ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಮುಂಗಾರು ಮಳೆ ಮಂಗಳವಾರ ಪ್ರವೇಶ ಮಾಡಿದೆ. ಇದರಿಂದಾಗಿ ತಾಪಮಾನದಿಂದ ತಲ್ಲಣಗೊಂಡಿದ್ದ ಸಾರ್ವಜನಿಕರಿಗೆ ನೆಮ್ಮದಿ ಸಿಕ್ಕಿದೆ. ಎರಡು ವಾರಗಳಷ್ಟು ವಿಳಂಬವಾಗಿ ಮುಂಗಾರು ಪ್ರವೇಶ ಮಾಡಿರುವುದು 19 ವರ್ಷಗಳಲ್ಲಿಯೇ ಮೊದಲು. ಧಾರಾಕಾರ ಮಳೆಯಿಂದಾಗಿ ಹೊಸದಿಲ್ಲಿಯ ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬೆಳಗ್ಗೆ 8.30ರಿಂದ ಇಳಿಹಗಲು 5.30ರ ನಡುವೆ 28.1 ಮಿಲಿಮೀಟರ್ ಮಳೆಯಾಗಿತ್ತು. ಧವುಲಾ ಖಾನ್, ರೋಹ್‌ತಕ್ ರೋಡ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ.
ಇದೇ ವೇಳೆ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಧಾರಾಕಾರ ಮಳೆಯಾಗಿದೆ. ಗುರು ಗ್ರಾಮದಲ್ಲಿ ಧಾರಾಕಾರ ಸುರಿದ ಮಳೆಯಿಂದ ರಸ್ತೆಗಳಿಗೆ ನೀರು ನುಗ್ಗಿದೆ. ಇದೇ ವೇಳೆ, ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ದೇಶದ ಹೆಚ್ಚಿನ ಭಾಗಗಳಿಗೆ ಮುಂಗಾರು ಮಳೆ ವ್ಯಾಪಿಸಿದೆ.
ಒಬ್ಬ ಸಾವು: ಹಿಮಾಚಲ ಪ್ರದೇಶದಲ್ಲಿ ಉಂಟಾಗಿರುವ ಧಾರಾಕಾರ ಮಳೆಯಿಂದಾಗಿ ಕಾಂಗ್ರಾ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಒಬ್ಬ ಅಸುನೀಗಿದ್ದಾನೆ. ಒಂಬತ್ತು ಮಂದಿ ಮಣ್ಣಿನ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಿಬಂದಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಮವಾರ ಧರ್ಮಶಾಲೆಯಲ್ಲಿ ಮೇಘ ಸ್ಫೋಟ ಉಂಟಾಗಿ ಪ್ರವಾಹ ಉಂಟಾಗಿದ್ದರಿಂದ ಹಲವಾರು ಕಾರುಗಳು ಮತ್ತು ಇತರ ವಾಹನಗಳು ಕೊಚ್ಚಿಕೊಂಡು ಹೋಗಿದ್ದವು.