Advertisement

ಆ್ಯಂಟಿ ಗ್ರ್ಯಾವಿಟಿ ಯೋಗ, ಹೊಸ ಯೋಗ ಕ್ರಮ

02:51 PM Feb 21, 2017 | Harsha Rao |

ಕಾಲ ಚಕ್ರ ಉರುಳಿದಂತೆ ನಮ್ಮ ಆಹಾರ ಪದ್ಧತಿ, ಜೀವನಶೈಲಿ ಮತ್ತು ಹವ್ಯಾಸಗಳೂ ಮಾರ್ಪಾಡಾಗುತ್ತಿವೆ. ಬದಲಾಗುತ್ತಿರುವ ಹವಾಮಾನ, ಕೆಲಸದ ವಾತಾವರಣ, ಒತ್ತಡದ ಜೀವನ-ಇವೆಲ್ಲದರ ಹಿನ್ನೆಲೆಯಲ್ಲಿ ಬೇರೆ ಬೇರೆ ರೀತಿ ಮನಸ್ಸಿಗೆ ಮತ್ತು ದೇಹಕ್ಕೆ ಮುದ ನೀಡುವ ದೈಹಿಕ ಕಸರತ್ತುಗಳಿಗೆ ಮಾರುಹೋಗುತ್ತಿದ್ದೇವೆ. ನಮ್ಮ  ಹಿರಿಯರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ-ಪ್ರಾಣಾಯಾಮಕ್ಕೆ ಮೊರೆಹೋಗಿದ್ದರು. ಆದರೆ ಈಗಿನ ಯುವ ಜನಾಂಗಕ್ಕೆ ಸಾಂಪ್ರದಾಯಿಕ ಯೋಗ ಅಷ್ಟೊಂದು ರುಚಿಸದು. ಹಾಗಾಗಿ ಯುವಜನತೆ ಹೆಚ್ಚಾಗಿ ದೈಹಿಕ ಕಸರತ್ತು ಹೆಚ್ಚಾಗಿರುವ ಜಿಮ್‌, ಈಜು, ಸೈಕ್ಲಿಂಗ್‌, ಬಿರುಸು ನಡಿಗೆ  ಮುಂತಾದ ಆಧುನಿಕ ಕಲ್ಪನೆಗಳಿಗೆ ಮೊರೆ ಹೋಗುತ್ತಿದ್ದಾರೆ. ಇಂಥದ್ದರಲ್ಲಿ ಈಗ ಹೊಸ ಸೇರ್ಪಡೆಯೆಂದರೆ ಆಂಟಿ ಗ್ರ್ಯಾವಿಟಿ ಯೋಗ ಅಥವಾ ಜೋಕಾಲಿ ಯೋಗ (Anti gravity yoga) ಎಂದರೂ ತಪ್ಪಲ್ಲ. 

Advertisement

ಏನು ವ್ಯತ್ಯಾಸ?
ಸಾಂಪ್ರದಾಯಿಕ ಪತಂಜಲಿ ಯೋಗದಲ್ಲಿ ಧ್ಯಾನ ಪ್ರಾಣಾಯಾಮ ಮತ್ತು ಆಸನಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಉಸಿರಾಟದ ಏರಿಳಿತಕ್ಕೆ ಅನುಗುಣವಾಗಿ ಆಸನಗಳನ್ನು ಮಾಡಬೇಕಾಗುತ್ತದೆ. ಧ್ಯಾನಕ್ಕೆ ಮಹತ್ವವಿದೆ. ಮನಸ್ಸಿನ ಏಕಾಗ್ರತೆಗೆ ಕೂಡ ಅತಿಯಾದ ಮಹಣ್ತೀ ನೀಡಲಾಗುತ್ತದೆ. ದೈಹಿಕ ಕಸರತ್ತು ವ್ಯಾಯಾಮಕ್ಕೆ ಅತಿಯಾದ ಪ್ರಾಮುಖ್ಯ ಇರದು. ಆದರೆ ಆಧುನಿಕ ತೇಲು ಯೋಗದಲ್ಲಿ ಧ್ಯಾನ ಮತ್ತು ಏಕಾಗ್ರತೆಗೆ ಹೆಚ್ಚಿನ ಮಹಣ್ತೀ ಇಲ್ಲ. ಅದೇ ರೀತಿ ಪ್ರಾಣಾಯಾಮಕ್ಕೂ ಅಷ್ಟೇ. ದೈಹಿಕ ವ್ಯಾಯಾಮ ಮತ್ತು ಕಸರತ್ತುಗಳಿಗೆ ಪ್ರಾಮುಖ್ಯ. ದೇಹದ ಸಮತೋಲನ ಮತ್ತು ಹಾವಭಾವಗಳಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸಾಂಪ್ರದಾಯಿಕ ಯೋಗಕ್ಕೆ ಹೋಲಿಸಿದ್ದಲ್ಲಿ ತೇಲು ಯೋಗದಲ್ಲಿ ದೇಹದ ಎಲ್ಲಾ ಭಾಗಕ್ಕೂ ಹೆಚ್ಚಿನ ರಕ್ತ ಪರಿಚಲನೆಯಾಗುತ್ತದೆ. ಜೀರ್ಣ ಪ್ರಕ್ರಿಯೆಗೂ ಹೆಚ್ಚಿನ ಸಹಾಯವಾಗುತ್ತದೆ. ದೇಹದ ಸಮತೋಲನ ಹೆಚ್ಚಾಗಿ ನೆನಪು ಶಕ್ತಿ ಕೂಡ ವೃದ್ಧಿಸುತ್ತದೆ. ಮಾನಸಿಕವಾಗಿ ಹೆಚ್ಚಿನ ಆತ್ಮಸ್ಥೆರ್ಯ, ಸ್ನಾಯುಗಳ ಶಕ್ತಿ ವೃದ್ಧಿಯಾಗುವುದು ಎನ್ನುತ್ತಾರೆ ಪರಿಣತರು.

