ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸುತ್ತಿರುವ ಸಿಡಿ ಪ್ರಕರಣಕ್ಕೆ ಇಂದು (ಶನಿವಾರ) ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಹಾಗೂ ಸಿಡಿಯಲ್ಲಿ ಇದ್ದಾಳೆ ಎನ್ನಲಾಗುತ್ತಿರುವ ಯುವತಿಯ ಪೋಷಕರು ವಾಗ್ದಾಳಿ ನಡೆಸಿದ ಬೆನ್ನಲ್ಲೆ ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ. ಇದು ಯುವತಿಯಿಂದ ಬಿಡುಗಡೆಯಾಗುತ್ತಿರುವ ಐದನೇ ವಿಡಿಯೋ .
ವಿಡಿಯೋದಲ್ಲಿ ಯುವತಿ ಹೇಳಿದ್ದೇನು ?
‘ಇಂದಿನ ಬೆಳವಣಿಗೆಯಿಂದ ಭಯ ಆಗ್ತಿದೆ. ನಮ್ಮ ಅಪ್ಪ-ಅಮ್ಮನಿಗೆ ಏನು ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾಳೆ. ಪ್ರಕರಣವನ್ನು ಬೇರೆ ಕಡೆ ತಿರುಗಿಸುತ್ತಿದ್ದಾರೆ. ನಮ್ಮವರನ್ನು ಬ್ಲಾಕ್ಮೇಲ್ ಮಾಡಲಾಗಿದೆ ಎಂದು ಪೋಷಕರ ಹೇಳಿಕೆಯ ಬೆನ್ನಲ್ಲೇ ಯುವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ಮಗಳನ್ನು ಡಿ.ಕೆ. ಶಿವಕುಮಾರ್ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಪೋಷಕರ ಹೇಳಿಕೆಯ ಬೆನ್ನಲ್ಲೇ ಯುವತಿ ವಿಡಿಯೋ ಹರಿಬಿಟ್ಟಿದ್ದಾಳೆ. ತಂದೆ, ತಾಯಿಯ ಮೇಲೆ ಪ್ರಭಾವ ಬೀರಿ ಹೇಳಿಕೆ ಪಡೆಯಲಾಗಿದೆ. ನಿಜವಾಗಿಯೂ ಅನ್ಯಾಯವಾಗಿರುವುದು ನನಗೆ.
ಇವತ್ತಿನ ಬೆಳವಣಿಗೆ ನೋಡಿದರೆ ನನಗೆ ಭಯ ಆಗುತ್ತಿದೆ. ನಾನು ಹೇಳಿಕೆ ನೀಡಲು ಭಯ ಆಗುತ್ತಿದೆ. ಅನ್ಯಾಯವಾಗಿರುವುದು ನನಗೆ. ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಲಾಗಿದೆ. ನನಗೆ ನ್ಯಾಯ ಸಿಗಬೇಕು. ನನ್ನ ಅಪ್ಪ, ಅಮ್ಮನಿಗೆ ಇದರ ಬಗ್ಗೆ ಏನು ಗೊತ್ತಿಲ್ಲ. ಅವರನ್ನು ಕರೆಸಿ ವಿಚಾರಣೆ ಮಾಡುವಂತಹುದು ಏನಿತ್ತು? ಎಂದು ಯುವತಿ ಪ್ರಶ್ನಿಸಿದ್ದಾಳೆ.
ಇದುವರೆಗೆ ಎಸ್‍ಐಟಿ ಎದುರು ಹಾಜರಾಗುವುದಾಗಿ ಹೇಳುತ್ತ ಬಂದಿದ್ದ ಯುವತಿ, ಇದೀಗ ನೇರವಾಗಿ ನ್ಯಾಯಾಧೀಶರ ಎದುರು ಹೇಳಿಕೆ ನೀಡುತ್ತೇನೆ ಎಂದಿದ್ದಾಳೆ. ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವರು, ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಯುವತಿ ಮನವಿ ಮಾಡಿಕೊಂಡಿದ್ದಾಳೆ.