ಬನ್ನೂರು: ನನ್ನ ಐದು ವರ್ಷದ ಅವಧಿಯಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸಮಗ್ರ ಅಭವೃದ್ಧಿ ಮಾಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಪಟ್ಟಣದ ಸಮೀಪದ ಯಾಚೇನಹಳ್ಳಿಯಲ್ಲಿ ಮತಪ್ರಚಾರ ಮಾಡಿದರು.
ಯಾರೂ ನನಗೆ ಹೇಳದೆ ಇದ್ದರೂ, ಎಂ.ಎಂ.ರಸ್ತೆಯನ್ನು ರಾಷ್ಟ್ರೀಯ ರಸ್ತೆಯಾಗಿ ಮಾಡಿದೆ. ಕಾವೇರಿ ನದಿಗೆ ಮತ್ತೊಂದು ಹೊಸ ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ. ಬನ್ನೂರು ಹೆಗ್ಗೆರೆಯನ್ನು ಮಾದರಿ ಕೆರೆಯಾಗಿ ಪರಿವರ್ತಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ರೈತರ ಬವಣೆ ಅರಿತು ಕಾಲುವೆಗಳನ್ನು ಮೇಲ್ದರ್ಜೆಗೇರಿಸಿ ವ್ಯವಸಾಯಕ್ಕೆ ಅನುಕೂಲ ಕಲ್ಪಸಿಕೊಡಲಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಹಿನ್ನೆಡೆ: ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಕಾರಣ ಅವರ ಅಧಿಕಾರದಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ 20 ವರ್ಷ ಹಿಂದೆ ಸರಿದಿದೆ. ಹಾಗೆಯೇ ಜೆಡಿಎಸ್ ಕೂಡ ಈ ಬಾರಿ ಬಹುಮತ ಪಡೆಯುವುದಿಲ್ಲ. ಕಳೆದ ಬಾರಿ 40 ಶಾಸಕರಿದ್ದು, ಈ ಬಾರಿ 12 ಜನ ಬಿಟ್ಟು 28 ಜನರಿದ್ದಾರೆ. ಅದರಲ್ಲೂ ಅವರೆಲ್ಲರೂ ಈ ಬಾರಿ ಗೆಲುವು ಪಡೆಯುತ್ತಾರೆ ಎನ್ನುವಂತ ಸಂಶಯವಿದೆ ಎಂದರು.
ಒಗ್ಗಟ್ಟಿನಿಂದ ಕೆಲಸ ಮಾಡಿ: ನಾವೆಲ್ಲರೂ ರಾಜಕೀಯವಾಗಿ ಯೋಚನೆ ಮಾಡಬೇಕು. ಇಲ್ಲಿ ಜಾತಿ, ಧರ್ಮ ಮುಖ್ಯ ಅಲ್ಲ. ಅಭಿವೃದ್ಧಿ ಮುಖ್ಯ. ಎಲ್ಲ ಧರ್ಮೀಯರು ಶಾಂತಿಯುತವಾಗಿ ಬದುಕುವುದು ಮುಖ್ಯ. ಈಗ ಮಾತನಾಡುವ ಜೆಡಿಎಸ್ ಮತ್ತು ಬಿಜೆಪಿ ಕಳೆದ ಹತ್ತು ವರ್ಷಗಳಿಂದ ಯಾವುದೆ ಅಭಿವೃದ್ಧಿಯನ್ನು ಮಾಡಿಲ್ಲ. ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಭಿವೃದ್ಧಿಯೇ ಗುರಿ ಎಂದು ತಿಳಿದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಮತ್ತೂಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಮನವಿ ಮಾಡಿದರು.
ಪ್ರಚಾರ ಸಮಿತಿ ಅಧ್ಯಕ್ಷ ವೈ.ಎನ್.ಶಂಕರೇಗೌಡ ಮಾತನಾಡಿ, ಪ್ರತಿ ಗ್ರಾಮದಲ್ಲಿನ ಸಮಸ್ಯೆ ಅರಿತು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಕೆಲಸವನ್ನು ಯಾರು ಅಲ್ಲಗಳೆಯುವಂತಿಲ್ಲ. ಮಹದೇವಪ್ಪ ಶಾಸಕರಾಗಿ, ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ರಾಜ್ಯದ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸಿ ರಾಷ್ಟ್ರಮಟ್ಟದಲ್ಲಿ ಉತ್ತಮ ಲೋಕೋಪಯೋಗಿ ಸಚಿವ ಎಂದು ಹೆಸರು ಮಾಡಿರುವುದು ಅವರ ಉತ್ತಮ ಕೆಲಸಕ್ಕೆ ಸಂದ ಗೌರವ ಎಂದರು.
ಈ ವೇಳೆ ಪುರಸಭಾ ಮಾಜಿ ಅಧ್ಯಕ್ಷ ಪದ್ಮನಾಭ್, ಮುನಾವರ ಪಾಷಾ, ಅಜೀಜುಲ್ಲಾ, ಸುನಿಲ್‌ಬೋಸ್, ಅನಿಲ್‌ಬೋಸ್, ಲಕ್ಷ್ಮೀನಾರಾಯಣ್, ಗೋಪಾಲ್, ಜಿಪಂ ಸದಸ್ಯ ಮಂಜುನಾಥ, ಚಾಮನಹಳ್ಳಿ ತಿಮ್ಮೇಗೌಡ, ಮಾಜಿ ಶಾಸಕ ಎಸ್.ಕೃಷ್ಣಪ್ಪ, ಶ್ರೀನಿವಾಸ್, ರವೀಂದ್ರ ಕುಮಾರ್, ಸಹಕಾರ ಸಂಘದ ಉಪಾಧ್ಯಕ್ಷ ಕುಚೇಲ, ಪುರಸಭಾ ಸದಸ್ಯ ಮೂರ್ತಿ, ಬಸುರಾಜು,ಲೋಕೇಶ್, ವೀಣಾ, ಶಿವಮೂರ್ತಿ, ಬೈರವಮೂರ್ತಿ, ಅಶೋಕ್, ಎ.ಎನ್.ಸ್ವಾಮಿ, ಡಾ.ಮಹದೇವು, ಪುರಸಭಾ ಉಪಾಧ್ಯಕ್ಷ ರಾಮಲಿಂಗೇಗೌಡ ಉಪಸ್ಥಿತರಿದ್ದರು.