ಒಟ್ಟಿನಲ್ಲಿ ತೇಲು ಯೋಗ, ಸಾಂಪ್ರದಾಯಿಕ ಆಸನಗಳ ಜೊತೆಗೆ ನೃತ್ಯ, ಗಾಳಿಯಲ್ಲಿನ ಕಸರತ್ತು ಮತ್ತು ದೈಹಿಕ ಪರಿಶ್ರಮದಿಂದಾಗಿ ಹೆಚ್ಚು ಕೊಬ್ಬು ಕರಗಿಸುವ ಸಾಧ್ಯತೆ ಇದೆ. ಅದೇ ರೀತಿ ಗಾಳಿಯಲ್ಲಿ ಮಾಡುವ ಕಸರತ್ತಿನಿಂದಾಗಿ ಕುತ್ತಿಗೆ ಮತ್ತು ತಲೆಗೆ ಹೆಚ್ಚಿನ ಒತ್ತಡ ಇರದು. ಆದರೆ ಸಾಂಪ್ರದಾಯಿಕ ಯೋಗವನ್ನು ನೆಲದ ಮೇಲೆ ಮಾಡಬೇಕಿದ್ದು, ಕುತ್ತಿಗೆ ಮತ್ತು ತಲೆಗೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆ ಹೆಚ್ಚು. ಅದೇ ರೀತಿ ಬೆನ್ನು ನೋವು ಇರುವವರು ಹೆಚ್ಚಿನ ಆಸನಗಳನ್ನು ಮಾಡಲಾಗದು. ಸಾಂಪ್ರದಾಯಿಕ ಯೋಗದಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಎಲ್ಲೆಂದರಲ್ಲಿ ಮಾಡಬಹುದು. ಆದರೆ ಜೋಕಾಲಿ ಯೋಗ ಸಾಧ್ಯವಿಲ್ಲ. ಸೂಕ್ತ ತರಬೇತಿ ಅವಶ್ಯ.

ಏನಿದು ? 
ನಿರಂತರವಾಗಿ ಸಾಂಪ್ರದಾಯಿಕ ಹಠ ಯೋಗ ಅಥವಾ ಪಂತಂಜಲಿ ಯೋಗ ಅಭ್ಯಾಸ ಮಾಡಿದ ಜನರು ಬದಲಾವಣೆ ಬಯಸುತ್ತಿದ್ದರು.

