Advertisement

Mysuru ಪಾದಯಾತ್ರೆ ಮಧ್ಯೆ ಬಿಜೆಪಿಯಲ್ಲಿ ಮತ್ತೊಂದು ಬಂಡಾಯ!

11:53 PM Aug 01, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ ಜಂಟಿ ಪಾದಯಾತ್ರೆಗೆ ಸಜ್ಜಾಗುತ್ತಿದ್ದರೆ, ಇತ್ತ ಬಿಜೆಪಿ ಅಸಮಾಧಾನಿತರ ಗುಂಪು ಸಭೆ ಸೇರಿ ಪಕ್ಷದ ವಿರುದ್ಧವೇ ಗುಡುಗಿದೆ. ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತುವ ತೀರ್ಮಾನವನ್ನು ಮಾಡಿಕೊಂಡಿದೆ. ಈ ಸಂಬಂಧ ಹೈಕಮಾಂಡ್‌ ಕದ ತಟ್ಟಲು ನಿರ್ಧಾರವನ್ನೂ ಮಾಡಿದೆ.

Advertisement

ಮೈಸೂರು ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲೂ ನಿರ್ಧರಿಸಿದ್ದು, ವಾಲ್ಮೀಕಿ ಹಗರಣದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಅನುಮತಿ ಕೊಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಡಲು ತೀರ್ಮಾನಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಲು ಮತ್ತೊಂದು ವೇದಿಕೆ ಸಜ್ಜುಗೊಳಿಸುತ್ತಿರುವ ಭಿನ್ನಬಣವು, 1 ವಾರದೊಳಗೆ ಅಸಮಾಧಾನಿತರ ಸಭೆ ನಡೆಸಿ ವರಿಷ್ಠರ ಬಳಿಗೆ ದೂರು ಕೊಂಡೊಯ್ಯಲು ನಿರ್ಧರಿಸಿದೆ.

ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರ ಬೆಂಗಳೂರಿನ ನಿವಾಸದಲ್ಲಿ ಸಭೆ ನಡೆಸಿರುವ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ್‌ ಸಿಂಹ, ಸಮಾನಮನಸ್ಕರ ಕೂಟವನ್ನು ರಚಿಸಿಕೊಂಡಿದ್ದಾರೆ.

ವಾರದೊಳಗೆ ಬೃಹತ್‌ ಸಭೆ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್‌, ಕರ್ನಾಟಕ ಬಿಜೆಪಿಯು ಅಪ್ಪ-ಮಕ್ಕಳ ಪಕ್ಷವಾಗುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತವಾಗಿದೆ. ಇದರಿಂದ ಪಕ್ಷವನ್ನು ಮುಕ್ತ ಮಾಡಬೇಕು. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷÒ, ಯಡಿಯೂರಪ್ಪ ಏನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಯೋ ಅದನ್ನು ಹೈಕಮಾಂಡ್‌ಗೆ ತಿಳಿಸಬೇಕು. ವಾರದೊಳಗೆ ಬೃಹತ್‌ ಸಭೆ ಮಾಡು ತ್ತೇವೆ. ಬಿಜೆಪಿಯಲ್ಲಿ ಬಹಳ ದೊಡ್ಡ ಅಸಮಾಧಾನ ಇದೆ. ಎಲ್ಲರೂ ಸೇರಿ ಹೈಕಮಾಂಡ್‌ಗೆ ದೂರು ಒಯ್ಯುತ್ತೇವೆ. ವಿಧಾನಸಭೆಯಲ್ಲಿ ಡಿಕೆಶಿ ಏಜೆಂಟ್‌ ಆಗಿ ಕೆಲಸ ಮಾಡಿ, ಕಡತ ಹಿಡಿದು ನಿಂತ ರಾಜ್ಯಾಧ್ಯಕ್ಷರಿರುವುದು ಪಕ್ಷಕ್ಕೆ ಶೋಭೆಯಲ್ಲ. ಆನುವಂಶಿಕ ಪಕ್ಷ ಆಗಬಾರದು. ಇದನ್ನೇ ವರಿಷ್ಠರಿಗೆ ತಿಳಿಸುತ್ತೇವೆ ಎಂದರು.

