ಶಿವಮೊಗ್ಗ: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಅನುದಾನ ಸಂಪೂರ್ಣ ಕಡಿತಗೊಳಿಸಿ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತಗೊಳಿಸದೆ ಕನ್ನಡ ವಿವಿಗೆ ಮಾತ್ರ ಅನುದಾನ ಕಡಿತಗೊಳಿಸಿರುವುದಕ್ಕೆ ವಿರೋಧವಿದೆ.ಆದರೆ ನಾನು ಸಂಸ್ಕೃತ ವಿರೋಧಿಯಲ್ಲ ಎಂದರು.
ಕನ್ನಡ ಭಾಷೆ, ಸಾಹಿತ್ಯ, ಪರಂಪರೆ ಕುರಿತು ಅಧ್ಯಯನ ನಡೆಸಲು ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ಉದ್ದೇಶವಾಗಿದೆ. ಅನುದಾನ ಬಿಡುಗಡೆಗೆ ಹಣವಿಲ್ಲ ಎನ್ನುತ್ತಿರುವ ಸರ್ಕಾರ ಸಂಸ್ಕೃತ ವಿವಿಗೆ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ದೂರಿದ ಅವರು, ಹಂಪಿ ಕನ್ನಡ ವಿವಿಗೆ ಶೇ.80ರಷ್ಟು ಅನುದಾನ ಕಡಿತಗೊಳಿಸಿರುವುದರಿಂದ ವಿವಿಯ ಎಲ್ಲಾ ಸಂಶೋಧನಾ ಚಟುವಟಿಕೆ ಸ್ಥಗಿತಗೊಂಡಿದೆ ಎಂದರು.
ರಾಜ್ಯ ಸರ್ಕಾರ ಅನುಸರಿಸುತ್ತಿರುವ ಧೋರಣೆಯಿಂದಾಗಿ ಕನ್ನಡದ ಸ್ಥಾನಮಾನಕ್ಕೆ ಧಕ್ಕೆ ಉಂಟಾಗುತ್ತಿದೆ. 1980ರಲ್ಲಿ ನಡೆದ ಗೋಕಾಕ್ ಚಳುವಳಿಯಂತೆ ಇಂದು ಜನಾಂದೋಲನ ಅನಿವಾರ್ಯವಾಗಿದೆ. ಅನುದಾನ ಕಡಿತ ಹಾಗೂ ಸರ್ಕಾರದ ಕನ್ನಡ ವಿರೋಧಿ ನೀತಿ ಖಂಡಿಸಿ ನಾರಾಯಣ ಗೌಡ ಬಣದ ಕನ್ನಡ ರಕ್ಷಣಾ ವೇದಿಕೆ ಅಭಿಯಾನ ಹಮ್ಮಿಕೊಂಡಿದ್ದು ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಇದನ್ನೂ ಓದಿ:ಕಾಫಿನಾಡಿಗೆ ಹೆಚ್ಚಿನ ಅನುದಾನ: ಸೋಮಣ್ಣ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಪಂ, ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಯುವ ಜನೋತ್ಸವ ಸ್ಪರ್ಧೆಗಳು ನಡೆಯುತ್ತಿದ್ದು, ಈ ಸ್ಪರ್ಧೆಗಳಲ್ಲಿ ಆಶುಭಾಷಣ, ಏಕಾಂಕ ನಾಟಕ, ಬೀದಿ ನಾಟಕ, ಸಾಮಾಜಿಕ ಕಳಕಳಿ ವಿಷಯ ಆಧಾರಿತ ಸ್ಪರ್ಧೆಯು ಇಂಗ್ಲಿಷ್ ಅಥವಾ ಹಿಂದಿನಲ್ಲಿ ಮಾತ್ರ ನಡೆಯಲು ಅವಕಾಶವಿದೆ.
ಇದರಿಂದಾಗಿ ಕನ್ನಡ ಭಾಷೆಗೆ ಮಹತ್ವ ನೀಡದೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿಯೇ ನೀಡಲಾಗಿದೆ. ಈ ಬಗ್ಗೆ ಅಧಿ ಕಾರಿಗಳನ್ನು ಕೇಳಿದರೆ ಇದು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಾಗಿರುವುದರಿಂದ ಈ ಭಾಷೆಗಳಲ್ಲಿ ಮಾತ್ರ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಉತ್ತರ ನೀಡುತ್ತಾರೆ. ಇದಕ್ಕೆ ತಮ್ಮ ವಿರೋಧ ಹಾಗೂ ಧಿಕ್ಕಾರವಿದೆ ಎಂದರು. ಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಜಿಲ್ಲಾ ಘಟಕದ ವಕ್ತಾರ ತ್ಯಾಗರಾಜ್ ಇದ್ದರು.