ಸದಾ ಹೊಸತನಕ್ಕಾಗಿ ಹಪಹಪಿಸುವ ಅಮೆರಿಕದ ಯುವ ಜನತೆ ನ್ಯೂಯಾರ್ಕ್‌ ನಗರದಲ್ಲಿ 1991ರಲ್ಲಿ ಹೊಸ ಪ್ರಯೋಗಕ್ಕೆ ಮುಂದಾದರು. ಸುಸಜ್ಜಿತವಾದ ಹವಾನಿಯಂತ್ರಕ ಕೊಠಡಿಯಲ್ಲಿ ಚಾವಡಿಗೆ ನೇತು ಹಾಕಿದ ತೆಳುವಾದ ರೇಷ್ಮೆಯ ಹಗ್ಗದಲ್ಲಿ ನೇತಾಡುತ್ತಾ ಬಗೆಬಗೆಯ ದೈಹಿಕ ಕಸರತ್ತು ಮಾಡುತ್ತಾ, ದೇಹವನ್ನು ಗಾಳಿಯಲ್ಲಿ ತೇಲಿ ಬಿಡುತ್ತಾ, ದೇಹದ ಮೇಲೆ ನಿಯಂತ್ರಣ ಸಾಧಿಸಿ ಗಾಳಿಯಲ್ಲೇ ಬಗೆಬಗೆಯ  ಆಸನಗಳನ್ನು ಮಾಡಲು ಪ್ರಯತ್ನಿಸಿದರು. ಸುಮಾರು 300ಕಿಲೋ ಗ್ರಾಂವರೆಗೆ ಭಾರವನ್ನು ತಡೆದುಕೊಳ್ಳುವ ಈ ರೇಷ್ಮೆಯ ಬಟ್ಟೆಯನ್ನು ಉಯ್ನಾಲೆಯ ರೀತಿಯಲ್ಲಿ ನೇತು ಹಾಕಿ, ಅದರ ಸಹಾಯದಿಂದ ದೇಹದ ಮೇಲೆ ನಿಯಂತ್ರಣ ಸಾಧಿಸಿ ದೈಹಿಕ ಕಸರತ್ತಿನ ಜೊತೆ ಯೋಗವನ್ನು ವಿಲೀನ ಗೊಳಿಸಲಾಯಿತು. ಒಂದೇ ರೀತಿಯ ದೈಹಿಕ ವ್ಯಾಯಾಮದಿಂದ ಬೇಸತ್ತಿದ್ದ ಜನರು, ಹೆಚ್ಚು ಶ್ರಮದಿಂದ ಕೂಡಿದ ಮತ್ತು ಹೆಚ್ಚು ಕೊಬ್ಬು ಕರಗಿಸುವ ಈ “ತೇಲಾಡುವ ಯೋಗ’ಕ್ಕೆ ಆಕರ್ಷಿತರಾದರು. 

Advertisement

ಅಮೆರಿಕಾದಲ್ಲಿ  ಜನಪ್ರಿಯವಾದ ಈ ತೇಲಾಡುವ ಯೋಗ  ಕ್ರಮೇಣ ಜರ್ಮನಿ, ಹಾಂಕಾಂಗ್‌, ಇಟೆಲಿ, ಆಸ್ಟೇಲಿಯಾಗೆ ಪಸರಿಸಿತ್ತು.

ಎರಡು ವರ್ಷಗಳ ಹಿಂದೆ ಭಾರತಕ್ಕೂ ಈ ಯೋಗ ಬಂದಿಳಿಯಿತು. ದೆಹಲಿ, ಮುಂಬಯಿ, ಚೆನ್ನೈ, ಬರೋಡಾ, ಕೋಲ್ಕತ್ತಾ, ಬೆಂಗಳೂರಿನಲ್ಲೂ ಯುವಜನರನ್ನು ತನ್ನತ್ತ ಸೆಳೆಯುತ್ತಿದೆ. ಸಿನೆಮಾ ನಟರು, ಕ್ರೀಡಾಪಟುಗಳು ಮತ್ತು ಸೆಲೆಬ್ರೆಟಿಗಳನ್ನು ತನ್ನೆಡೆಗೆ ಸೆಳೆದ ಈ ಯೋಗ ಸದ್ಯಕ್ಕೆ ಸುದ್ದಿಯಲ್ಲಿದೆ.

ಜಮಾಖಾನ ಹಾಸಿ, ಶುದ್ಧ ಗಾಳಿ ಬೆಳಕಿನಿಂದ ಕೂಡಿದ ಸಾಂಪ್ರದಾಯಿಕ ಯೋಗಕ್ಕಿಂತ, ಹವಾನಿಯಂತ್ರಿತ ಕೊಠಡಿಯೊಳಗೆ ತಂಪಗಿನ ಮೆದುವಾದ ರತ್ನಗಂಬಳಿಯ ಮೇಲೆ, ಕಿವಿಗೆ ಇಂಪಾದ ಸಂಗೀತದ ಜೊತೆಗೆ, ತೆಳುವಾದ ರೇಷ್ಮೆಯ ಉಯ್ನಾಲೆಯಲ್ಲಿ ನೇತಾಡುತ್ತಾ, ಕಸರತ್ತು ಮಾಡುತ್ತಾ, ಗಾಳಿಯಲ್ಲಿ  ತೇಲಾಡುವ ಯೋಗವೇ ಯುವ ತಲೆಮಾರಿಗೆ ಹಿತವೆನಿಸುತ್ತಿದೆ.

-  ಡಾ| ಮುರಲೀ ಮೋಹನ್‌ ಚೂಂತಾರು, ಹೊಸಂಗಡಿ

Advertisement

Udayavani is now on Telegram. Click here to join our channel and stay updated with the latest news.

Next