Advertisement

ಕಡಲನಗರಿಯಿಂದ ಸ್ಥಳೀಯ ಪ್ರಯಾಣಕ್ಕೆ ಪರ್ಯಾಯ ಜಾಲ

05:53 AM Feb 22, 2019 | |

ಮಹಾನಗರ: ಮಂಗಳೂರು -ಬೆಂಗಳೂರು ನಡುವೆ  ಮತ್ತೊಂದು  ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆ ಪ್ರಾರಂಭವಾಗಿರುವುದು ಕರಾವಳಿ ಜನರನ್ನು ರಾಜ್ಯ ರಾಜಧಾನಿಯೊಂದಿಗೆ ಮತ್ತಷ್ಟು ಬೆಸೆಯುವುದಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿದೆ. ಜತೆಗೆ, ಈ ರೈಲು ಸ್ಥಳೀಯವಾಗಿಯೂ ಮಂಗಳೂರು ನಗರಕ್ಕೆ ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ಮುಂತಾದ ಕಡೆಗಳಿಂದ ಬಂದು ಹೋಗುವ ಜನರಿಗೂ ಪರ್ಯಾಯ ಸಂಪರ್ಕ ವ್ಯವಸ್ಥೆಯಾಗಿ ಅನುಕೂಲ ಕಲ್ಪಿಸಲಿದೆ ಎನ್ನುವುದು ವಿಶೇಷ.

Advertisement

ವಾರದಲ್ಲಿ ರವಿವಾರ, ಮಂಗಳವಾರ, ಗುರುವಾರ ಬೆಂಗಳೂರಿನಿಂದ ಸಂಜೆ 4.30ಕ್ಕೆ ಹೊರಡುವ ಹೊಸ ರೈಲು ಹಾಸನವಾಗಿ ಸಕಲೇಶಪುರಕ್ಕೆ ರಾತ್ರಿ 9.05ಕ್ಕೆ ತಲುಪಿ, ರಾತ್ರಿ 12.25ಕ್ಕೆ ಸುಬ್ರಹ್ಮಣ್ಯ, 1.13ಕ್ಕೆ ಕಬಕ- ಪುತ್ತೂರು, 1.43ಕ್ಕೆ ಬಂಟ್ವಾಳ, 3.13ಕ್ಕೆ ಮಂಗಳೂರು ಜಂಕ್ಷನ್‌, ಮುಂಜಾನೆ 4ಕ್ಕೆ ಮಂಗಳೂರು ಸೆಂಟ್ರಲ್‌ ತಲುಪುತ್ತದೆ. ಸೋಮವಾರ, ಬುಧವಾರ, ಶುಕ್ರವಾರ ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 7ಕ್ಕೆ ಹೊರಡುವ ಈ ರೈಲು 7.14ಕ್ಕೆ ಮಂಗಳೂರು ಜಂಕ್ಷನ್‌, 7.48ಕ್ಕೆ ಬಂಟ್ವಾಳ, 8.16ಕ್ಕೆ ಕಬಕ ಪುತ್ತೂರು, 9ಕ್ಕೆ ಸುಬ್ರಹ್ಮಣ್ಯ ತಲುಪಿ ಮುಂಜಾನೆ 5ಕ್ಕೆ ಯಶವಂತಪುರ ತಲುಪಲಿದೆ.

ಮಂಗಳೂರಿನಿಂದ ಸೋಮವಾರ, ಬುಧವಾರ, ಶುಕ್ರವಾರ ರಾತ್ರಿ 7ಕ್ಕೆ ಹೊರಡುವ ಈ ರೈಲು ಮಂಗಳೂರಿಗೆ ಸುಬ್ರಹ್ಮಣ್ಯ, ಪುತ್ತೂರು ಭಾಗದಿಂದ ಉದ್ಯೋಗ, ಔಷಧ, ಇತರ ಕಾರ್ಯಗಳಿಗೆ ಬಂದವರ ಸಂಚಾರಕ್ಕೆ ಹೊಸ ಸೌಲಭ್ಯ ದೊರಕಿದಂತಾಗಿದೆ. ಜತೆಗೆ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ತೆರಳುವವರಿಗೆ ಇನ್ನಷ್ಟು ಅವಕಾಶ ಒದಗಿಸಲಿದೆ. ಮಂಗಳೂರಿಗೆ ಉದ್ಯೋಗ, ಶಿಕ್ಷಣ, ಇತರ ಕಾರಣಗಳಿಗಾಗಿ ಬಂದವರು ಸದ್ಯ ಸಂಜೆ 6.10ಕ್ಕೆ ಮಂಗಳೂರಿನಿಂದ ಪ್ಯಾಸೆಂಜರ್‌ ರೈಲು ಮೂಲಕ ಸಂಚರಿಸುತ್ತಾರೆ. ಅದು ತಪ್ಪಿದರೆ ರಾತ್ರಿ 9 ಗಂಟೆಗೆ ಬರುವ ಮಂಗಳೂರು- ಬೆಂಗಳೂರು ರೈಲನ್ನೇ ಕಾಯಬೇಕು. ಹೊಸ ರೈಲಿನಿಂದ ವಾರದಲ್ಲಿ ಮೂರು ದಿನ ರಾತ್ರಿ 7 ಗಂಟೆಗೆ ಸಂಚರಿಸಬಹುದು.

