುವುದಕ್ಕೆ ಮುನ್ನ ಅವರ ಕಾರು ಲಾರಿಯೊಂದಕ್ಕೆ ಢಿಕ್ಕಿ ಹೊಡೆಯಿತು.
  
ನನ್ನ ಕಾಲು ತೀವ್ರವಾಗಿ ಜಖಂಗೊಂಡು ಮುರಿದಿತ್ತು, ಆ್ಯಂಬ್ಯುಲೆನ್ಸ್‌ನಲ್ಲಿ ಮಲಗಿ ನಾನು ಆಸ್ಪತ್ರೆ ತಲುಪಿದೆ. ಆಸ್ಪತ್ರೆ ಸೇರಿದ ಬಳಿಕ ಪ್ಲಾಸ್ಟಿಕ್‌ ಹಾಸಿಗೆಯ ಮೇಲೆ, ಸುತ್ತಲೂ ರೋಗಿಗಳು ಕಿಕ್ಕಿರಿದಿದ್ದ ಕೊಠಡಿಯಲ್ಲಿ ಎರಡು ದಿನಗಳನ್ನು ಕಳೆದೆ. ದಿನಕ್ಕೆ ಒಂದು ಬಾರಿ ಒಂದು ಬೋಗುಣಿ ನೀರನ್ನು ನನಗೆ ನೀಡುತ್ತಿದ್ದರು; ಆದರೆ ಕಾಲು ಮುರಿದಿತ್ತಾದ್ದರಿಂದ ಶೌಚಕ್ಕೆ ತೆರಳಲು ಅಥವಾ ಬಟ್ಟೆ ಬದಲಾಯಿಸಿಕೊಳ್ಳಲು ನನಗೆ ಸಾಧ್ಯವಿರಲಿಲ್ಲ. ಆದ್ದರಿಂದ ಸೆಖೆಯ ಕೊಠಡಿಯಲ್ಲಿ ನಾನು ಮಲಗಿಯೇ ಇದ್ದೆ.

Advertisement

ಕೊನೆಗೊಮ್ಮೆ ನಾನು ಖಾಸಗಿ ಕೊಠಡಿಗೆ ವರ್ಗಾಯಿಸಲ್ಪಟ್ಟೆ ಮತ್ತು ಪೃಷ್ಠ ಬದಲಾವಣೆ ಶಸ್ತ್ರಕ್ರಿಯೆಯನ್ನು ನನಗೆ ನಡೆಸಲಾಯಿತು. ಭಾರತದಲ್ಲಿ ರೋಗಿಯನ್ನು ಅವರ ಕುಟುಂಬವೇ ನೋಡಿಕೊಳ್ಳಬೇಕು; ಹೀಗಾಗಿ ವೈದ್ಯರು ಅಥವಾ ದಾದಿಯರ ಗಮನ ನನ್ನತ್ತ ಹೆಚ್ಚೇನೂ ಇರಲಿಲ್ಲ. ನನ್ನ ಆತಿಥ್ಯ ವಹಿಸಿಕೊಂಡಿದ್ದವರ ಜತೆಯನ್ನು ಬಿಟ್ಟರೆ ಅವು ತೀವ್ರ ಏಕಾಂಗಿತನದ ದಿನಗಳು; ಕೊನೆಗೂ ನನಗೆ ಮನೆಗೆ ತೆರಳಲು ಅನುಮತಿ ಸಿಕ್ಕಿತು. 

ನಾರ್ವೇಗೆ ಮರಳಿದ ಬಳಿಕ ನಾನು ಮತ್ತೆ ನೇರವಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ವಿಶೇಷ ಕೊಠಡಿಯಲ್ಲಿ ನನ್ನನ್ನು ಪ್ರತ್ಯೇಕವಾಗಿ ಇರಿಸಿದ್ದರು ಮತ್ತು ನನ್ನನ್ನು ನೋಡಲು ಬರುವವರ ರಕ್ಷಕ ಬಟ್ಟೆಬರೆ ಧರಿಸಿಯೇ ಬರುತ್ತಿದ್ದರು. ನನ್ನ ಮೂತ್ರದಲ್ಲಿ ಆ್ಯಂಟಿಬಯಾಟಿಕ್‌ ಪ್ರತಿರೋಧ ಶಕ್ತಿ ಹೊಂದಿದ್ದ ಬ್ಯಾಕ್ಟೀರಿಯಾ ಒಂದನ್ನು ವೈದ್ಯರು ಪತ್ತೆ ಮಾಡಿದ್ದರು; ಭಾರತದಲ್ಲಿ ನಡೆಸಲಾದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನನಗೆ ಯೂರಿನರಿ ಕ್ಯಾಥೆಟರ್‌ ಅಳವಡಿಸಿದ್ದ ಸಂದರ್ಭದಲ್ಲಿ ಈ ರೋಗ ಪ್ರತಿರೋಧಕ ಶಕ್ತಿಯುಳ್ಳ ಬ್ಯಾಕ್ಟೀರಿಯಾ ನನ್ನಲ್ಲಿ ಬೆಳವಣಿಗೆ ಕಂಡಿತ್ತು. ನನಗೆ ಸೋಂಕಿನ ಯಾವ ಲಕ್ಷಣಗಳು ಅನುಭವಕ್ಕೆ ಬಾರದಿದ್ದರೂ ಅದು ಬಹಳ ಕಠಿನ ದಿನಗಳಾಗಿದ್ದವು.

