ನವದೆಹಲಿ: ಕೇಂದ್ರ ಮತ್ತು ರೈತ ಮುಖಂಡರ ನಡುವೆ ಶುಕ್ರವಾರ(ಜನವರಿ 08, 2021) ನಡೆದ 8ನೇ ಸುತ್ತಿನ ಮಾತುಕತೆಯೂ ಈ ಹಿಂದಿನ ಮಾತುಕತೆಯಂತೆ ಯಾವುದೇ ಅಂತಿಮ ಪರಿಹಾರ ಕಾಣದೆ ಕೊನೆಗೊಂಡಿದೆ. ಜನವರಿ 15ರಂದು ಮತ್ತೆ ಒಂಬತ್ತನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಕಳೆದ 40 ದಿನಗಳಿಂದ ದೆಹಲಿಯ ಗಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆ ಜತೆ ಕೇಂದ್ರ ಸರ್ಕಾರ ಇಂದು 8ನೇ ಸುತ್ತಿನ ಮಾತುಕತೆ ನಡೆಸಿದೆ.
ಮಾತುಕತೆ ಆರಂಭದಲ್ಲಿ ಕೇಂದ್ರ ಮತ್ತು ರೈತ ಮುಖಂಡರು ತಮ್ಮ ನಿರ್ಧಾರಗಳನ್ನು ಸಡಿಲಿಸದೇ ಇದ್ದ ಪರಿಣಾಮ ಯಾವುದೇ ಹೆಚ್ಚಿನ ಚರ್ಚೆ ನಡೆಯಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ರೈತ ಸಂಘಟನೆಗಳು ತಮ್ಮ ಹಠವನ್ನು ಮುಂದುವರಿಸಿವೆ. ಏತನ್ಮಧ್ಯೆ ಕೇಂದ್ರ ಸರ್ಕಾರ ಕೂಡಾ ಯಾವುದೇ ಕಾರಣಕ್ಕೂ ಕಾಯ್ದೆ ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವುದು ಬಿಕ್ಕಟ್ಟು ಮುಂದುವರಿಯಲು ಕಾರಣವಾಗಿದೆ.
ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಜಾರಿಗೆ ತಂದಿರುವುದು ಇಡೀ ದೇಶದ ರೈತರಿಗಾಗಿ ವಿನಃ ಕೇವಲ ಪಂಜಾಬ್ ಮತ್ತು ಹರ್ಯಾಣ ರೈತರಿಗಲ್ಲ ಎಂದು ಕೇಂದ್ರ ಸಚಿವರು ಮಾತುಕತೆ ವೇಳೆ ಪ್ರತಿಪಾದಿಸಿದ್ದರು. ಆದರೆ ತಮ್ಮ ಹಠವನ್ನು ರೈತ ಸಂಘಟನೆಗಳು ಮುಂದುವರಿಸಿದ ಪರಿಣಾಮ ಜನವರಿ 15ರಂದು ಮತ್ತೆ ಸಭೆ ಸೇರಿ ಚರ್ಚಿಸಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಒಂದು ವೇಳೆ ನೀವು ಕಾಯ್ದೆಯನ್ನು ವಾಪಸ್ ಪಡೆದ ಮೇಲೆಯೇ ನಾವು ನಮ್ಮ ಮನೆಗಳಿಗೆ ತೆರಳುವುದು ಎಂದು ರೈತ ಸಂಘಟನೆ ಮುಖಂಡರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.