ಪ್ರಸ್ತುತ ಪ್ಯಾಸೆಂಜರ್‌ ರೈಲು
ಪ್ರಸ್ತುತ ಪ್ರತೀ ದಿನ ಮುಂಜಾನೆ 5.45ಕ್ಕೆ ಮಂಗಳೂರಿಗೆ ಹೊರಡುವ ಪ್ಯಾಸೆಂಜರ್‌ ರೈಲು 6.40ಕ್ಕೆ ಪುತ್ತೂರು ತಲುಪಿ, 7.40ಕ್ಕೆ ಅಲ್ಲಿಂದ ಹೊರಟು 9.15ಕ್ಕೆ ಮಂಗಳೂರಿಗೆ ಆಗಮಿಸಲಿದೆ. ಬೆಳಗ್ಗೆ 10.10ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಪ್ಯಾಸೆಂಜರ್‌ ರೈಲು ಮಧ್ಯಾಹ್ನ 1.30ಕ್ಕೆ ಸುಬ್ರಹ್ಮಣ್ಯ ತಲುಪುತ್ತದೆ. 1.40ಕ್ಕೆ ಅಲ್ಲಿಂದ ಹೊರಡುವ ರೈಲು ಸಂಜೆ 4.15ಕ್ಕೆ ಮಂಗಳೂರು ಸೆಂಟ್ರಲ್‌ಗೆ ಆಗಮಿಸುತ್ತದೆ. ಸಂಜೆ 6.20ಕ್ಕೆ ಮಂಗಳೂರಿನಿಂದ ಹೊರಡುವ ಪ್ಯಾಸೆಂಜರ್‌ ರೈಲು 7.30ಕ್ಕೆ ಪುತ್ತೂರು ತಲುಪಿ ಅಲ್ಲಿಂದ ರಾತ್ರಿ 8.10ಕ್ಕೆ ಹೊರಟು, ರಾತ್ರಿ 9.30ಕ್ಕೆ ಮಂಗಳೂರಿಗೆ ಆಗಮಿಸಲಿದೆ.

ಇನ್ನೂ ಇದೆ ಹೊಸ ನಿರೀಕ್ಷೆ!
ಹೊಸ ರೈಲು ಸೇವೆ ಆರಂಭವಾಗುವ ಮಧ್ಯೆಯೇ, ಹಗಲಿನಲ್ಲಿ ಇಲಾಖೆಯಿಂದ ಮಂಗಳೂರು- ಬೆಂಗಳೂರು ಮಧ್ಯೆ ಮತ್ತೊಂದು ರೈಲು ಓಡಾಟ ಆರಂಭಿಸುವ ಸೂಚನೆ ದೊರಕಿರುವು ಹೊಸ ನಿರೀಕ್ಷೆ ಮೂಡಿಸಿದೆ. 

Advertisement

ಮಂಗಳೂರಿನಿಂದ ಮಡ್‌ಗಾಂವ್‌ ಸೇರಿದಂತೆ ವಿವಿಧ ಭಾಗಗಳಿಗೆ ಈಗಾಗಲೇ ಇರುವ ಇಂಟರ್‌ಸಿಟಿ ಮಾದರಿಯಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ಹೊಸ ಇಂಟರ್‌ಸಿಟಿ ರೈಲು ಆರಂಭಿಸುವುದು ರೈಲ್ವೇ ಇಲಾಖೆಯ ಉದ್ದೇಶ.

ಸದ್ಯ ಇದಕ್ಕೆ ಒಪ್ಪಿಗೆ ಕೂಡ ದೊರಕಿದೆ ಎಂದು ಸಂಸದ ನಳಿನ್‌ ಅವರೇ ತಿಳಿಸಿದ್ದಾರೆ. ಈ ಮೂಲಕ ಕರಾವಳಿಗೆ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ.

