ಕೊಲಂಬೊ: ಏಷ್ಯಾ ಕಪ್ ಕೂಟದ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಸೋಲನುಭವಿಸಿದ ಪಾಕಿಸ್ತಾನ ತಂಡವು ಇದೀಗ ಕೂಟದಿಂದಲೇ ಹೊರಬಿದ್ದಿದೆ. ಕಪ್ ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿದ್ದ ಬಾಬರ್ ಅಜಂ ಪಡೆ ಫೈನಲ್ ತಲುಪದೆ ಹೊರಬಿದ್ದು ಆಘಾತ ಎದುರಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಹೊಡೆತ ಬಿದ್ದಿದೆ.
ಸೂಪರ್ ಫೋರ್ ಹಂತದಲ್ಲಿ ಭಾರತದ ವಿರುದ್ಧದ ಪಂದ್ಯದ ವೇಳೆ ಪಾಕ್ ನ ಪ್ರಮುಖ ವೇಗಿಗಳಾದ ಹ್ಯಾರಿಸ್ ರೌಫ್ ಮತ್ತು ನಸೀಂ ಶಾ ಗಾಯಗೊಂಡಿದ್ದರು. ಹೀಗಾಗಿ ಅವರಿಬ್ಬರೂ ಶ್ರೀಲಂಕಾ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಉಭಯ ವೇಗಿಗಳ ಫಿಟ್ನೆಸ್ ಬಗ್ಗೆ ನಾಯಕ ಬಾಬರ್ ಅಜಂ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ನಡೆಯಲಿರುವ ಪಾಕಿಸ್ತಾನದ ಮೊದಲ ಎರಡು ವಿಶ್ವಕಪ್ ಪಂದ್ಯಗಳಲ್ಲಿ ಆಡಲು ವೇಗದ ಬೌಲರ್ ನಸೀಂ ಶಾ ಅಲಭ್ಯರಾಗಲಿದ್ದಾರೆ ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಂ ಸುಳಿವು ನೀಡಿದ್ದಾರೆ. ಮತ್ತೊಂದೆಡೆ, ಹ್ಯಾರಿಸ್ ರೌಫ್ ಅವರು ಚೇತರಿಸಿಕೊಳ್ಳುತ್ತಿದ್ದು, ವಿಶ್ವಕಪ್ ಆರಂಭವಾಗುವ ವೇಳೆ ಫಿಟ್ ಆಗುವ ನಿರೀಕ್ಷೆಯಿದೆ.
ಇದನ್ನೂ ಓದಿ:RAJASTHAN: ಅಧಿಕ ವ್ಯಾಟ್ ಹೊರೆ- ಪೆಟ್ರೋಲ್ ಬಂಕ್ ಅನಿರ್ದಿಷ್ಟಾವಧಿ ಬಂದ್
ಆರು ವಾರಗಳ ವಿಶ್ವಕಪ್ ಪಂದ್ಯಾವಳಿಗಾಗಿ ತಂಡಗಳು ತಮ್ಮ ಸ್ಕ್ವಾಡ್ ಗಳನ್ನು ಐಸಿಸಿಗೆ ಸಲ್ಲಿಸಲು ಸೆಪ್ಟೆಂಬರ್ 28 ರವರೆಗೆ ಕಾಲಾವಕಾಶವಿದೆ. ಆ ದಿನಾಂಕದ ನಂತರ, ಅವರು ಕೂಟ ಸಂಘಟಕರ ಅನುಮತಿಯೊಂದಿಗೆ ಮಾತ್ರ ಆಟಗಾರರ ಬದಲಾವಣೆ ಮಾಡಬಹುದು.
ನಸೀಮ್ ಅವರ ಗಾಯದ ಪ್ರಮಾಣವನ್ನು ಪಿಸಿಬಿ ಇನ್ನೂ ನಿರ್ದಿಷ್ಟಪಡಿಸಿಲ್ಲ. ಅವರು ಪ್ರಸ್ತುತ ದುಬೈನಲ್ಲಿದ್ದು ತಮ್ಮ ಬಲ ಭುಜದ ಕೆಳಗಿನ ಸ್ನಾಯು ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡವು ನೆದರ್ಲಾಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಅ.6ರಂದು ಈ ಪಂದ್ಯ ನಡೆಯಲಿದ್ದು, ಅ.10ರಂದು ಲಂಕಾ ವಿರುದ್ಧ ಎರಡನೇ ಪಂದ್ಯ ಆಡಲಿದೆ. ಭಾರತದ ವಿರುದ್ಧದ ಅತ್ಯಂತ ಪ್ರತಿಷ್ಠಿತ ಪಂದ್ಯವು ಅ.14ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ.