Advertisement

ಮಾದಕ ವಸ್ತು ಬಳಕೆ ತಡೆಯಲು ಕಠಿನ ಕಾನೂನು ಅಗತ್ಯ: ಮುಜಾಹಿದುಲ್ಲಾ 

11:19 AM Jun 30, 2018 | |

ಮಹಾನಗರ: ದೇಶದಲ್ಲಿ ಮಾದಕ ವಸ್ತುಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಇದನ್ನು ತಡೆಯುವ ನಿಟ್ಟಿನಲ್ಲಿ ಕಠಿನ ಕಾನೂನಿನ ಅಗತ್ಯವಿದೆ ಎಂದು ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಹಮದ್‌ ಮುಜಾಹಿದುಲ್ಲಾ ಹೇಳಿದರು.

Advertisement

ದ.ಕ. ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ವಿಭಾಗ), ನಗರ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ, ವಿಶ್ವ ವಿದ್ಯಾನಿಲಯ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು ವಕೀಲರ ಸಂಘ ಮತ್ತು ಸರಕಾರಿ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ ಮಂಗಳೂರು ಇವುಗಳು ಸಹಯೋಗದೊಂದಿಗೆ ನಗರದ ಹಂಪನಕಟ್ಟೆಯಲ್ಲಿರುವ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ಹಾಗೂ ಅಕ್ರಮ ಕಳ್ಳಸಾಗಾಣಿಕೆ ತಡೆಗಟ್ಟುವ ದಿನಾಚರಣೆ-2018 ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವು ವರ್ಷಗಳ ಹಿಂದೆ ನಡೆಸಿದ ಸರ್ವೇ ಪ್ರಕಾರ ಪ್ರಪಂಚದಲ್ಲಿ 200 ಮಿಲಿಯನ್‌ ಮಂದಿ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದಾರೆ. ಪ್ರತೀ ವರ್ಷವೂ ಈ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ 20ರಿಂದ 30 ವರ್ಷಗಳೊಳಗಿ ಸುಮಾರು 7 ಲಕ್ಷ ಮಂದಿ ದುಷ್ಚಟಕ್ಕೆ ದಾಸರಾಗುತ್ತಿದ್ದಾರೆ ಎಂದರು.

ಹೆತ್ತವರು ಮಕ್ಕಳಿಗೆ ತಿಳಿ ಹೇಳಿ
ದಿಲ್ಲಿ, ಮುಂಬಯಿ ಸಹಿತ ಹೈಟೆಕ್‌ ನಗರದಲ್ಲಿ ಸುಮಾರು 1 ಲಕ್ಷ ಮಂದಿ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದು, ಮಾದಕ ವಸ್ತುಗಳನ್ನು ತಡೆಯುವ ನಿಟ್ಟಿನಲ್ಲಿ ಮನೆಯಿಂದಲೇ ಹೆತ್ತವರು ಮಕ್ಕಳಿಗೆ ತಿಳಿ ಹೇಳಬೇಕು. ಶಾಲಾ-ಕಾಲೇಜಿನ ಪರಿಸರದಲ್ಲಿ ಮಾದಕ ವಸ್ತು ಬಳಕೆ ಮಾಡುವುದನ್ನು ತಿಳಿದರೆ ಕೂಡಲೇ ಪ್ರಾಂಶುಪಾಲರಿಗೆ ವಿಷಯ ತಿಳಿಸಿ ಎಂದರು.

ಜೀವನ ಪರ್ಯಂತ ನರಳಬೇಕಾದೀತು
ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮಾತನಾಡಿ, ಮಾದಕ ವ್ಯಸನ ಅನಾದಿ ಕಾಲದಿಂದಲೂ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಳಕೆ ವಿಪರೀತವಾಗಿದೆ. ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ಬಳಕೆ ಮಾಡಿ, ಬಳಿಕ ಜೀವನ ಪರ್ಯಂತ ನರಳಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳಿದರು.

Advertisement

ಜಿಲ್ಲಾ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್‌ ನ್ಯಾಯಾಧೀಶ ಮಲ್ಲನ ಗೌಡ, ಸರಕಾರಿ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ| ರಾಜೇಶ್ವರಿದೇವಿ, ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಡಾ| ಉದಯಕುಮಾರ್‌, ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಮನೋರೋಗ ವಿಭಾಗದ ಮಾನಸಿಕ ರೋಗ ತಜ್ಞೆ ಡಾ| ಅರುಣಾ ಯಡಿಯಾಳ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್‌ ಷಾ, ಸಹಾಯಕ ಪ್ರಾಧ್ಯಾಪಕ ರೇಣುಕಾ ಪ್ರಸಾದ್‌, ಎನ್ನೆಸ್ಸೆಸ್‌ ಯೋಜನಾಧಿಕಾರಿ ಭಾರತೀ ಕುಲಾಲ್‌ ಉಪಸ್ಥಿತರಿದ್ದರು.

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ
ಮಾದಕ ವಸ್ತುಗಳನ್ನು ವಾಹನದಲ್ಲಿ ಸಾಗಾಟ ಮಾಡುವ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತೀ ಚೆಕ್‌ ಪೋಸ್ಟ್‌ಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸಬೇಕು. ಒಂದು ವೇಳೆ ಮಾದಕ ವಸ್ತು ಇರುವುದು ಪತ್ತೆಯಾದರೆ ಆರೋಪಿಗೆ ಕಾನೂನಿನ ಪ್ರಕಾರ ಕಠಿನ ಶಿಕ್ಷೆ ವಿಧಿಸಬೇಕು ಎಂದು ಮಹಮದ್‌ ಮುಜಾಹಿದುಲ್ಲಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next