Advertisement

ಪಾದಯಾತ್ರೆಯ ಒತ್ತಡಕ್ಕೆ ಎಚ್‌ಡಿಕೆ ಮಣಿಯಬಾರದು
ಬಳ್ಳಾರಿ ಪಾದಯಾತ್ರೆ ಬಗ್ಗೆ ಕೇಂದ್ರದ ಹೈಕಮಾಂಡ್‌ಗೆ ರಮೇಶ್‌ ಜಾರಕಿಹೊಳಿ ಅನುಮತಿ ಕೇಳಿದ್ದಾರೆ. ಅನುಮತಿ ಕೊಟ್ಟರೆ ಮಾಡುತ್ತೇವೆ. ಮೈಸೂರು ಪಾದಯಾತ್ರೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಒತ್ತಡಕ್ಕೆ ಮಣಿಯಬಾರದು. ಅವರ ಕುಟುಂಬದ ವಿರುದ್ಧ ಲಕ್ಷಾಂತರ ಪೆನ್‌ಡ್ರೈವ್‌ ಹಂಚಿದವರಿದ್ದಾರೆ. ಪಕ್ಷದ ಅರ್ಧ ಮಂದಿ ಪ್ರಧಾನ ಕಾರ್ಯದರ್ಶಿಗಳು ವಿಜಯೇಂದ್ರ ಚೇಲಾಗಳೇ ಇದ್ದಾರೆ. ಪೆನ್‌ಡ್ರೈವ್‌, ಸಿ.ಡಿ. ಮಾಡುವವರೇ ಸುತ್ತಲೂ ತುಂಬಿದ್ದಾರೆ. ಇದು ಕುಮಾರಸ್ವಾಮಿ ಕುಟುಂಬದ ಸ್ವಾಭಿಮಾನದ ಪ್ರಶ್ನೆ. ಅವರಿಷ್ಟ. ಮೈಸೂರಿಗೆ ಪಾದಯಾತ್ರೆ ಮಾಡುವ ಮುನ್ನ ಡಿಕೆಶಿ-ವಿಜಯೇಂದ್ರ ನಡುವಿನ ಸಂಬಂಧ ಬಹಿರಂಗ ಆಗಬೇಕು. ಮುಡಾದಲ್ಲಿ ಇವರ ಪಾತ್ರ ಏನೆಂಬುದೂ ಗೊತ್ತಾಗಬೇಕು. ಅದೂ ತನಿಖೆ ಆಗಲಿ ಎಂದು ಯತ್ನಾಳ್‌ ಆಗ್ರಹಿಸಿದ್ದಾರೆ.

ಭಿನ್ನಾಭಿಪ್ರಾಯವಿಲ್ಲ: ನಿಖಿಲ್ ಕುಮಾರಸ್ವಾಮಿ
ಪಾಂಡವಪುರ: ರಾಜ್ಯದ ನೆರೆ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮುಂದೂಡಿ ಎಂದಿದ್ದೇ ವೆಯೇ ಹೊರತು ಬಿಜೆಪಿ-ಜೆಡಿಎಸ್‌ನಡುವೆ ಭಿನ್ನಾಭಿಪ್ರಾಯವಿಲ್ಲ. ಅವರು ಪಾದಯಾತ್ರೆ ನಡೆಸಿದರೆ ಬೆಂಬಲಿಸುತ್ತೇವೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ-ಜೆಡಿಎಸ್‌ ಪಕ್ಷಗಳು ಸದನದೊಳಗೆ-ಹೊರಗೆ ಮುಡಾ, ವಾಲ್ಮೀಕಿ ಹಗರಣ ಸೇರಿ ಭ್ರಷ್ಟ ಕಾಂಗ್ರೆಸ್‌ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿವೆ ಎಂದರು.

ವಾಲ್ಮೀಕಿ ಹಗರಣದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಲು ನಾವಂತೂ ನಿರ್ಧರಿಸಿದ್ದೇವೆ. ಇದಕ್ಕಾಗಿ ಹೈಕಮಾಂಡ್‌ ಅನುಮತಿಯನ್ನೂ ಕೇಳಿದ್ದೇವೆ. ಕೊಟ್ಟ ಅನಂತರ ಮುಂದಿನ ತೀರ್ಮಾನ ಮಾಡುತ್ತೇವೆ.
– ರಮೇಶ್‌ ಜಾರಕಿಹೊಳಿ, ಮಾಜಿ ಸಚಿವ

ನಾವು ಏನೇ ನಿರ್ಧಾರ ತೆಗೆದು ಕೊಂಡರೂ ಕೇಂದ್ರದ ವರಿಷ್ಠರ ಆದೇಶ ಪಾಲಿಸುತ್ತೇವೆ. ನಾವು ಪಕ್ಷದ ಕಟ್ಟಾಳುಗಳು.
– ಕುಮಾರ ಬಂಗಾರಪ್ಪ, ಮಾಜಿ ಸಚಿವ

ಪಾದಯಾತ್ರೆ ಮಾಡಲು ರಾಜಕೀಯವಾಗಿ ಹಕ್ಕಿದೆ. ಜೆಡಿಎಸ್‌ ಬೆಂಬಲ ಕೊಡುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಬಳ್ಳಾರಿಗೆ ಪಾದಯಾತ್ರೆ ಮಾಡುವುದು, ಮೈಸೂರು ಪಾದಯಾತ್ರೆಗೆ ಹೋಗದಿರುವುದು ಯತ್ನಾಳ್‌ ಹಾಗೂ ರಮೇಶ್‌ ಜಾರಕಿಹೊಳಿ ಅವರ ವೈಯಕ್ತಿಕ ತೀರ್ಮಾನ.
– ಸತೀಶ್‌ ಜಾರಕಿಹೊಳಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next