Advertisement

ಬಂಧಿತರು ಮತ್ತೊಂದು ಪರೀಕ್ಷೆ ಅಕ್ರಮದಲ್ಲೂ ಭಾಗಿ

12:53 AM May 03, 2022 | Team Udayavani |

ಬೆಂಗಳೂರು:  ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧಿಸಿ ಬಂಧಿತರಾಗಿರುವ ಆರ್‌.ಡಿ. ಪಾಟೀಲ್‌ ಹಾಗೂ ಮಂಜುನಾಥ್‌ ಮೇಳಕುಂದಿ ಅವರು ಈ ಹಿಂದೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಹುದ್ದೆ ಪರೀಕ್ಷೆ ಅಕ್ರಮದಲ್ಲೂ ಆರೋಪಿಗಳಾಗಿದ್ದರು.

Advertisement

ಭೂಸನೂರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಮರ್ಜಾ ಯೋಜನೆ ಅಣೆಕಟ್ಟು ಉಪವಿಭಾಗ ಕೋರಳ್ಳಿ ಕ್ಯಾಂಪ್‌ ಸಹಾಯಕ ಎಂಜಿನಿಯರ್‌ ಆಗಿರುವ ಮಂಜುನಾಥ ಮೇಳಕುಂದಿ ಹಾಗೂ ಮತ್ತೋರ್ವ ಆರೋಪಿ ರುದ್ರಗೌಡ ಪಾಟೀಲ್‌ (ಆರ್‌.ಡಿ.ಪಾಟೀಲ್‌) ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಪರೀಕ್ಷೆ ಅಕ್ರಮದಲ್ಲೂ ಭಾಗಿಯಾದ ಆರೋಪ ಎದುರಿಸುತ್ತಿದ್ದು,  ಮಂಜುನಾಥ್‌ 4ನೇ ಹಾಗೂ ಆರ್‌.ಡಿ.ಪಾಟೀಲ್‌ 6ನೇ ಆರೋಪಿಯಾಗಿದ್ದರು.

ಕರ್ನಾಟಕ ಲೋಕಸೇವಾ ಆಯೋಗ ಮತ್ತು ಪಿಯುಸಿ ಹಾಗೂ ಯಾವುದೇ ಪರೀಕ್ಷೆಗಳು ನಡೆದರೂ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದ ಶಿವಕುಮಾರಯ್ಯ ಅಲಿಯಾಸ್‌ ತಾತ ಮೃತಪಟ್ಟ ಬಳಿಕ ಮಂಜುನಾಥ್‌ ಮೇಳಕುಂದಿ ಮತ್ತು ಆರ್‌.ಡಿ.ಪಾಟೀಲ್‌ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದರು. ಪಿಎಸ್‌ಐ, ಎಂಜಿನಿಯರ್‌ ಮಾತ್ರವಲ್ಲ, ಸರಕಾರದ ಯಾವುದೇ ಪರೀಕ್ಷೆ ನಡೆದರೂ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಸಾಮರ್ಥ್ಯವನ್ನು  ಹೊಂದಿದ್ದರು. ಪ್ರಶ್ನೆ ಪತ್ರಿಕೆಗಳು ಮುದ್ರಣವಾಗುವ ಕೇಂದ್ರದ ಸಿಬಂದಿ ಜತೆಯೇ ನೇರ ಸಂಪರ್ಕ ಇಟ್ಟುಕೊಂಡು ಸೋರಿಕೆ ಮಾಡುತ್ತಿದ್ದರು ಎಂಬ ಮಾಹಿತಿ  ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.

ಮಂಜುನಾಥ್‌ ಮೇಳಕುಂದಿ 2021ರ ಡಿಸೆಂಬರ್‌ನಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಪರೀಕ್ಷೆಯಲ್ಲಿ ಆಯ್ದ ಅಭ್ಯರ್ಥಿಗಳಿಗೆ ಬ್ಲೂಟೂತ್‌ ವಿತರಿಸಿ ಪರೀಕ್ಷೆ ಬರೆಯಲು ಪರೀûಾ ಕೊಠಡಿ  ವೀಕ್ಷಕರನ್ನೇ ನೇಮಿಸಿದ್ದ. ವೀರಣ್ಣ ಗೌಡ ದೇವಿಂದ್ರಪ್ಪ ಚಿಕ್ಕಗೌಡ ಎಂಬಾತ ಬ್ಲೂಟೂತ್‌ ಮೂಲಕ ಪರೀಕ್ಷೆ ಬರೆಯುವ ವೇಳೆ ಸಿಕ್ಕಿ ಬಿದ್ದಿದ್ದರು.