ನನ್ನ ಕುಟುಂಬದಲ್ಲಿ ಮಗುವೊಂದು ಜನಿಸಿತ್ತು; ನನ್ನನ್ನು ನೋಡಲು ಬಂದರೆ ಅದಕ್ಕೆ ಸೋಂಕು ತಗುಲಬಹುದೋ ಎಂಬ ಭೀತಿ ಅವರನ್ನು ಕಾಡುತ್ತಿತ್ತು. ಕುಟುಂಬದಲ್ಲಿ ನಡೆದ ಮದುವೆಗಳು ಮತ್ತು ಪುಣ್ಯಸ್ನಾನಗಳನ್ನೂ ನಾನು ತಪ್ಪಿಸಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನುಭವಿಸಿದ ಏಕಾಂಗಿತನ ಬಹಳ ದೊಡ್ಡ ಏಟು ಕೊಟ್ಟಿತು, ತೀವ್ರ ಹತಾಶೆ, ಏಕಾಕಿತನವನ್ನು ನಾನು ಅನುಭವಿಸಿದೆ. ಶಸ್ತ್ರಚಿಕಿತ್ಸೆಯ ಗಾಯ ಇನ್ನೂ ವಾಸಿಯಾಗಿಲ್ಲವಾದ್ದರಿಂದ ಅದು ಮತ್ತೆ ಸೋಂಕಿಗೀಡಾಗಬಹುದು ಎಂಬ ಭೀತಿಯನ್ನೂ ಅನುಭವಿಸಿದೆ. ನಾನು ಬದುಕುತ್ತೇನೆಯೇ ಇಲ್ಲವೇ ಎಂಬ ಅನಿಶ್ಚಿತತೆಯನ್ನೂ ನಾನು ಅನುಭವಿಸಿದೆ. ಅದೃಷ್ಟವಶಾತ್‌ ನಾನು ಈಗ ಪೂರ್ತಿಯಾಗಿ ಗುಣಮುಖಳಾಗಿದ್ದೇನೆ ಮತ್ತು ಸೋಂಕಿನಿಂದ ಮುಕ್ತಿ ಹೊಂದಿದ್ದೇನೆ; ಆದರೆ ಒಮ್ಮೊಮ್ಮೆ ಶೀತವಾಗುವುದು ಅಥವಾ ಅದಕ್ಕಿಂತ ಕೆಟ್ಟದಾದ ಯಾವುದಾದರೂ ಅನಾರೋಗ್ಯ ಸಂಭವಿಸುವ ಬಗ್ಗೆ ಭೀತಳಾಗಿದ್ದೆ. ಆಸ್ಪತ್ರೆವಾಸದಿಂದಾಗಿ ನನಗೆ ಕಠಿನ ನೈರ್ಮಲ್ಯ ಕ್ರಮಗಳು ಹಾಗೂ ಸೋಂಕು ನಿವಾರಕ ಕೈತೊಳೆಯುವ ಕ್ರಮಗಳ ಮಹತ್ವದ ಅರಿವಾಯಿತು ಮತ್ತು ಹೋಮ್‌ ಕ್ಲೀನರ್‌ಗಳನ್ನು ಉಪಯೋಗಿಸಿ ಮನೆಯನ್ನು ಕ್ರಿಮಿಕೀಟ ಮುಕ್ತವನ್ನಾಗಿ ಇರಿಸುವುದು ಎಷ್ಟು ಮುಖ್ಯ ಎಂಬುದು ಮನವರಿಕೆಯಾಯಿತು. ಅದೊಂದು ಅತಿ ಕೆಟ್ಟ ಅನುಭವವಾಗಿದ್ದರೂ ನನ್ನ ಪ್ರವಾಸದ ಹವ್ಯಾಸದಿಂದ ಅದು ನನ್ನನ್ನು ದೂರ ಸರಿಸಲಿಲ್ಲ; ಈಗಾಗಲೇ ನನ್ನ ಮುಂದಿನ ಕೇರಳ ಪ್ರವಾಸದ ಯೋಜನೆ ಹಾಕಿಕೊಂಡಿದ್ದೇನೆ. 

ಈ ಬಾರಿ ಆಸ್ಪತ್ರೆಯಲ್ಲ; ಕೇರಳವನ್ನು ನೋಡುವ ಭರವಸೆ ನನಗಿದೆ. (ಮೂಲ: https://antibiotic.ecdc.europa.eu/

Advertisement

– ಮುಂದಿನ  ವಾರಕ್ಕೆ  

– ಡಾ| ವಂದನಾ ಕೆ. ಇ.
ಪ್ರೊಫೆಸರ್‌ ಆಫ್ ಮೈಕ್ರೊಬಯಾಲಜಿ
ಡಾ| ಟಿ.ಎಂ.ಎ.ಪೈ ಆ್ಯಂಟಿ ಮೈಕ್ರೋಬಿಯಲ್‌ ಸ್ಟೀವರ್ಡ್‌ಶಿಪ್‌ ದತ್ತಿಪೀಠ, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ ವಿಶ್ವವಿದ್ಯಾನಿಲಯ, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next