ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಬಾಧೆ ಹೆಚ್ಚುತ್ತಿದ್ದು, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಬಾಕಿ ಉಳಿದಿರುವ ಒಂದು ಸೆಮಿಸ್ಟರ್ ಪರೀಕ್ಷೆ ಬರೆದು ನೌಕರಿಗೆ ಸೇರಿಕೊಳ್ಳುವ ಇರಾದೆ ಹೊಂದಿದ್ದ ವಿದ್ಯಾರ್ಥಿಗಳಿಗೆ ಕೋವಿಡ್ ಅಡ್ಡಿಯಾಗಿದೆ. ಆದರೆ ಕೋವಿಡ್ ಸೋಂಕು ಬಾಧೆ ಇದ್ದರೂ, ಮುನ್ನೆಚ್ಚರಿಕಾ ಕ್ರಮದಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಯುಜಿಸಿ ಉಪ ಕುಲಪತಿ ಪ್ರೋ. ಭೂಷಣ್ ಪಟವರ್ಧನ್ ಹೇಳಿದ್ದಾರೆ.
ಯಾವುದೇ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳಿಗೆ ಪದವಿ ನೀಡುವಂತಹ ಬೆಳವಣಿಗೆಯನ್ನು ಬೆಂಬಲಿಸಲಾಗದು. ಯುಜಿಸಿ ಇದರ ಬಗ್ಗೆ ಚಿಂತನೆ ನಡೆಸಿದ್ದು, ಹೀಗಾಗಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ ಎಂದು ಇಂಡಿಯಾ ಟುಡೇ ವಾಹಿನಿ ಜೊತೆಗಿನ ಸಂದರ್ಶನದಲ್ಲಿ ಪಟವರ್ಧನ್ ಹೇಳಿದರು.
ಯುಜಿಸಿಯು ಪರೀಕ್ಷೆಯ ಕುರಿತು ಇತ್ತೀಚೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಹೇಗೆ ನಡೆಸಬೇಕು ಎನ್ನುವ ವಿಚಾರ ಯುನಿವರ್ಸಿಟಿಗಳಿಗೆ ಬಿಟ್ಟಿದ್ದು, ಆ ವಿಚಾರದಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತದೆ ಎಂದರು.
ಶೈಕ್ಷಣಿಕ ಜೀವನದಲ್ಲಿ ನಾವು ಶಿಕ್ಷಣ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು. ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಹಾಗಾಗಿ ತಕ್ಷಣದ ಭಾವನೆಗಳ ಆಧಾರದ ಮೇಲೆ ಯಾವುದೇ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾಲಯಗಳಿಗೆ ಬೇಕಾದಷ್ಟು ಸಮಯ ನೀಡಲಾಗಿದೆ. ಸರಿಯಾದ ರೀತಿಯ ಯೋಜನೆ ರೂಪಿಸಿ, ಮುನ್ನೆಚ್ಚರಿಕಾ ಕ್ರಮದಿಂದ ಪರೀಕ್ಷೆಗಳನ್ನು ನಡೆಸಬೇಕು ಎಂದರು.
ಓರ್ವ ವೈದ್ಯಕೀಯ ವಿದ್ಯಾರ್ಥಿ ಪರೀಕ್ಷೆ ಬರೆಯದೆ ವೈದ್ಯ ಪದವಿ ಪಡೆದರೆ ಏನಾಗಬಹುದು ಯೋಚಿಸಿ. ಇಂತಹ ಘಟನೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಈಗ ನಾವು ಪರೀಕ್ಷೆ ನಡೆಸದೆ ಪಾಸು ಮಾಡಿದರೆ ಅದು ಮುಂದಿನ ಪೀಳಿಗೆಗೆ ತಪ್ಪು ಸಂದೇಶ ನೀಡುತ್ತದೆ ಎಂದು ಭೂಷಣ್ ಪಟವರ್ಧನ್ ಹೇಳಿದರು.