ಈ ಸಂಬಂಧ ಸೇಂಜ್‌ ಜಾನ್ಸ್‌ ಶಾಲೆಯ ಪ್ರಾಂಶುಪಾಲರು ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮಂಜುನಾಥ್‌ ಮೇಳಕುಂದಿ ಮತ್ತು ಆರ್‌.ಡಿ.ಪಾಟೀಲ್‌ ಸಹಿತ 8  ಮಂದಿಯನ್ನು ಬಂಧಿಸಿದ್ದರು. ಈ ವೇಳೆ ಪ್ರತಿ ಅಭ್ಯರ್ಥಿಯಿಂದ ಇಬ್ಬರು ಆರೋಪಿಗಳು 8-10 ಲಕ್ಷ ರೂ. ವಸೂಲಿ ಮಾಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

Advertisement

60-70 ಲಕ್ಷ ರೂ.ಗೆ ಡೀಲ್‌
ಪಿಎಸ್‌ಐ ಪರೀಕ್ಷೆಯ ಅಭ್ಯರ್ಥಿಗಳಿಂದ ಆರ್‌.ಡಿ.ಪಾಟೀಲ್‌ ಮತ್ತು ಮಂಜುನಾಥ್‌ ಮೇಳಕುಂದಿ 60-70 ಲಕ್ಷ ರೂ.ಗೆ ಡೀಲ್‌ ಮಾಡಿದ್ದರು. ಪ್ರಶ್ನೆ ಪತ್ರಿಕೆ ಮುದ್ರಣ ಕೇಂದ್ರದ ಸಿಬಂದಿ ಜತೆಯೇ ಸಂಪರ್ಕ ಹೊಂದಿರುವ ಆರೋಪಿಗಳು, ಪರೀಕ್ಷೆಗೆ 3-4 ದಿನಗಳ ಮೊದಲೇ ಪ್ರಶ್ನೆಪತ್ರಿಕೆ ಪಡೆಯುತ್ತಿದ್ದರು. ಅದನ್ನು ಅಭ್ಯರ್ಥಿಗಳಿಗೆ ಮಾರುತ್ತಿದ್ದರು.

ಪ್ರಕರಣದ ಕಿಂಗ್‌ಪಿನ್‌ಗಳು ದಿವ್ಯಾ ಹಾಗರಗಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅಕ್ರಮ ನಡೆಸಲು ಕನಿಷ್ಠ 2 ಕೋಟಿ ರೂ. ಕೊಟ್ಟಿದ್ದಾರೆಂದು ಹೇಳಲಾಗಿದೆ. ದಿವ್ಯಾ ಹಾಗರಗಿ ಶಿಕ್ಷಣ ಸಂಸ್ಥೆಯಲ್ಲಿ ಬರೆದಿದ್ದ ಅಭ್ಯರ್ಥಿಗಳ ಪೈಕಿ 35 ಮಂದಿ ಆರ್‌.ಡಿ.ಪಾಟೀಲ್‌ ಕಡೆಯವರು, 10 ಮಂದಿ ಮಂಜುನಾಥ್‌ ಮೇಳಕುಂದಿ ಕಡೆಯವರು ಎಂಬುದು ಗೊತ್ತಾಗಿದೆ.

12 ಮಂದಿ ಸಿಐಡಿ ವಶಕ್ಕೆ
ಈ ಮಧ್ಯೆ ಒಎಂಆರ್‌ ಶೀಟ್‌ ವಿಚಾರಣೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ 12 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಸೋಮವಾರ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಸಿಐಡಿ ಕಚೇರಿಗೆ ಕರೆದೊಯ್ಯಲಾಗಿದೆ.

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next