ಟಿಕೆಟ್‌ ದರ ತುಸು ದುಬಾರಿ
ಪ್ಯಾಸೆಂಜರ್‌ ರೈಲು, ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್‌ ದರ ತುಸು ದುಬಾರಿ ಇದೆ. ಸದ್ಯ ಪ್ಯಾಸೆಂಜರ್‌ ರೈಲಿನಲ್ಲಿ ಮಂಗಳೂರಿನಿಂದ ಬಂಟ್ವಾಳಕ್ಕೆ 10 ರೂ. ಟಿಕೆಟ್‌ ದರವಿದ್ದರೆ ನೂತನ ರೈಲಿನ ದರ 30 ರೂ. ಇರಲಿದೆ. ಕಬಕ ಪುತ್ತೂರಿಗೆ 15 ರೂ (ಪ್ಯಾಸೆಂಜರ್‌ ರೈಲು) ಇದ್ದರೆ, ಹೊಸ ರೈಲಿನ ಟಿಕೆಟ್‌ ದರ 30 ರೂ. ಅಂದರೆ, 50 ಕಿ.ಮೀ ವ್ಯಾಪ್ತಿಗೆ ಎಕ್ಸ್ ಪ್ರಸ್‌ ರೈಲಿನಲ್ಲಿ ಏಕ ದರವಿರುತ್ತದೆ. ಇನ್ನು ಸುಬ್ರಹ್ಮಣ್ಯಕ್ಕೆ ಪ್ಯಾಸೆಂಜರ್‌ ರೈಲಿನಲ್ಲಿ 25 ರೂ. ಇದ್ದರೆ ಹೊಸ ರೈಲಿನಲ್ಲಿ ಟಿಕೆಟ್‌ ದರ 50 ರೂ. ಆಗಿರಲಿದೆ.

ರೈಲಿನ ಸಮಯಕ್ಕೆ  ಆರಂಭದಲ್ಲಿ ವಿರೋಧ ಸಲ್ಲದು
ಬೆಂಗಳೂರಿನಿಂದ ಹೊಸ ರೈಲು ಸಂಜೆ ಹೊರಡುವುದರಿಂದ ಕೆಲವರಿಗೆ ಸಮಸ್ಯೆ ಆಗಬಹುದು. ಆದರೆ ಕರಾವಳಿ ಭಾಗಕ್ಕೆ ಹೊಸದಾಗಿ ರೈಲು ಸಿಗುತ್ತಿದೆ ಎಂಬ ಸಂತೋಷದಿಂದ ಈ ಸೇವೆಯನ್ನು ಒಪ್ಪಿಕೊಳ್ಳಬೇಕು. ಆ ಮೂಲಕ ರೈಲು ಆರಂಭವಾದ ಕೆಲವು ದಿನಗಳ ಅನಂತರ ಈ ರೈಲಿನ ಸಂಚಾರ ಸಮಯ ಬದಲಾವಣೆ ಮಾಡಲು ಅವಕಾಶವಿದೆ.
– ಹನುಮಂತ ಕಾಮತ್‌, ಅಧ್ಯಕ್ಷರು, ಪಶ್ಚಿಮ
ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ

ಬಹು ಉಪಯೋಗಿ
ಮಂಗಳೂರು-ಬೆಂಗಳೂರು ಹೊಸ ರೈಲು ಆರಂಭವಾಗಿರುವುದರಿಂದ ಬೆಂಗಳೂರು ಪ್ರಯಾಣಿಕರಿಗೆ ಹಾಗೂ ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಬಹಳಷ್ಟು ಲಾಭವಾಗಲಿದೆ. ನಿತ್ಯ ಪ್ರಯಾಣಿಸುವವರಿಗೆ ಹೊಸ ಅವಕಾಶ ದೊರಕಿದಂತಾಗಿದೆ. ಜತೆಗೆ ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸುವ ಕಾರ್ಯವೂ ನಡೆಯಬೇಕಿದೆ.
– ಸುದರ್ಶನ ಪುತ್ತೂರು
ಸಂಚಾಲಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ
ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು

ಸುಬ್ರಹ್ಮಣ್ಯದಲ್ಲಿ ತಂಗಲಿ
ಬೆಂಗಳೂರಿಗೆ ಹೊರಡುವ ಹೊಸ ರೈಲಿನ ಸಮಯದಲ್ಲಿ ಬದಲಾವಣೆ ಮಾಡಬೇಕಿದೆ. ಜತೆಗೆ, ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ರಾತ್ರಿ ಸುಬ್ರಹ್ಮಣ್ಯದಲ್ಲಿ ತಂಗಿ ಬೆಳಗ್ಗೆ 6.30ಕ್ಕೆ ಹೊರಟು ಮಂಗಳೂರು ಸೆಂಟ್ರಲ್‌ಗೆ 8.45ಕ್ಕೆ ಬಂದರೆ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮೀಟರ್‌ ಗೇಜ್‌ ಇರುವಾಗ ರಾತ್ರಿ ಸುಬ್ರಹ್ಮಣ್ಯದಲ್ಲಿ ತಂಗುತ್ತಿತ್ತು.
– ಗೋಪಾಲಕೃಷ್ಣ ಭಟ್‌
ರೈಲ್ವೇ ಹೋರಾಟಗಾರರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next