ಶಿರ್ವ: ಸುನ್ನಿ ಜಂ- ಇಯ್ಯತುಲ್ ಮುಅಲ್ಲಿಮೀನ್ ಕಾಪು ವತಿಯಿಂದ ಕಾಪು ವಲಯದ 12 ಮದ್ರಸಾದ ವಿದ್ಯಾರ್ಥಿಗಳಿಂದ ಸ್ವಸ್ಥ ಸಮಾಜವನ್ನು ವಿನಾಶಕ್ಕೆ ತಳ್ಳುತ್ತಿರುವ ಮಾದಕ ದ್ರವ್ಯ ವ್ಯಸನ ವಿರೋಧಿ ಜನಜಾಗೃತಿ ಅಭಿಯಾನ ಜಾಥಾವು ಶಿರ್ವ ಸುನ್ನಿ ಜಾಮೀಯಾ ಮಸೀದಿಯಿಂದ ಶಿರ್ವ ಪೇಟೆಯವರೆಗೆ ಶನಿವಾರ ನಡೆಯಿತು.
ಜಾಗೃತಿ ಜಾಥಾವನ್ನು ಪೊಲಿಪು ಜಾಮಿಯಾ ಮಸೀದಿಯ ಖತೀಬರಾದ ಇರ್ಷಾದ್ ಸಅದಿ ಪೊಲಿಪು ಉದ್ಘಾಟಿಸಿ ಸಂದೇಶ ನೀಡಿದರು.
ಬಳಿಕ ಶಿರ್ವ ಪೇಟೆಯ ಮಹಿಳಾ ಸೌಧದ ಬಳಿ ಜರಗಿದ ಕಾರ್ಯಕ್ರಮದಲ್ಲಿ ದೇರಳಕಟ್ಟೆ ಅಂಜುಮಾನ್ ಕಾಲೇಜಿನ ಉಪನ್ಯಾಸಕ ರಕೀಬ್ ಕನ್ನಂಗಾರ್ ಮಾತನಾಡಿ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿಗರೆಗಿನ ಕೆಲವು ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ಪದಾರ್ಥಗಳ ಮಾರಾಟ ಸರಾಗವಾಗಿ ನಡೆಯುತ್ತಿದ್ದು,ಸಮಾಜದ ಸ್ವಾಸ್ಥ್ಯ ಕಾಪಾಡುವ ವಿದ್ಯಾರ್ಥಿ ಸಮೂಹ ತಮ್ಮ ಬುದ್ಧಿಮತ್ತೆ ಮತ್ತು ಆರೋಗ್ಯವನ್ನು ಕಳೆದುಕೊಳ್ಳುವ ಆಪಾಯಕಾರಿ ಪರಿಸ್ಥಿತಿ ಎದುರಿಸುತ್ತಿದೆ ಎಂದರು.
ವಿದ್ಯಾರ್ಥಿ ಹಾಗೂ ಯುವ ಪೀಳಿಗೆಗೆ ಸಚ್ಚಾರಿತ್ಯದ ಬೋಧನೆಯ ಅಗತ್ಯತೆ ಕಂಡು ಬರುತ್ತಿದ್ದು, ಜಾತಿ ಮತ ಭೇದವಿಲ್ಲದೆ ಜನಜಾಗೃತಿ ಆಂದೋಲನಗಳನ್ನು ನಡೆಸಿದಾಗ ಮಾತ್ರ ಮಾದಕ ವ್ಯಸನವನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.
ಸುನ್ನಿ ಜಂ-ಇಯ್ಯತುಲ್ ಮುಲ್ಲಿಅಮೀನ್ ಕಾಪು ವಲಯದ ಅಧ್ಯಕ್ಷ ಅಬ್ದುಲ್ ರಜಾಕ್ ಖಾಸಿಂ, ಕಾಪು ವಲಯದ 12 ಮದ್ರಸಾಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮದ್ರಸಾ ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ವಿರೋಧಿ ಗೀತೆಗಳ ಪಠಣ ನಡೆಯಿತು.
ಶಿರ್ವ ಸುನ್ನಿ ಜಾಮೀಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್ ಝೈನಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಅಬ್ದುಲ್ ರಶೀದ್ ಸಕಾಫಿ ಮಜೂರು ವಂದಿಸಿದರು.